ಬೆಂಗಳೂರು: ಸಚಿವ ನಾಗೇಂದ್ರ ರಾಜೀನಾಮೆಗೆ ಹೆಚ್ಚುತ್ತಿರುವ ಒತ್ತಡದ ಹಿನ್ನೆಲೆಯಲ್ಲಿ ದೆಹಲಿಗೆ ಹಾರಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗುರುವಾರ ಪಕ್ಷದ ವರಿಷ್ಠ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ವಾಸ್ತವ ಸ್ಥಿತಿ ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
ಸದನದಲ್ಲಿ ಪ್ರತಿಪಕ್ಷಗಳ ನಿರಂತರ ಪ್ರತಿಭಟನೆ, ಅದರಿಂದ 2 ದಿನ ಮೊಟಕುಗೊಂಡ ಮುಂಗಾರು ಅಧಿವೇಶನ, ಬಿಜೆಪಿ ನಡೆಸಲಿರುವ ಬಳ್ಳಾರಿ ಪಾದಯಾತ್ರೆ ಸೇರಿದಂತೆ ನಾಗೇಂದ್ರ ಸಂಪುಟ ಸೇರ್ಪಡೆ ಮತ್ತು ಈವರೆಗಿನ ರಾಜಕೀಯ ಬೆಳವಣಿಗೆಗಳ ಕುರಿತು ಪಕ್ಷದ ಅಧಿನಾಯಕರಿಗೆ ಸಿಎಂ ವರದಿ ಒಪ್ಪಿಸಿದ್ದಾರೆ. ಎಲ್ಲವನ್ನೂ ಆಲಿಸಿದ ವರಿಷ್ಠರು, ನಾಗೇಂದ್ರ ರಾಜೀನಾಮೆಗೆ ಪರೋಕ್ಷವಾಗಿ 'ಗ್ರೀನ್ ಸಿಗ್ನಲ್' ನೀಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ನಾಗೇಂದ್ರ ಕೈಬಿಟ್ಟರೆ ಸಾಧಕ-ಬಾಧಕ ಚರ್ಚೆ:
ಈ ವೇಳೆ ನಾಗೇಂದ್ರ ಅವರನ್ನು ಸಂಪುಟದಿಂದ ಕೈಬಿಟ್ಟರೆ ಮತ್ತು ಮುಂದುವರಿಸಿದರೆ ಆಗಬಹುದಾದ ಪರಿಣಾಮಗಳ ಕುರಿತು ಚರ್ಚೆ ನಡೆಯಿತು. ಬಿಜೆಪಿ ಪಾದಯಾತ್ರೆ ಮಾಡುವುದರಿಂದ ಪಕ್ಷದ ವರ್ಚಸ್ಸಿಗೆ ಆಗಲಿರುವ 'ಡ್ಯಾಮೇಜ್' ಮತ್ತಿತರ ಅಂಶಗಳೂ ಪ್ರಸ್ತಾಪವಾದವು. ಅಕಸ್ಮಾತ್ ಕೈಬಿಡುವುದಾದರೆ ಪರ್ಯಾಯಗಳೇನು? ಬಿಜೆಪಿ ಅವಧಿಯಲ್ಲಿ ಮತ್ತು ಬಿಜೆಪಿ ಆಡಳಿತ ಇರುವ ವಿವಿಧ ರಾಜ್ಯಗಳಲ್ಲಿ ಅನೇಕ ಸಚಿವರು ಪ್ರಕರಣಗಳನ್ನು ಎದುರಿಸುತ್ತಿರುವ ಬಗ್ಗೆ ಗಮನ ಸೆಳೆದು ಸಮರ್ಥನೆಗಳನ್ನು ನೀಡಲಾಯಿತು ಎನ್ನಲಾಗಿದೆ.
ಸುರ್ಜೇವಾಲ ಜತೆಗೂ ಸಿಎಂ ಸಮಾಲೋಚನೆ
ರಾಹುಲ್ ಭೇಟಿ ಬಳಿಕ ಡಿ.ಕೆ. ಶಿವಕುಮಾರ್ ಅವರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ನಾಗೇಂದ್ರ ಸಂಪುಟ ಸೇರ್ಪಡೆ ಬೆನ್ನಲ್ಲೇ ನಡೆದ ರಾಜಕೀಯ ಬೆಳವಣಿಗೆಗಳು, ರಾಹುಲ್ ಗಾಂಧಿ ಅವರೊಂದಿಗಿನ ಚರ್ಚೆ ಹಾಗೂ ಅವರು ನೀಡಿದ ನಿರ್ದೇಶನಗಳ ಬಗ್ಗೆ ಚರ್ಚೆ ನಡೆದವು ಎಂದು ಹೇಳಲಾಗಿದೆ.
ಸಿಎಂ ದೆಹಲಿ ಭೇಟಿಗೆ ಸಚಿವ ಸತೀಶ ಜಾರಕಿಹೊಳಿ ಕೂಡ ಸಾಥ್ ನೀಡಿದ್ದು ವಿಶೇಷ. ಅದೇ ವಾಲ್ಮೀಕಿ ಸಮುದಾಯವನ್ನು ಪ್ರತಿನಿಧಿಸುವ ಸತೀಶ ಜಾರಕಿಹೊಳಿ, ತೆರವಾಗಬಹುದಾದ ಸ್ಥಾನಕ್ಕೆ ಅದೇ ಸಮುದಾಯದ ಮತ್ತು ಅದೇ ಜಿಲ್ಲೆಯವರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಒತ್ತಡ ಅವರದ್ದಾಗಿದೆ ಎನ್ನಲಾಗಿದೆ.
ಆದರೆ, ಈ ಎಲ್ಲ ಬೆಳವಣಿಗೆಗಳ ನಡುವೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ದೆಹಲಿಯಲ್ಲಿ ಇಲ್ಲದ ಕಾರಣ ಭೇಟಿ ಮಾಡಲು ಸಾಧ್ಯವಾಗಿಲ್ಲ. ಈ ಇಬ್ಬರೂ ದೆಹಲಿಗೆ ಹಿಂತಿರುಗಿದ ಬಳಿಕ ಮತ್ತೆ ಸಿಎಂ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ಆಗ ಇದು ತಾರ್ಕಿಕ ಅಂತ್ಯ ಕಾಣಬಹುದು ಎಂದು ಹೇಳಲಾಗಿದೆ.
ನಾಗೇಂದ್ರ ತ್ಯಾಗ ಬಗ್ಗೆ ಸಿಎಂ ಸುಳಿವು
ದೆಹಲಿಯಲ್ಲಿ ಸ್ವತಃ ಸಿಎಂ ನೀಡಿದ ಹೇಳಿಕೆ ಕೂಡ ಇದಕ್ಕೆ ಪುಷ್ಟಿ ನೀಡುವಂತಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಪಕ್ಷದ ಹಿತಕ್ಕಾಗಿ ಎಲ್ಲ ತ್ಯಾಗಕ್ಕೂ ಅವರು (ನಾಗೇಂದ್ರ) ಸಿದ್ಧರಿದ್ದಾರೆ. ಅದನ್ನು ಅವತ್ತೇ ಅವರು ನನಗೆ ಹೇಳಿದ್ದಾರೆ. ಹಿಂದೆಯೂ ಅದನ್ನು ಮಾಡಿದ್ದಾರೆ. ವಾಸ್ತವಾಂಶದ ವಿವರಣೆಯನ್ನು ನಾಯಕರ ಮುಂದಿಟ್ಟಿದ್ದೇನೆ. ಹೈಕಮಾಂಡ್ ಎಲ್ಲವನ್ನೂ ನಿರ್ಧರಿಸಲಿದೆ' ಎಂದು ಹೇಳಿದರು.
'ಅವರು ನಮ್ಮ ಪಕ್ಷಕ್ಕೆ ಅತ್ಯಂತ ನಿಷ್ಠರು. ಆತ ನಮ್ಮ ಪಕ್ಷಕ್ಕೆ ಒಂದು ದೊಡ್ಡ ಆಸ್ತಿ. ನಾಲ್ಕು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಪಕ್ಷಕ್ಕೆ ನಿಷ್ಠಾವಂತ ನಾಯಕ. ಅವರದ್ದೇನೂ ತಪ್ಪಿಲ್ಲ ಎನ್ನುವುದು ನಮಗೆ ಗೊತ್ತಿದೆ. ಆದರೆ, ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ. ಅಷ್ಟಕ್ಕೂ ಕೇಂದ್ರದ ಬಿಜೆಪಿ ನಾಯಕರು ಮತ್ತು ವಿವಿಧ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಅಲ್ಲಿರುವ ನಾಯಕರ ಮೇಲೂ ಆರೋಪಗಳಿಲ್ಲವೇ? ನಾವು ಅಧಿಕಾರದಲ್ಲಿರುವುದನ್ನು ಬಿಜೆಪಿಗೆ ಸಹಿಸಲು ಆಗುತ್ತಿಲ್ಲ. ಅದೇನೇ ಇರಲಿ, ನಮ್ಮ ಪಕ್ಷಕ್ಕೆ ಏನೇನು ಬೇಕೋ ಅದೆಲ್ಲವನ್ನೂ ನಮ್ಮ ನಾಯಕರೊಂದಿಗೆ ಚರ್ಚೆ ಮಾಡಿದ್ದೇನೆ' ಎಂದು ತಿಳಿಸಿದರು.
ಇಷ್ಟೆಲ್ಲ ಸಮಸ್ಯೆ ಇರುವಾಗ ಯಾಕೆ ಸೇರಿಸಿಕೊಂಡಿರಿ: ಡಿಕೆಗೆ ರಾಹುಲ್ ಪ್ರಶ್ನೆ
ಈ ಸುದೀರ್ಘ ಚರ್ಚೆಯಲ್ಲಿ ಇಷ್ಟೊಂದು ಸಮಸ್ಯೆ ಇದೆ ಎಂದಾಗ ಸಂಪುಟಕ್ಕೆ ಸೇರಿಸಿಕೊಂಡಿದ್ದಾದರೂ ಯಾಕೆ? ಎಲ್ಲವೂ ಸುಲಲಿತವಾಗಿ ನಡೆಯುತ್ತಿರುವಾಗ ಇದೆಲ್ಲ ಬೇಕಿತ್ತಾ? ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. ಆಗ, ನಾಗೇಂದ್ರ ಮೇಲಿನ ಆರೋಪಗಳಿಗೆ 'ಕ್ಲೀನ್‌ಚಿಟ್' ಸಿಕ್ಕಿರುವುದು, ಅಲ್ಲದೆ ಜಾಮೀನು ದೊರೆತಿರುವುದು, ಜಾತಿ ಸಮೀಕರಣ ಮತ್ತಿತರ ಸಮಜಾಯಿಷಿಗಳನ್ನು ಸಿಎಂ ನೀಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಕೆಲಹೊತ್ತಿನ ಚರ್ಚೆ ಬಳಿಕ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ರಾಹುಲ್ ಗಾಂಧಿ ನಿರ್ದೇಶನ ನೀಡಿದ್ದಾರೆ ಎಂದೂ ಹೇಳಲಾಗಿದೆ.
ಎಲ್ಲ ತ್ಯಾಗಕ್ಕೂ ಸಿದ್ಧ:
ಪಕ್ಷದ ಹಿತಕ್ಕಾಗಿ ಎಲ್ಲ ತ್ಯಾಗಕ್ಕೂ ಅವರು (ನಾಗೇಂದ್ರ) ಸಿದ್ಧರಿದ್ದಾರೆ. ಅದನ್ನು ಅವತ್ತೇ ಅವರು ನನಗೆ ಹೇಳಿದ್ದಾರೆ. ಹಿಂದೆಯೂ ಅದನ್ನು ಮಾಡಿದ್ದಾರೆ. ವಾಸ್ತವಾಂಶದ ವಿವರಣೆಯನ್ನು ನಾಯಕರ ಮುಂದಿಟ್ಟಿದ್ದೇನೆ. ಹೈಕಮಾಂಡ್ ಎಲ್ಲವನ್ನೂ ನಿರ್ಧರಿಸಲಿದೆ. - ಡಿ.ಕೆ.ಶಿವಕುಮಾರ್, ಸಿಎಂ

