ಬೆಂಗಳೂರು: ಸಚಿವ ಸ್ಥಾನಕ್ಕಾಗಿ ಯಾವುದೇ ಶಾಸಕರ ಬೆಂಬಲಿಗರು ಒತ್ತಡ ಹೇರಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ ನೀಡಿದ್ದಾರೆ.
ಶಾಸಕ ವಿಜಯಾನಂದ ಕಾಶಪ್ಪನವರ ಅವರಿಗೆ ಸಚಿವ ಸ್ಥಾನ ನೀಡುವಂತೆ ಸಾವಿರಕ್ಕೂ ಹೆಚ್ಚು ಬೆಂಬಲಿಗರು ಗೃಹ ಕಚೇರಿ 'ಕೃಷ್ಣಾ'ದಲ್ಲಿ ಭೇಟಿಯಾದಾಗ ಈ ಪ್ರತಿಕ್ರಿಯೆ ನೀಡಿದರು.
ಸಚಿವ ಸ್ಥಾನದ ಬೇಡಿಕೆ ಹಿಡಿದು ಇನ್ನು ಮುಂದೆ ಯಾರೂ ಬರಬಾರದು. ಎಲ್ಲ ಶಾಸಕರಿಗೂ ಸಚಿವರಾಗುವ ಆಸೆಯಿರುವುದು ಸಹಜ. ಆದರೆ, ಜಾತಿ ಮತ್ತು ಪ್ರಾದೇಶಿಕ ಸಮತೋಲನವನ್ನು ಪರಿಗಣಿಸಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ವೈಯಕ್ತಿಕ ಆಕಾಂಕ್ಷೆಗಳಿಗಿಂತ, 2028ರ ಚುನಾವಣೆಯಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದೇ ನಮ್ಮೆಲ್ಲರ ಮುಖ್ಯ ಗುರಿಯಾಗಬೇಕು ಎಂದರು.

