Dailyhunt Logo
  • Light mode
    Follow system
    Dark mode
    • Play Story
    • App Story
ಸಜ್ಜನ್‌ ಕುಮಾರ್‌ ಮನೆಗೆ ಬಿಜೆಪಿ ಸಂಸದರ ಭೇಟಿ: ವಿವರಣೆ ಕೇಳಿದ ನಿತಿನ್ ನಬೀನ್

ಸಜ್ಜನ್‌ ಕುಮಾರ್‌ ಮನೆಗೆ ಬಿಜೆಪಿ ಸಂಸದರ ಭೇಟಿ: ವಿವರಣೆ ಕೇಳಿದ ನಿತಿನ್ ನಬೀನ್

ವದೆಹಲಿ:1984ರ ಸಿಖ್‌ ವಿರೋಧಿ ಗಲಭೆ ಪ್ರಕರಣದ ಅಪರಾಧಿ ಸಜ್ಜನ್‌ ಕುಮಾರ್‌ ಅವರ ನಿಧನದ ಸುತ್ತಲಿನ ವಿವಾದ ಇದೀಗ ಬಿಜೆಪಿಗೂ ತಟ್ಟಿದೆ. ಕಾಂಗ್ರೆಸ್‌ ನಾಯಕ ದೀಪೇಂದರ್‌ ಹೂಡಾ ಅವರು ಸಜ್ಜನ್‌ ಕುಮಾರ್‌ ನಿಧನಕ್ಕೆ ಸಂತಾಪ ಸೂಚಿಸಿ ಟೀಕೆಗೆ ಗುರಿಯಾದ ಕೆಲವೇ ದಿನಗಳಲ್ಲಿ, ಅವರ ನಿವಾಸಕ್ಕೆ ತೆರಳಿ ಸಂತಾಪ ಸೂಚಿಸಿದ ಮೂವರು ಬಿಜೆಪಿ ಸಂಸದರು ಇದೀಗ ಪಕ್ಷದೊಳಗೇ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

1984ರ ಸಿಖ್‌ ವಿರೋಧಿ ಗಲಭೆ ಸಂದರ್ಭದಲ್ಲಿ ಐವರ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಸಜ್ಜನ್‌ ಕುಮಾರ್‌ (80) ಅವರು ಈ ತಿಂಗಳ ಆರಂಭದಲ್ಲಿ ಮೃತಪಟ್ಟಿದ್ದರು. ಅಧಿಕ ರಕ್ತದೊತ್ತಡ ಹಾಗೂ ಪಾರ್ಕಿನ್ಸನ್‌ ಕಾಯಿಲೆ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಂದ ಅವರು ಬಳಲುತ್ತಿದ್ದರು.

ಸಜ್ಜನ್‌ ಕುಮಾರ್‌ ನಿಧನಕ್ಕೆ ಹರಿಯಾಣದ ಕಾಂಗ್ರೆಸ್‌ನ ಕೆಲವು ನಾಯಕರು, ಹೂಡಾ ಸೇರಿದಂತೆ, ತಕ್ಷಣ ಸಂತಾಪ ಸೂಚಿಸಿದ್ದರು. ಆದರೆ ಸಜ್ಜನ್‌ ಕುಮಾರ್‌ ಅವರ ವಿವಾದಾತ್ಮಕ ಹಿನ್ನೆಲೆ ಹಾಗೂ ಮುಂಬರುವ ಪಂಜಾಬ್‌ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅವರ ಸಂತಾಪ ಹೇಳಿಕೆಗಳು ಟೀಕೆಗೆ ಗುರಿಯಾಗಿದ್ದವು.

ಇದೀಗ ದೆಹಲಿಯ ಬಿಜೆಪಿ ಸಂಸದರಾದ ರಾಮವೀರ್‌ ಬಿಧೂರಿ, ಯೋಗೇಂದ್ರ ಚಂದೋಲಿಯಾ ಮತ್ತು ಕಮಲ್‌ಜೀತ್‌ ಸೆಹ್ರಾವತ್‌ ಅವರು ಸಜ್ಜನ್‌ ಕುಮಾರ್‌ ಅವರ ನಿವಾಸಕ್ಕೆ ತೆರಳಿ ಸಂತಾಪ ಸೂಚಿಸಿರುವುದು ವಿವಾದಕ್ಕೆ ಕಾರಣವಾಗಿದೆ.

ಈ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್‌ ನಬೀನ್‌ ಅವರು ಮೂವರು ಸಂಸದರನ್ನು ಕರೆಸಿ ವಿವರಣೆ ಕೇಳಿದ್ದಾರೆ.ಸಂಸದರು ಅಲ್ಲಿಗೆ ಹೋಗಬಾರದಿತ್ತು ಎಂದು ನಿತಿನ್‌ ನಬೀನ್‌ ಹೇಳಿದ್ದಾರೆ.

ಸಜ್ಜನ್‌ ಕುಮಾರ್‌ ಯಾರು?
ಸಜ್ಜನ್‌ ಕುಮಾರ್‌ 1980ರಲ್ಲಿ ಕಾಂಗ್ರೆಸ್‌ ಟಿಕೆಟ್‌ನಲ್ಲಿ ದೆಹಲಿಯ ಹೊರವಲಯದ (Outer Delhi) ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸುವ ಮೂಲಕ ಸಂಸತ್‌ ಪ್ರವೇಶಿಸಿದ್ದರು. 1984ರ ಸಿಖ್‌ ವಿರೋಧಿ ಗಲಭೆಯ ಬಳಿಕವೂ ಅವರು 1991 ಮತ್ತು 2004ರಲ್ಲಿ ಕಾಂಗ್ರೆಸ್‌ ಟಿಕೆಟ್‌ನಲ್ಲಿ ಲೋಕಸಭೆಗೆ ಆಯ್ಕೆಯಾಗಿದ್ದರು.

2010ರಲ್ಲಿ 1984ರ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಸಜ್ಜನ್‌ ಕುಮಾರ್‌ ವಿರುದ್ಧ ಕೊಲೆ, ಗಲಭೆ, ಅಪರಾಧ ಸಂಚು ಹಾಗೂ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪಗಳನ್ನು ಹೊರಿಸಲಾಗಿತ್ತು.ಸಾಕ್ಷಿಗಳ ಪ್ರಕಾರ, ಸಜ್ಜನ್‌ ಕುಮಾರ್‌ ಪ್ರಚೋದನಕಾರಿ ಭಾಷಣಗಳನ್ನು ಮಾಡಿದ್ದರು. ಅಲ್ಲದೆ, ಗಲಭೆಯಲ್ಲಿ ಭಾಗವಹಿಸಿದ್ದವರಿಗೆ ತಲಾ 100 ರೂ. ಹಾಗೂ ಮದ್ಯವನ್ನು ನೀಡಿದ್ದರು ಎಂಬ ಆರೋಪವೂ ಕೇಳಿಬಂದಿತ್ತು.

Dailyhunt
Disclaimer: This content has not been generated, created or edited by Dailyhunt. Publisher: Udayavani