ಬೆಂಗಳೂರು: ಸಲೂನ್ ಮಾಲಿಕನಿಂದ ಟ್ರೇಡ್ ಲೈಸೆನ್ಸ್ ನೀಡಲು ಲಂಚದ ಬೇಡಿಕೆ ಇಟ್ಟು, ಹಣ ಪಡೆಯುವ ವೇಳೆ ವಿಡಿಯೋದಲ್ಲಿ ಸೆರೆಯಾದ ಆರೋಪದ ಬೆನ್ನಲ್ಲೇ ಜಿಬಿಎ ಆರೋಗ್ಯ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಅಮಾನತುಗೊಂಡಿದ್ದಾರೆ.
ಉತ್ತರ ಪಾಲಿಕೆಯ ಯಲಹಂಕ ವಿಭಾಗದಲ್ಲಿ ಹಿರಿಯ ಆರೋಗ್ಯ ಪರಿವೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ರೈಸ್ ಅಹ್ಮದ್ ಅಜೀಜ್ ಮಿಯಾನವರ್ ಅಮಾನತುಗೊಂಡ ಅಧಿಕಾರಿ.
ಯಲಹಂಕ ವಿಭಾಗದ ವಾರ್ಡ್ 3ರ ಕಟಿಂಗ್ ಶಾಪ್ ಮಾಲಿಕರಿಂದ ಟ್ರೇಡ್ ಲೈಸೆನ್ಸ್ ಹಾಗೂ ಆರೋಗ್ಯ ಇಲಾಖೆಯ ಪರಿಶೀಲನೆಗೆ ಸಂಬಂಧಿಸಿದ ಕೆಲಸಕ್ಕಾಗಿ 12 ಸಾವಿರ ರೂ. ಲಂಚ ಪಡೆದ ಆರೋಪ ಅವರ ಮೇಲಿದೆ. ಲಂಚದ ಹಣ ನೀಡುವ ಸಂಪೂರ್ಣ ವ್ಯವಹಾರವನ್ನು ಸಲೂನ್ ಮಾಲಿಕ ವಿಡಿಯೋದಲ್ಲಿ ದಾಖಲಿಸಿಕೊಂಡಿದ್ದು, ಬಳಿಕ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರಗೊಂಡಿತ್ತು.
12 ಸಾವಿರ ರೂ. ಕೊಟ್ಟರೆ ಕೆಲಸ ಆಗುತ್ತೆ:ವಿಡಿಯೋ
10 ಸಾವಿರ ರೂ. ತಗೊಳ್ಳಿ ಸರ್' ಎಂದು ಸಲೂನ್ ಮಾಲಿಕ ಮನವಿ ಮಾಡಿದರೂ, "12 ಸಾವಿರ ರೂ. ಕೊಟ್ಟರೆ ಮಾತ್ರ ಕೆಲಸ ಆಗುತ್ತೆ' ಎಂದು ಅಧಿಕಾರಿ ಹೇಳಿರುವುದು ವಿಡಿಯೋದಲ್ಲಿ ದಾಖಲಾಗಿದೆ ಎನ್ನಲಾಗಿದೆ. "ಲಂಚ ತೆಗೆದುಕೊಳ್ಳುವುದು ತಪ್ಪಲ್ಲವೇ' ಎಂಬ ಪ್ರಶ್ನೆಗೂ "ಇವೆಲ್ಲಾ ನಡೆಯುತ್ತೆ" ಎಂದು ಅಧಿಕಾರಿ ನೀಡಿದ ಪ್ರತಿಕ್ರಿಯೆ ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಅಧಿಕಾರಿ ಹಣ ಪಡೆದಿರುವ ಬಗ್ಗೆ ಬಂದ ದೂರು ಆಧರಿಸಿ ಉತ್ತರ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಅವರು ರೈಸ್ ಅಹ್ಮದ್ ಅಜೀಜ್ ಮಿಯಾನವರ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

