Wednesday, 03 Mar, 6.36 pm ಉದಯವಾಣಿ

ದಾವಣಗೆರೆ
ಸಮ್ಮೇಳನದಲ್ಲಿ ಸದ್ದು ಮಾಡಿದ ಕೃಷಿ ಕಾನೂನು

ದಾವಣಗೆರೆ: ದೆಹಲಿಯಲ್ಲಿನ ರೈತರ ಹೋರಾಟಕ್ಕೆ ಪ್ರತಿಯಾಗಿ ಇಡೀ ದೇಶದಲ್ಲಿ ಸಂಚಲನ ಮೂಡಿಸಿರುವ ನೂತನ ಕೃಷಿ ಕಾಯ್ದೆಗಳು ನಗರದಲ್ಲಿ ಮಂಗಳವಾರ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿಯೂ ಸದ್ದು ಮಾಡಿದವು. ಸಂಪನ್ಮೂಲ ವ್ಯಕ್ತಿಗಳು ಈ ಕಾಯ್ದೆಗಳ ಕುರಿತು ಪರ-ವಿರೋಧವಾಗಿ ವಾದ ಮಂಡಿಸಿ, ಅಕ್ಷರ ಸಮ್ಮೇಳನದಲ್ಲಿ ಅಕ್ಷರಶಃ ಗುಡುಗಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ತನ್ನ 10ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ “ನೂತನ ಕೃಷಿ ಕಾಯ್ದೆ ನಿಜಕ್ಕೂ ಹಿತಶತ್ರುವೇ?’ ಎಂಬ ವಿಷಯ ಕುರಿತು ಹಮ್ಮಿಕೊಂಡಿದ್ದ ಸಂವಾದ ಗೋಷ್ಠಿಯಲ್ಲಿ ಹಲವು ಕುತೂಹಲಕಾರಿ ಅಂಶಗಳೊಂದಿಗೆ ಸಂಪನ್ಮೂಲ ವ್ಯಕ್ತಿಗಳು ವಿಷಯ ಪ್ರತಿಪಾದನೆ ಮಾಡಿದರು.

ಈ ನೂತನ ಕೃಷಿ ಕಾಯ್ದೆಗಳು ಕೇವಲ ರೈತರೊಂದಿಗೆ ಚರ್ಚಿಸದೇ ಅದೂ ಕೊರೊನಾ ಲಾಕ್‌ಡೌನ್‌ ಸಂದರ್ಭದಲ್ಲಿ ಪಾಸ್‌ ಮಾಡಿರುವ ಬಗ್ಗೆ ಸಂವಾದದಲ್ಲಿ ಹಲವರಿಂದ ವಿರೋಧ ವ್ಯಕ್ತವಾಯಿತು. ಈ ಕಾಯ್ದೆ ಎಷ್ಟರ ಮಟ್ಟಿಗೆ ರೈತರಿಗೆ ಒಳಿತು ಎಂಬುದನ್ನು ಸರ್ಕಾರ ರೈತರೊಂದಿಗೆ ನೇರ ಚರ್ಚೆ ಮಾಡಬೇಕು. ರೈತರನ್ನು ವಿಶ್ವಾಸಕ್ಕೆ ಪಡೆದು ಕಾಯ್ದೆ ಜಾರಿಗೆ ತರಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು. ತನ್ಮೂಲಕ ಸಭಿಕರಾಗಿದ್ದ ಸಾಹಿತಿಗಳು, ಕನ್ನಡಾಭಿಮಾನಿಗಳಿಗೆ ಈ ಸಂವಾದ ಕೃಷಿ ಕಾನೂನುಗಳ ಜತೆಗೆ ರೈತರ ಸಮಸ್ಯೆ ದರ್ಶನ ಮಾಡಿಸುವಲ್ಲಿ ಯಶಸ್ವಿಯಾಯಿತು.

ಈ ಕಾನೂನು ನಿಜವಾಗಿಯೂ ರೈತಪರವೇ ಆಗಿದ್ದರೆ ಪ್ರಧಾನಿ ಮೋದಿಯವರು ಈ ಬಗ್ಗೆ ರೈತರಿಗೆ ತಿಳಿವಳಿಕೆ ನೀಡಿ ಮನವೊಲಿಸಬೇಕಿತ್ತು. ಈ ಕಾಯ್ದೆಗಳು ಜಾರಿಯಾದರೆ ನಾಲ್ಕೈದು ವರ್ಷಗಳಲ್ಲಿ ರೈತ ವರ್ಗ ದಿವಾಳಿಯಾಗುತ್ತದೆ. ರೈತ ಮಕ್ಕಳು ಭಿಕ್ಷೆ ಬೇಡಬೇಕಾಗುತ್ತದೆ. ರೈತ ಮುಖಂಡರಾದ ಎಸ್‌.ಕೆ. ಚಂದ್ರಶೇಖರ್‌, ಮುನಿಯಪ್ಪ ಇನ್ನಿತರರು ಕಾಯ್ದೆ ಕುರಿತು ತಮ್ಮ ಅಭಿಪ್ರಾಯ ಮಂಡಿಸಿ, ಈ ಬಗ್ಗೆ ಬಹಿರಂಗ ಚರ್ಚೆಯಾಗಬೇಕು ಎಂದು ಒತ್ತಾಯಿಸಿದರು.

ಮಾಜಿ ಶಾಸಕ ವೈ.ಎಸ್‌.ವಿ. ದತ್ತ ಪ್ರತಿಪಾದನೆ: ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿರುವ ಅಗತ್ಯವಸ್ತುಗಳ ಕಾಯ್ದೆ, ಕೃಷಿ ಉತ್ನನ್ನಗಳ ವ್ಯಾಪಾರ, ವ್ಯವಹಾರ ಕಾಯ್ದೆ, ಬೆಲೆ ಏರಿಕೆ ಭರವಸೆ ಮತ್ತು ಕೃಷಿ ಸೇವಾ ಕಾಯ್ದೆ, ವಿದ್ಯುತ್‌ ಕಾಯ್ದೆ ಹಾಗೂ ರಾಜ್ಯ ಸರ್ಕಾರ ತಂದಿರುವ ಭೂಸುಧಾರಣಾ ತಿದ್ದುಪಡಿ ಕಾಯ್ದೆಗಳ ಹೆಸರುಗಳು ಕೇಳಲು ಇಂಪಾಗಿದ್ದರೂ ಅವುಗಳ ಪರಿಣಾಮ ಮಾತ್ರ ಅಪಾಯಕಾರಿಯಾಗಿವೆ. ಅಗತ್ಯ ವಸ್ತುಗಳ ಪಟ್ಟಿಯಿಂದ ಆಹಾರ ಧಾನ್ಯಗಳು, ಖಾದ್ಯತೈಲಗಳು, ಎಣ್ಣೆಕಾಳುಗಳು, ಈರುಳ್ಳಿ, ಆಲೂಗಡ್ಡೆಯಂತ ವಸ್ತುಗಳನ್ನು ಹೊರಗಿಡಲಾಗಿದೆ. ಈ ಕಾನೂನನ್ನು ಈಗಲೇ ಚಿವುಟಿ ಹಾಕದಿದ್ದರೆ ಮುಂದೆ ಇದರಿಂದ ಸಾರ್ವಜನಿಕ ಆಹಾರ ವಿತರಣೆ ವ್ಯವಸ್ಥೆ ರದ್ದಾಗಬಹುದು. ಯಾರು ಎಷ್ಟಾದರೂ ಉತ್ಪನ್ನ ದಾಸ್ತಾನು ಮಾಡಿ ಕೃತಕ ಅಭಾವ ಸೃಷ್ಟಿಸಿ ದರ ಏರಿಕೆ ಮಾಡಬಹುದು. ಬೆಲೆ ಇಳಿಕೆಗೆ ಸರ್ಕಾರದ ಮೇಲೆ ನಿಯಂತ್ರಣ ತಪ್ಪಬಹುದು. ಇದರಿಂದಾದ ತೊಂದರೆಗೆ ನ್ಯಾಯಾಲಯಕ್ಕೂ ಹೋಗಲು ಆಗದು. ಇದರಿಂದ ಬಡವರು ಹೆಚ್ಚು ತೊಂದರೆಗೊಳಗಾಗುತ್ತಾರೆ. ಕೃಷಿ ಉತ್ನನ್ನಗಳ ವ್ಯಾಪಾರ, ವ್ಯವಹಾರ ಕಾಯ್ದೆಯಿಂದ ಕಾರ್ಪೋರೆಟ್‌ ಕಂಪನಿಗಳಿಗೆ ಆದ್ಯತೆ ದೊರೆತು ಅಂದಾಜು ಎಂಟು ಲಕ್ಷ ಸಣ್ಣಪುಟ್ಟ ಹಾಗೂ ಚಿಲ್ಲರೆ ವ್ಯಾಪಾರಸ್ಥರು ಬೀದಿಪಾಲಾಗುವ ಭಯವಿದೆ. ಕಾರ್ಪೋರೆಟ್‌ ಕಂಪನಿಗಳ ಒತ್ತಡಕ್ಕೆ ಮಣಿದು ಹತಾಶ ಸ್ಥಿತಿಯಲ್ಲಿ ರೈತ ಸಿಕ್ಕಷ್ಟು ದರಕ್ಕೆ ತನ್ನ ಉತ್ಪನ್ನ ಮಾರುವ ಸ್ಥಿತಿ ಬರುತ್ತದೆ. ಬೆಲೆ ಭರವಸೆ ಕಾಯ್ದೆಯಿಂದ ಕಾಪೋರೇಟ್‌ ಕಂಪನಿಗಳು ಕೃಷಿ ಭೂಮಿಯನ್ನು ಗುತ್ತಿಗೆ ಪಡೆದು, ಅದರಲ್ಲಿ ತನಗೆ ಬೇಕಾದದನ್ನು ಬೆಳೆದು ಭೂಮಿಯನ್ನು ಬಂಜರು ಮಾಡಿ ರೈತನಿಗೆ ಮರಳಿಸುವ ಸಾಧ್ಯತೆ ಇದೆ. ಗುತ್ತಿಗೆ ಕಂಪನಿ ಹೊರ ದೇಶಕ್ಕೆ ಬೇಕಾದ, ಹೆಚ್ಚು ಲಾಭ ಇರುವ ಬೆಳೆ ಬೆಳೆಯುತ್ತ ಹೋದರೆ ದೇಶದ ಆಹಾರ ಭದ್ರತೆಗೂ ಧಕ್ಕೆಯಾಗಬಹುದು. ರೈತರಿಗೆ ನೆರವಾಗುವ ಎಪಿಎಂಸಿಗಳು ಮುಚ್ಚಬಹುದು. ಲಕ್ಷಾಂತರ ಹಮಾಲಿ ಕಾರ್ಮಿಕರು ಕೆಲಸ ಕಳೆದುಕೊಳ್ಳಬಹುದು.

ಶಿಥಲೀಕರಣ ಘಟಕಗಳು, ಗೋದಾಮುಗಳು ಭೂತ್‌ ಬಂಗಲೆಗಳಾಗಬಹುದು ಇಲ್ಲವೇ ರಿಯಲ್‌ ಎಸ್ಟೆಟ್‌ ಆಸ್ತಿಗಳಾಗಬಹುದು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Udayavani
Top