ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ದೀಪಾವಳಿ ಹಬ್ಬದ ಸಡಗರದ ನಡುವೆಯೇ ರಾಜ್ಯ ಸರ್ಕಾರವು ಸಿಹಿ ಸುದ್ದಿ ನೀಡಿದೆ. ಜುಲೈ 1, 2025 ರಿಂದ ಜಾರಿಗೆ ಬರುವಂತೆ ಶೇ. 2ರಷ್ಟು ತುಟ್ಟಿಭತ್ಯೆಯನ್ನು ಹೆಚ್ಚಿಸಿ ಆದೇಶ ಹೊರಡಿಸಿದೆ. ಈ ಹೆಚ್ಚಳದಿಂದಾಗಿ, 2024ರ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ವೇತನ ಪಡೆಯುತ್ತಿರುವ ನೌಕರರ ತುಟ್ಟಿಭತ್ಯೆಯ ದರವು ಮೂಲವೇತನದ ಶೇ.
12.25 ರಿಂದ ಶೇ. 14.25ಕ್ಕೆ ಪರಿಷ್ಕೃತಗೊಂಡಿದೆ.
ಈ ಹೆಚ್ಚಳವು ರಾಜ್ಯ ಸರ್ಕಾರದ ನಿವೃತ್ತಿ ವೇತನದಾರರು, ಕುಟುಂಬ ನಿವೃತ್ತಿ ವೇತನದಾರರು ಹಾಗೂ ರಾಜ್ಯದ ಸಂಚಿತ ನಿಧಿಯಿಂದ ವೇತನ ಪಡೆಯುತ್ತಿರುವ ಅನುದಾನಿತ ಶಿಕ್ಷಣ ಸಂಸ್ಥೆಗಳ ನಿವೃತ್ತ ನೌಕರರಿಗೂ ಅನ್ವಯವಾಗಲಿದೆ. ಇದಲ್ಲದೆ, ಜಿಲ್ಲಾ ಪಂಚಾಯತ್‌ಗಳ ಪೂರ್ಣಾವಧಿ ನೌಕರರು, ವರ್ಕ್ ಚಾರ್ಜ್ ನೌಕರರು ಮತ್ತು ವಿಶ್ವವಿದ್ಯಾಲಯಗಳ ಪೂರ್ಣಾವಧಿ ನೌಕರರಿಗೂ ಈ ಆದೇಶ ಅನ್ವಯಿಸುತ್ತದೆ.
ಯುಜಿಸಿ, ಎಐಸಿಟಿಇ, ಐಸಿಎಆರ್ ವೇತನ ಶ್ರೇಣಿಯ ನೌಕರರು ಮತ್ತು ನ್ಯಾಯಾಂಗ ಅಧಿಕಾರಿಗಳಿಗೆ ಪ್ರತ್ಯೇಕ ಆದೇಶ ಹೊರಡಿಸಲಾಗುತ್ತದೆ. ತುಟ್ಟಿಭತ್ಯೆಯ ಹಿಂಬಾಕಿ ಮೊತ್ತವನ್ನು 2025ರ ಅಕ್ಟೋಬರ್ ವೇತನದ ಜೊತೆಗೆ ಪಾವತಿಸಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.

