ಉಡುಪಿ: ಸರ್ಕಾರಿ ಶಾಲಾ ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಿಸುವ ಉದ್ದೇಶದಿಂದ ಕ್ಷೀರ ಭಾಗ್ಯ ಯೋಜನೆಯ ಜತೆಗೆ ನೀಡಲಾಗುತ್ತಿದ್ದ ನವಧಾನ್ಯ ಆಧಾರಿತ ರಾಗಿ ಮಾಲ್ಟ್ ವಿತರಣೆಯು 2026 27ನೇ ಶೈಕ್ಷಣಿಕ ವರ್ಷದಿಂದ ಸಂಪೂರ್ಣ ಸ್ಥಗಿತಗೊಂಡಿದೆ. ಜತೆಗೆ ಕಳೆದ ಒಂದು ತಿಂಗಳಿನಿಂದ ಕೆಲವು ಶಾಲೆಗಳಲ್ಲಿ ಕ್ಷೀರ ಭಾಗ್ಯಕ್ಕೂ ಅಗತ್ಯವಿರುವ ಹಾಲಿನ ಹುಡಿ ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ.
ರಾಗಿ ಮಾಲ್ಟ್ ನೀಡಲು ಪ್ರತಿಯೊಂದು ಶಾಲೆಗೂ ಪ್ರತ್ಯೇಕವಾಗಿ ನವಧಾನ್ಯ ಆಧಾರಿತ ರಾಗಿ ಮಾಲ್ಟ್ ಹುಡಿ ಪೂರೈಸಲಾಗುತ್ತಿತ್ತು. ಕ್ಷೀರ ಭಾಗ್ಯದಡಿ ಸಿದ್ಧಪಡಿಸಲಾಗುವ ಹಾಲಿಗೆ ರಾಗಿ ಮಾಲ್ಟ್ ಹುಡಿ ಬೆರೆಸಿ ಮಕ್ಕಳಿಗೆ ವಿತರಿಸಲಾಗುತ್ತಿತ್ತು.
ರಾಜ್ಯದಲ್ಲಿ 2013ರಿಂದ ಕ್ಷೀರ ಭಾಗ್ಯ ಯೋಜನೆ ಜಾರಿಯಲ್ಲಿದೆ. ಶಾಲಾ ಮಕ್ಕಳಿಗೆ ಹಾಲು ನೀಡುವ ಮೂಲಕ ಅವರ ಪೌಷ್ಟಿಕಾಂಶದ ಮಟ್ಟ ಹೆಚ್ಚಿಸುವುದು ಯೋಜನೆಯ ಪ್ರಮುಖ ಉದ್ದೇಶ. 2023ರಲ್ಲಿ ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಕ್ಷೀರ ಭಾಗ್ಯದ ಜತೆಗೆ ರಾಗಿ ಮಾಲ್ಟ್ ವಿತರಿಸಲು ನಿರ್ಧರಿಸಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಸಚಿವ ಮಧು ಬಂಗಾರಪ್ಪ ಅವರು ರಾಗಿ ಮಾಲ್ಟ್ ವಿತರಣೆಗೆ ಚಾಲನೆ ನೀಡಿದ್ದರು. ಈಗ ತಾಂತ್ರಿಕ ಕಾರಣದಿಂದ ಪೂರೈಕೆ ಸ್ಥಗಿತಗೊಂಡಿದೆ.
ರಾಗಿ ಮಾಲ್ಟ್‌ಗೆ ಅಗತ್ಯವಿರುವ ಹುಡಿಯನ್ನು ಖಾಸಗಿ ಸಂಸ್ಥೆಯೊಂದು ಕೆಎಂಎಫ್‌ಗೆ ಪೂರೈಸುತ್ತಿತ್ತು. ಕೆಎಂಎಫ್ ಮೂಲಕ ರಾಗಿ ಮಾಲ್ಟ್ ಹುಡಿಯ ಜತೆಗೆ ಹಾಲಿನ ಹುಡಿಯನ್ನೂ ಶಾಲೆಗಳಿಗೆ ಸರಬರಾಜು ಮಾಡಲಾಗುತ್ತಿತ್ತು. ಒಂದು ತಿಂಗಳನಿಂದ ಅದು ಕೂಡ ಸಮರ್ಪಕವಾಗಿ ಪೂರೈಕೆ ಆಗುತ್ತಿಲ್ಲ. ಈ ಬಗ್ಗೆ ಶಾಲೆಯಿಂದ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಹಾಲಿನ ಹುಡಿ ಪೂರೈಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಅಲ್ಲಿಯವರೆಗೆ ಸ್ಥಳೀಯ ಬೇರೆ ಶಾಲೆಗಳಲ್ಲಿ ಹೆಚ್ಚುವರಿ ದಾಸ್ತಾನು ಇದ್ದಲ್ಲಿ ಹೊಂದಿಸಿಕೊಳ್ಳಲು ಸೂಚನೆ ನೀಡಲಾಗಿದೆ. ಆದರೆ ಯಾವ ಶಾಲೆಯವರೂ ನೀಡಲು ಸಿದ್ಧವಿಲ್ಲ. ಅನೇಕ ಶಾಲೆಗಳಲ್ಲಿ ಹುಡಿ ಖಾಲಿಯಾಗಿದೆ ಎಂದು ಮುಖ್ಯ ಶಿಕ್ಷಕರು ತಿಳಿಸಿದ್ದಾರೆ.
ಪರ್ಯಾಯ ವ್ಯವಸ್ಥೆ ಕಲ್ಪಿಸಲಿ:
ಶಾಲಾ ಮಕ್ಕಳ ಪೌಷ್ಟಿಕತೆ ಹೆಚ್ಚಿಸುವ ಉದ್ದೇಶದಿಂದ ಜಾರಿಗೊಳಿಸಲಾದ ಕ್ಷೀರ ಭಾಗ್ಯ ಹಾಗೂ ರಾಗಿ ಮಾಲ್ಟ್ ಯೋಜನೆ ವ್ಯತ್ಯಯ ಆಗದಂತೆ ನೋಡಿಕೊಳ್ಳುವುದು ಸರ್ಕಾರ ಹಾಗೂ ಅಧಿಕಾರಿಗಳ ಜವಾಬ್ದಾರಿ. ಮಕ್ಕಳಿಗೆ ನಿರಂತರ ಪೂರೈಕೆ ಆಗುತ್ತಿರಬೇಕು. ಒಂದೊಮ್ಮೆ ವ್ಯತ್ಯಯವಾದರೂ ಅದಕ್ಕೆ ಸ್ಪಷ್ಟತೆ ಇರಬೇಕು ಮತ್ತು ಪರ್ಯಾಯ ವ್ಯವಸ್ಥೆಯನ್ನು ಸೂಚಿಸಬೇಕು ಎಂಬುದು ಪಾಲಕರ ಹಾಗೂ ಶಿಕ್ಷಕರ ಆಗ್ರಹವಾಗಿದೆ.
ಪ್ರಸ್ತುತ ರಾಗಿ ಮಾಲ್ಟ್ ಹುಡಿ ಪೂರೈಕೆ ಆಗುತ್ತಿಲ್ಲ. ಈ ಬಗ್ಗೆ ಕೇಂದ್ರ ಕಚೇರಿ ಗಮನಕ್ಕೂ ತಂದಿದ್ದೇವೆ. ಕ್ಷೀರ ಭಾಗ್ಯದ ಹಾಲಿನ ಹುಡಿ ಕೆಲವು ಶಾಲೆಗಳಲ್ಲಿ ಕೊರತೆ ಆಗಿರುವ ಬಗ್ಗೆ ಮಾಹಿತಿ ಇದೆ. ಸ್ಥಳೀಯ ಶಾಲೆಗಳಿಂದ ಹೊಂದಿಸಿಕೊಳ್ಳಲು ಸೂಚಿಸಿದ್ದೇವೆ. ಜತೆಗೆ ಕೆಎಂಎಫ್‌ನಿಂದ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ಶೀಘ್ರ ಎಲ್ಲ ಶಾಲೆಗಳಿಗೂ ತಲುಪಲಿದೆ - ಗಣಪತಿ, ಇಒ, ಅಕ್ಷರ ದಾಸೋಹ ವಿಭಾಗ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ, ಉಡುಪಿ
-ರಾಜು ಖಾರ್ವಿ ಕೊಡೇರಿ

