ಸಸಿಹಿತ್ಲು: ಮಳೆಗಾಲದಲ್ಲಿ ಸಮುದ್ರದ ಅಬ್ಬರ ಹೆಚ್ಚಿರುವುದರಿಂದ ಬೀಚ್‌ಗಳಿಗೆ ಹೋಗಲು ಹಲವು ನಿರ್ಬಂಧಗಳಿವೆ. ಆದರೆ, ಸಸಿಹಿತ್ಲು ಬೀಚ್‌ನ ಮುಂಡದ ಭಾಗಕ್ಕೆ ಪ್ರವಾಸಿಗರ ಆಗಮನ ಮಾತ್ರ ಕಡಿಮೆಯಾಗಿಲ್ಲ. ಲೈಫ್‌ಗಾರ್ಡ್ ಸಿಬಂದಿ ಅಪಾಯಕಾರಿ ಪ್ರದೇಶವನ್ನು ಟೇಪ್ ಅಳವಡಿಸಿ ಪ್ರವೇಶ ನಿರ್ಬಂಧಿಸಿದ್ದರೂ, ಹಲವರು ಅದನ್ನು ಉಲ್ಲಂಘಿಸಿ ಸಮುದ್ರ ತೀರದೊಳಗೆ ತೆರಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಈ ಭಾಗದಲ್ಲಿ ಪ್ರವಾಸಿಗರು ಸುರಕ್ಷಿತವಾಗಿ ನಿಲ್ಲಲು ಅಥವಾ ವಿಶ್ರಾಂತಿ ಪಡೆಯಲು ಸೂಕ್ತ ಸ್ಥಳದ ವ್ಯವಸ್ಥೆಯಿಲ್ಲ. ಅಲ್ಲದೆ, ಪ್ರವಾಸಿಗರಿಗೆ ಮಾರ್ಗದರ್ಶನ ನೀಡುವ ಪ್ರವಾಸಿ ಮಿತ್ರರು ಹಾಗೂ ಲೈಫ್ ಗಾರ್ಡ್ ಸಿಬಂದಿಗೂ ಉಳಿದುಕೊಳ್ಳಲು ಅಥವಾ ಕರ್ತವ್ಯ ನಿರ್ವಹಿಸಲು ಅಗತ್ಯ ಮೂಲ ಸೌಕರ್ಯಗಳ ಕೊರತೆ ಎದುರಾಗಿದೆ. ಮಳೆ, ಬಿಸಿಲಿನ ನಡುವೆಯೂ ಅವರು ತೆರೆದ ಪ್ರದೇಶದಲ್ಲೇ ಕರ್ತವ್ಯ ನಿರ್ವಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಗಾಳಿ ಮರ ಕುಸಿಯುವ ಭೀತಿ
ಪ್ರವಾಸೋದ್ಯಮ ಇಲಾಖೆಯ ವ್ಯಾಪ್ತಿಗೆ ಒಳಪಡುವ ಈ ಪ್ರದೇಶದಲ್ಲಿ ಗಾಳಿಮರಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ನಿರಂತರ ಮಳೆ ಹಾಗೂ ಬಿರುಗಾಳಿಯಿಂದ ಅವು ಕುಸಿದು ಬೀಳುವ ಅಪಾಯವೂ ಎದುರಾಗಿದೆ. ಇಂತಹ ಪರಿಸ್ಥಿತಿಯಲ್ಲಿಯೂ ಕೆಲವರು ಗಾಳಿ ಮಳೆಯನ್ನು ಲೆಕ್ಕಿಸದೆ ಸಮುದ್ರ ತೀರಕ್ಕೆ ಆಗಮಿಸುತ್ತಿದ್ದಾರೆ.
ಎಚ್ಚರಿಕೆ ಫಲಕ ಕೊರತೆ
ಅಪಾಯಕಾರಿ ಪ್ರದೇಶ ಎಂಬುದನ್ನು ಸ್ಪಷ್ಟವಾಗಿ ತಿಳಿಸುವ ಎಚ್ಚರಿಕೆ ಫಲಕಗಳು ಇಲ್ಲದಿರುವುದು ಮತ್ತೂಂದು ದೊಡ್ಡ ಸಮಸ್ಯೆಯಾಗಿದೆ. ಪರಿಣಾಮ, ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಬರುವ ಅನೇಕ ಪ್ರವಾಸಿಗರಿಗೆ ಪರಿಸ್ಥಿತಿಯ ಗಂಭೀರತೆ ಅರ್ಥವಾಗದೆ, ಲೈಫ್‌ಗಾರ್ಡ್ ಸಿಬಂದಿಯ ಸೂಚನೆಗಳನ್ನು ನಿರ್ಲಕ್ಷಿಸಿ ಅಪಾಯಕಾರಿ ಭಾಗದತ್ತ ತೆರಳುವ ಘಟನೆಗಳು ಮರುಕಳಿಸುತ್ತಿವೆ.
ಕಡಲ್ಕೊರೆತ ಭೀತಿ
ಪ್ರಸ್ತುತ ಸಮುದ್ರದ ಅಬ್ಬರವೂ ಅಧಿಕವಾಗಿದೆ. ಮಳೆ ಅಧಿಕವಾಗಿ ಸುರಿಯುತ್ತಿರುವ ಕಾರಣ ಸಮುದ್ರ ದಡತೀರಕ್ಕೆ ಬಂದು ಅಪ್ಪಳಿಸುತ್ತಿದೆ. ಈ ನಡುವೆ ಕಡಲ್ಕೊರೆತ ಭೀತಿಯೂ ಎದುರಾಗಿದೆ. ಇಷ್ಟೆಲ್ಲದರ ನಡುವೆ ಪ್ರವಾಸಿಗರು ನಿಯಮಾವಳಿ ಉಲ್ಲಂ ಸುತ್ತಿರುವ ಘಟನೆಗಳೂ ನಡೆಯುತ್ತಿವೆ.
ಶನಿವಾರ ಹಾಗೂ ರವಿವಾರ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಈ ಭಾಗಕ್ಕೆ ಭೇಟಿ ನೀಡುತ್ತಿದ್ದು, ಹೆಚ್ಚುವರಿ ಭದ್ರತಾ ಸಿಬಂದಿ ಜತೆಗೆ ಹೋಂಗಾರ್ಡ್ ನೇಮಕ ಮಾಡುವ ನಿಟ್ಟಿನಲ್ಲಿಯೂ ಪ್ರವಾಸೋದ್ಯಮ ಇಲಾಖೆ ಮುಂದಾಗಬೇಕು ಎಂಬುವುದು ಸ್ಥಳೀಯರ ಆಗ್ರಹ.
ಅಗತ್ಯ ಕ್ರಮಕ್ಕೆ ಆಗ್ರಹ
ಸ್ಥಳೀಯರು ಹಾಗೂ ಲೈಫ್‌ಗಾರ್ಡ್ ಸಿಬಂದಿ ಎಚ್ಚರಿಕೆ ನೀಡಿದರೂ, ಅದನ್ನು ನಿರ್ಲಕ್ಷಿಸಿ ಸೀವಾಕ್ ಪ್ರದೇಶಕ್ಕೆ ಭೇಟಿ ನೀಡುವವರ ಸಂಖ್ಯೆಯೂ ಕಡಿಮೆಯಾಗಿಲ್ಲ. ಅನಾಹುತ ಸಂಭವಿಸುವ ಮೊದಲು ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತ ಹಾಗೂ ಸಂಬಂಧಿತ ಅಧಿಕಾರಿಗಳು ಈ ಪ್ರದೇಶದಲ್ಲಿ ಶಾಶ್ವತ ಎಚ್ಚರಿಕೆ ಫಲಕಗಳನ್ನು ಅಳವಡಿಸುವುದು, ಲೈಫ್‌ಗಾರ್ಡ್ ಸಿಬಂದಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವುದು, ಪ್ರವಾಸಿಗರಿಗೆ ಸುರಕ್ಷಾ ಜಾಗೃತಿ ಮೂಡಿಸುವುದು ಹಾಗೂ ಅಪಾಯಕಾರಿ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ನಿಗಾ ವಹಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

