Dailyhunt Logo
  • Light mode
    Follow system
    Dark mode
    • Play Story
    • App Story
SAVE America Act: ಭಾರತದ ಮತದಾನ ವ್ಯವಸ್ಥೆ ಕೊಂಡಾಡಿದ ಡೊನಾಲ್ಡ್ ಟ್ರಂಪ್

SAVE America Act: ಭಾರತದ ಮತದಾನ ವ್ಯವಸ್ಥೆ ಕೊಂಡಾಡಿದ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಅಮೆರಿಕದಲ್ಲಿ ಪ್ರಸ್ತಾಪಿಸಲಾಗಿರುವ 'ಸೇವ್ ಅಮೆರಿಕ ಆಕ್ಟ್' (SAVE America Act) ಮಸೂದೆಗೆ ಬೆಂಬಲ ಗಿಟ್ಟಿಸಿಕೊಳ್ಳಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮತದಾನ ವ್ಯವಸ್ಥೆ ಮತ್ತು ಮತದಾರರ ಗುರುತಿನ ಚೀಟಿಯ ಕಡ್ಡಾಯ ನಿಯಮವನ್ನು ಉದಾಹರಣೆಯಾಗಿ ನೀಡಿದ್ದಾರೆ.

ಅಮೆರಿಕದಲ್ಲಿ ನಡೆಯುವ ಫೆಡರಲ್ ಚುನಾವಣೆಗಳಲ್ಲಿ ಅಕ್ರಮಗಳನ್ನು ತಡೆಯಲು ಮತ್ತು ಪ್ರತಿಯೊಬ್ಬ ಮತದಾರರಿಗೂ ಫೋಟೋ ಇರುವ ಗುರುತಿನ ಚೀಟಿಯನ್ನು ಕಡ್ಡಾಯಗೊಳಿಸಲು ಟ್ರಂಪ್ ಮತ್ತೊಮ್ಮೆ ಶ್ವೇತಭವನದಲ್ಲಿ ಬಲವಾದ ವಾದ ಮಂಡಿಸಿದ್ದಾರೆ.

ತಮ್ಮ 'ಟ್ರೂತ್ ಸೋಶಿಯಲ್' ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ಭಾರತದ ಮುಖ್ಯ ಸಾಂವಿಧಾನಿಕ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರೊಂದಿಗೆ ನಡೆದ ಸಂಭಾಷಣೆಯನ್ನು ನೆನಪಿಸಿಕೊಂಡಿದ್ದಾರೆ. "ಅಮೆರಿಕದಲ್ಲಿ ಯಾವುದೇ ಮಾನ್ಯತೆ ಹೊಂದಿದ ಫೋಟೋ ಐಡಿ (Photo ID) ಇಲ್ಲದೆ ಚುನಾವಣೆಗಳನ್ನು ಹೇಗೆ ನಡೆಸುತ್ತೀರಿ ಎಂದು ಭಾರತದ ಸಿಇಸಿ ಜ್ಞಾನೇಶ್ ಕುಮಾರ್ ನಮ್ಮ ಆಡಳಿತವನ್ನು ಕೇಳಿದ್ದರು" ಎಂದು ಟ್ರಂಪ್ ಬರೆದುಕೊಂಡಿದ್ದಾರೆ.

ಭಾರತದ ಇತ್ತೀಚಿನ ಸಾರ್ವತ್ರಿಕ ಚುನಾವಣೆಯಲ್ಲಿ ಒಟ್ಟು 64.6 ಕೋಟಿ ಮತದಾರರು ಭಾಗವಹಿಸಿದ್ದರು. ಇದರಲ್ಲಿ ಶೇಕಡಾ ಒಂದಕ್ಕಿಂತ ಕಡಿಮೆ ಜನರು ಮಾತ್ರ ಅಂಚೆ ಮೂಲಕ ಮತ ಚಲಾಯಿಸಿದ್ದು, ಉಳಿದ ಪ್ರತಿಯೊಬ್ಬ ಮತದಾರನೂ ಫೋಟೋ ಹೊಂದಿರುವ ಮಾನ್ಯ ಗುರುತಿನ ಚೀಟಿಯನ್ನು ತೋರಿಸಿಯೇ ಮತ ಚಲಾಯಿಸಿದ್ದಾರೆ ಎಂಬುದನ್ನು ಟ್ರಂಪ್ ಗಮನಕ್ಕೆ ತಂದಿದ್ದಾರೆ. ಹೀಗಾಗಿ ಅಮೆರಿಕ ಕೂಡ ತಕ್ಷಣವೇ 'ಸೇವ್ ಅಮೆರಿಕ ಆಕ್ಟ್' ಮಸೂದೆಯನ್ನು ಜಾರಿಗೊಳಿಸಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.

ಡೊನಾಲ್ಡ್ ಟ್ರಂಪ್ ಅವರ ಈ ನಡೆಗೆ ಭಾರತದಲ್ಲಿನ ಅಮೆರಿಕ ರಾಯಭಾರಿ ಸೆರ್ಗಿಯೊ ಗೊರ್ ಕೂಡ ಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಭಾರತದ 2024ರ ಸಾರ್ವತ್ರಿಕ ಚುನಾವಣೆಯನ್ನು ಜಾಗತಿಕ ಮಟ್ಟದ ಮಾದರಿ ಎಂದು ಕರೆದಿರುವ ಅವರು, 64.6 ಕೋಟಿ ಜನರು ಮತದಾನ ಮಾಡುವಾಗ ಪ್ರತಿಯೊಬ್ಬರಿಗೂ ಗುರುತಿನ ಚೀಟಿ ಕಡ್ಡಾಯವಾಗಿದ್ದರೆ, ಅಮೆರಿಕದಲ್ಲೂ ಅಂತಹ ವ್ಯವಸ್ಥೆ ತರುವುದು ಅತ್ಯಗತ್ಯ ಎಂದು ಹೇಳಿದ್ದಾರೆ. ಮತದಾನದ ಪಾರದರ್ಶಕತೆ ಕಾಯ್ದುಕೊಳ್ಳಲು ಅಮೆರಿಕನ್ ಕಾಂಗ್ರೆಸ್ ತಕ್ಷಣವೇ ಈ ಕಾಯ್ದೆಯನ್ನು ಪಾಸ್ ಮಾಡಬೇಕು ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸಿದ್ದಾರೆ.

ಏನಿದು 'ಸೇವ್ ಅಮೆರಿಕ ಆಕ್ಟ್'?
ಅಮೆರಿಕದ ಚುನಾವಣಾ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಹೊರಟಿರುವ ಈ 'ಸೇವ್ ಅಮೆರಿಕ ಆಕ್ಟ್' (Safeguard American Voter Eligibility Act) ಮುಖ್ಯವಾಗಿ ಮತದಾನದ ಹಕ್ಕನ್ನು ಅಮೆರಿಕದ ನಿಜವಾದ ಪ್ರಜೆಗಳಿಗೆ ಮಾತ್ರ ಸೀಮಿತಗೊಳಿಸುವ ಉದ್ದೇಶ ಹೊಂದಿದೆ. ಶ್ವೇತಭವನ ನೀಡಿರುವ ಸ್ಪಷ್ಟನೆಯ ಪ್ರಕಾರ, ಅಮೆರಿಕದ ಚುನಾವಣೆಗಳಲ್ಲಿ ಅಲ್ಲಿನ ನಾಗರಿಕರು ಮಾತ್ರ ಭಾಗವಹಿಸಬೇಕು. ಈ ಮಸೂದೆಯ ಪ್ರಕಾರ, ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಲು ಅಮೆರಿಕನ್ ಪೌರತ್ವದ ಪುರಾವೆ ಮತ್ತು ಫೋಟೋ ಐಡಿ ಕಡ್ಡಾಯವಾಗಲಿದೆ.

ಇದರೊಂದಿಗೆ, ಅಂಚೆ ಮತದಾನ ವ್ಯವಸ್ಥೆಗೆ ನಿಯಂತ್ರಣ ಹೇರಲು ಉದ್ದೇಶಿಸಲಾಗಿದೆ. ಕೇವಲ ಅನಾರೋಗ್ಯ, ಅಂಗವಿಕಲತೆ, ಸೇನಾ ಸೇವೆ ಅಥವಾ ಪ್ರಯಾಣದಲ್ಲಿರುವವರಿಗೆ ಮಾತ್ರ ಅಂಚೆ ಮೂಲಕ ಮತದಾನ ಮಾಡಲು ಅವಕಾಶ ನೀಡಲಾಗುತ್ತದೆ. ವಿದೇಶಿ ನಾಗರಿಕರು ಅಥವಾ ಅಮೆರಿಕದ ಪೌರತ್ವ ಇಲ್ಲದವರು ಮತದಾರರ ಪಟ್ಟಿಯಲ್ಲಿದ್ದರೆ ಅವರನ್ನು ತಕ್ಷಣವೇ ತೆರವುಗೊಳಿಸಲು ರಾಜ್ಯಗಳಿಗೆ ನಿರ್ದೇಶನ ನೀಡಲಾಗುತ್ತದೆ.

ಶ್ವೇತಭವನವು ಈ ವಿಚಾರದಲ್ಲಿ ಭಾರತ ಮತ್ತು ಬ್ರೇಜಿಲ್ ದೇಶಗಳ ಉದಾಹರಣೆಯನ್ನು ನೀಡಿದ್ದು, ಈ ದೇಶಗಳು ತಮ್ಮ ಮತದಾರರ ಗುರುತಿನ ಚೀಟಿಯನ್ನು ಬಯೋಮೆಟ್ರಿಕ್ ಡೇಟಾಬೇಸ್‌ಗೆ ಲಿಂಕ್ ಮಾಡಿವೆ, ಆದರೆ ಅಮೆರಿಕದಲ್ಲಿ ಇನ್ನೂ ಸಹ ಸ್ವಯಂ ದೃಢೀಕರಣದ (Self-attestation) ಮೇಲೆಯೇ ನಾಗರಿಕತ್ವವನ್ನು ನಂಬಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದೆ. ಈ ಕಾಯ್ದೆಯ ಮಸೂದೆಯನ್ನು ಈ ವರ್ಷದ ಜನವರಿ 29 ರಂದು ಸಂಸತ್ತಿನಲ್ಲಿ ಮಂಡಿಸಲಾಗಿತ್ತಾದರೂ, ಡೆಮಾಕ್ರಟ್‌ಗಳು ಮತ್ತು ರಿಪಬ್ಲಿಕನ್‌ಗಳ ನಡುವಿನ ಭಿನ್ನಾಭಿಪ್ರಾಯದಿಂದಾಗಿ ಸಂಸತ್ತು ಮುಂದೂಡಲ್ಪಟ್ಟು ಕಾಯ್ದೆ ಇನ್ನೂ ಅಂಗೀಕಾರಗೊಂಡಿಲ್ಲ.

Dailyhunt
Disclaimer: This content has not been generated, created or edited by Dailyhunt. Publisher: Udayavani