ಉದಯವಾಣಿ

1.4M Followers

ಶಿಕ್ಷಕರ ಕಡ್ಡಾಯ ಹಾಜರಾತಿಗೆ ಹೊಸ ಪದ್ದತಿ: ಸಚಿವ ಬಿ.ಸಿ.ನಾಗೇಶ್

06 Jul 2022.4:11 PM

ಕಲಬುರಗಿ: ಶಾಲೆಗೆ ಶಿಕ್ಷಕರ ಕಡ್ಡಾಯ ಹಾಜರಾತಿಗೆ ಹಾಗೂ ಹಾಜರಾತಿ ಮೇಲೆ ನಿಗಾ ವಹಿಸಲು ಹೊಸ ಪದ್ದತಿ ಜಾರಿಗೆ ತರಲು ಚಿಂತನೆ ನಡೆದಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮುಂಚೆ ಬಯೋಮೆಟ್ರಿಕ್ ಹಾಜರಾತಿ ತರಲು ಮುಂದಾಗಲಾಗಿತ್ತು.

ಆದರೆ ಈಗ ಬಯೋಮೆಟ್ರಿಕ್ ಇಂಟರನೆಟ್ ಹಾಗೂ ಇತರ ಕಾರಣ ಗಳ ಹಿನ್ನೆಲೆಯಲ್ಲಿ ಕಾರ್ಯಾನುಷ್ಢಾನಕ್ಕೆ ಬರಲಿಲ್ಲ. ಆದರೆ ವಿದ್ಯುತ್ ಸರಬರಾಜು ನಿಗಮಗಳಲ್ಲಿ ಜಾರಿಗೆ ತಂದಿರುವ ಮಾದರಿಯಲ್ಲಿ ಶಿಕ್ಷಕರ ಹಾಜರಾತಿ ಅಳವಡಿಸಲು ಪರಾಮರ್ಶಿಸಲಾಗಿದೆ ಎಂದು ವಿವರಣೆ ನೀಡಿದರು.

ಶಾಲೆಗೆ ಶಿಕ್ಷಕರು ಹಾಜರಾಗುತ್ತಿದ್ದಾರೆ. ಆದರೆ ಕೆಲವು ಕಡೆ ದೂರು ಬರುತ್ತಿರುತ್ತಿರುತ್ತವೆ. ಒಟ್ಟಾರೆ ಶಿಸ್ತು ತರಲು ಈಗಿನ ಹಾಜರಾತಿ ಬದಲಾವಣೆ ಗೊಳಿಸಲು ಉದ್ದೇಶಿಸಲಾಗಿದೆ ಎಂದರು.

ಮಕ್ಕಳ ಸಂಖ್ಯೆಗನುಗುಣವಾಗಿ ಶಿಕ್ಷಕರ ಅನುಪಾತ ಹೆಚ್ಚಿಸಲು 15 ಸಾವಿರ ಶಿಕ್ಷಕರಲ್ಲಿ 5 ಸಾವಿರ ಶಿಕ್ಷಕರ ನ್ನು ಕಲ್ಯಾಣ ಕರ್ನಾಟಕ ಭಾಗಕ್ಕೆ ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ಸಚಿವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

ಸಿದ್ದರಾಮಯ್ಯ ಏನು ಸರ್ಕಾರವೇ ?

ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಶೂ ಮತ್ತು ಸಾಕ್ಸ್ ನೀಡುವುದನ್ನು ಸರ್ಕಾರ ನಿಲ್ಲಿಸಿದೆಯಾ? ಈ ಕೃತಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿರುವ ಆರೋಪದ ಬಗ್ಗೆ ತಮ್ಮ ನಿಲುವೇನು ಎಂದು ಕೇಳಿದ ಪ್ರಶ್ನೆಗೆ ಸಿಡಿಮಿಡಿಗೊಂಡರು. ಸಿದ್ದರಾಮಯ್ಯ ಏನು ಸರ್ಕಾರವೇ ? ಅವರು 100 ಸುಳ್ಳು ಹೇಳುವುದರಲ್ಲಿ ಇದು 101 ನೇ ಸುಳ್ಳು ಅಷ್ಟೇ. ಮಕ್ಕಳು ಶಾಲೆಗೆ ಬರುವುದು ಶಿಕ್ಷಣಕ್ಕಾಗಿ. ಅವರ ಅವಧಿಯಲ್ಲಿ ಕ್ವಾಲಿಟಿ ಎಜುಕೇಶನ್ ಎಷ್ಟರ ಮಟ್ಟಿಗೆ ಕೊಟ್ಟಿದ್ದಾರೆ ಕೇಳಿ. ಕಲಿಕಾ ಚೇತರಿಕೆಗೆ 146 ಕೋಟಿ ರೂ. ಖರ್ಚು ಮಾಡಿದ್ದೆವು. ಕೊರೊನಾದಿಂದ ಆರ್ಥಿಕ ಹೊಡೆತ ಬಿದ್ದಿದೆ. ಶೂ- ಸಾಕ್ಸ್ ಕೊಡುವುದಕ್ಕೆ ಆಗುವುದಿಲ್ಲ ಎಂದು ನಾವು ಎಲ್ಲೂ ಹೇಳಿಲ್ಲ. ಶೂ ಸಾಕ್ಸ್‌ಗಿಂತ ನಾವು ಗುಣಮಟ್ಟದ ಶಿಕ್ಷಣಕ್ಕೆ ಒತ್ತುಕೊಟ್ಟಿದ್ದೇವೆ ಎಂದರು.

ಶೂ- ಸಾಕ್ಸ್ ಬಗ್ಗೆ ಮುಂದಿನ‌ ದಿನಗಳಲ್ಲಿ ನಿರ್ಧಾರ ಕೈಗೊಳ್ಳುತ್ತೇವೆ. ನೀವು ಎಷ್ಟೇ ಸಲ ಪ್ರಶ್ನೆ ಕೇಳಿದರೂ ನಾನು ಹೇಳೊದೊಂದೆ. ಇನ್ನೂ ಏನೂ ನಿರ್ಣಯ ತಗೊಂಡಿಲ್ಲ, ತಗೊಂಡಿಲ್ಲ ಎಂದರು.

ಕಲಬುರಗಿ, ಯಾದಗಿರಿ, ಬೀದರ್​​ ಜಿಲ್ಲೆಗಳಲ್ಲಿ ಶೇ. 85 ರಷ್ಟು ಪುಸ್ತಕಗಳು ವಿತರಣೆ ಆಗಿವೆ. ಪಠ್ಯಪುಸ್ತಕ ಮುದ್ರಣಕ್ಕೆ ಹಿಂದಿನ ಬಾರಿಗಿಂತ ಹೆಚ್ಚು ಖರ್ಚಾಗಿದೆಯೇ? ಎಂಬ ಪತ್ರಕರ್ತರ ಪ್ರಶ್ನೆಗೆ, ಎಷ್ಟು ಖರ್ಚಾಗಿದೆ ಅನ್ನೋದರ ಬಗ್ಗೆ ನನಗೆ ಗೊತ್ತಿಲ್ಲ ಎಂದರು.

ಇದಕ್ಕೆ ಮರು ಪ್ರಶ್ನೆ ಮಾಡಿದ ಪತ್ರಕರ್ತರು,ನಿಮ್ಮ ಇಲಾಖೆ ಬಗ್ಗೆ ನಿಮಗೆ ಗೊತ್ತಿಲ್ಲದಿದ್ರೆ ಹೇಗೆ ಸರ್? ಎಂದಿದಕ್ಕೆ ತಾಳ್ಮೆ ಕಳೆದುಕೊಂಡರು.ಏನ್ರಿ ನನ್ನ ಇಲಾಖೆ ಅಂದಮೇಲೆ ಎಲ್ಲಾನೂ ಗೊತ್ತಿರಬೇಕೇನು? ಹಂಗಂತಾ ರೂಲ್ಸ್ ಇದೆಯಾ?. ನನಗೆ ಗೊತ್ತಿಲ್ಲ ಎಂದು ಫ್ಲೈಟ್ ಟೈಮ್ ಆಗುತ್ತಿದೆ ಎಂದು ಹೇಳಿ ಹೊರನಡೆದರು.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Udayavani

#Hashtags