ಅಜೆಕಾರು: ಕಾರ್ಕಳ ತಾಲೂಕಿನ ಶಿರ್ಲಾಲು ಅರಣ್ಯದ ನಡುವೆಯೇ ಇರುವ ಗ್ರಾಮ. ಒಂದು ವೇಳೆ ಕಸ್ತೂರಿ ರಂಗನ್ ವರದಿ ಜಾರಿಯಾದರೆ ರಸ್ತೆ ಸಹಿತ ಮೂಲ ಸೌಕರ್ಯ ಅಭಿವೃದ್ಧಿಗೆ ಅಡ್ಡಿಯಾಗಬಹುದೇ ಎಂಬ ಕಳವಳ ಸ್ಥಳೀಯರನ್ನು ಕಾಡುತ್ತಿದೆ. ಪರಿಸರ ಸಂರಕ್ಷಣೆ ಅಗತ್ಯ ನಿಜ. ಆದರೆ ಅದರ ಹೆಸರಿನಲ್ಲಿ ಗ್ರಾಮೀಣ ಜನರ ಕೃಷಿ ಬದುಕು ಮತ್ತು ಅಭಿವೃದ್ಧಿಗೆ ತೊಂದರೆ ಉಂಟಾಗಬಾರದಲ್ಲವೇ ಎನ್ನುತ್ತಾರೆ ಗ್ರಾಮಸ್ಥರು.
ಶಿರ್ಲಾಲು ಭಾಗದ ಕುಟುಂಬಗಳಿಗೆ ಕೃಷಿ ಹಾಗೂ ಕೃಷಿ ಆಧಾರಿತ ಚಟುವಟಿಕೆಗಳೇ ಜೀವನೋಪಾಯ. ಹಲವಾರು ತಲೆಮಾರುಗಳಿಂದ ಅಡಿಕೆ, ತೆಂಗು, ಕಾಳುಮೆಣಸು ಸಹಿತ ವಿವಿಧ ಬೆಳೆಗಳನ್ನು ಬೆಳೆಯುತ್ತ ಬದುಕು ಕಟ್ಟಿಕೊಂಡಿದ್ದಾರೆ. ವರದಿ ಜಾರಿಯಾದರೆ ಕೃಷಿ ಚಟುವಟಿಕೆಗಳಿಗೆ ನಿರ್ಬಂಧ, ಮನೆ ನಿರ್ಮಾಣಕ್ಕೆ ಸಮಸ್ಯೆ ಹಾಗೂ ಅಗತ್ಯ ಮೂಲಸೌಕರ್ಯ ಕಾಮಗಾರಿಗಳಿಗೆ ಅಡ್ಡಿಯಾಗಬಹುದೇ ಎಂದು ಗ್ರಾಮಸ್ಥರು ಪ್ರಶ್ನಿಸುತ್ತಾರೆ. ಈ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಯಾರೂ ನೀಡುತ್ತಿಲ್ಲ ಎಂಬುದು ಸ್ಥಳೀಯರ ಅಸಮಾಧಾನ.
ಯೋಜನೆ ಜಾರಿಯಿಂದ ಯಾವ ಅನುಕೂಲವಿದೆ, ಯಾವುದಕ್ಕೆ ತೊಂದರೆ ಯಾಗಬಹುದು ಎಂಬ ಬಗ್ಗೆ ಸೂಕ್ತ ಮಾಹಿತಿ ನೀಡಬೇಕು. ವರದಿ ಜಾರಿಯ ಬಗ್ಗೆ ನಮ್ಮ ಅಭಿಪ್ರಾಯ ಪಡೆಯಬೇಕು. ನಾವು ಪಶ್ಚಿಮ ಘಟ್ಟದ ನಡುವೆ ಬದುಕುವವರು. ಹಲವು ದಶಕಗಳಿಂದ ನಮ್ಮಿಂದ ಪರಿಸರಕ್ಕೆ, ಪರಿಸರದಿಂದ ನಮಗೆ ಯಾವುದೇ ತೊಂದರೆ ಆಗಿಲ್ಲ. ಮುಂದೆಯೂ ಆಗದು. ಹೀಗಾಗಿ ನಮ್ಮ ಬದುಕಿಗೆ ತೊಂದರೆಯಾಗದಂತೆ ಕಸ್ತೂರಿ ರಂಗನ್ ವರದಿ ಜಾರಿಗೆ ನಮ್ಮದೇನೂ ಅಭ್ಯಂತರವಿಲ್ಲ ಎಂಬುದು ಕೆಲವು ಸ್ಥಳೀಯರ ಅಭಿಪ್ರಾಯ.
ಜನರಿಗೆ ಕಾನೂನಿನ ಭಯ ಬೇಕು. ಆದರೆ ಜನಜೀವನಕ್ಕೆ ಅಡ್ಡಿಯಾಗಬಾರದು. ಆಗ ಪರಿಸರವೂ ರಕ್ಷಣೆಯಾಗುತ್ತದೆ, ಜನರ ಜೀವನವೂ ಮುನ್ನಡೆಯುತ್ತದೆ. ಹೀಗಾಗಿ ಜನರಿಗೆ ಮಾಹಿತಿ ನೀಡುವ ತಳಮಟ್ಟದ ಸಭೆಗಳನ್ನು ಅಧಿಕಾರಿಗಳು ಕರೆಯಬೇಕು ಎಂಬುದು ಸ್ಥಳೀಯರ ಆಗ್ರಹ.
ಇರುವ ಕಾಡನ್ನು ಉಳಿಸಿಕೊಳ್ಳಲಿ
ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ನಾಡಿನಲ್ಲಿ ಯೋಜನೆ ಜಾರಿಗೆ ತಂದು ಅರಣ್ಯ ಬೆಳೆಸುವ ಬದಲು ಪಶ್ಚಿಮ ಘಟ್ಟದ ಜೀವವೈವಿಧ್ಯಗಳನ್ನು ರಕ್ಷಣೆ ಮಾಡುವ ಕಾರ್ಯ ನಡೆಯಲಿ. ಕಾಡಿನೊಳಗೆ ವನ್ಯ ಜೀವಿಗಳಿಗೆ ಅಗತ್ಯವಿರುವ ಆಹಾರ ಕಾಡಿನೊಳಗೆ ದೊರೆಯುವಂತೆ ಮಾಡಲಿ. ಫಲ ಬಿಡುವ ಹಣ್ಣುಗಳ ಮರಗಳನ್ನು ಹೆಚ್ಚು ಹೆಚ್ಚು ಅರಣ್ಯದೊಳಗೆ ಬೆಳೆಸಿದರೆ ಕಾಡುಪ್ರಾಣಿಗಳು ಜನವಸತಿ ಪ್ರದೇಶಕ್ಕೆ ಬರುವುದನ್ನು ತಡೆಯಬಹುದು. ಆಗ ವನ್ಯ ಜೀವಿ ಹಾಗೂ ಮಾನವನ ನಡುವಿನ ಸಂಘರ್ಷವನ್ನು ತಪ್ಪಿಸಬಹುದಾಗಿದೆ. ಇದಕ್ಕೆಲ್ಲ ಕಾನೂನಿನ ಅಂಕುಶವೇ ಪರಿಹಾರವಲ್ಲ ಎಂಬುದು ಅರಣ್ಯದಂಚಿನ ನಿವಾಸಿಗಳ ಅಭಿಪ್ರಾಯ.
ಮೂಲಸೌಕರ್ಯದ ಕೊರತೆ
ಶಿರ್ಲಾಲು ಸಂಪೂರ್ಣ ಗ್ರಾಮದಲ್ಲಿ ನೆಟ್‌ವರ್ಕ್ ಸಮಸ್ಯೆ ನಿರಂತರವಾಗಿದೆ. ಪಶ್ಚಿಮ ಘಟ್ಟದ ಅಂಚಿನ ಪ್ರದೇಶಗಳಾದ ಪೈಯಂದೆ, ಹಾರಾಡಿ, ಎರ್ಮಾಳ, ಹೆಗ್ಡೆಬೆಟ್ಟು, ಪೈತಾಳ ಭಾಗದಲ್ಲಿ ರಸ್ತೆ, ಸೇತುವೆ ಸಹಿತ ಮೂಲ ಸೌಕರ್ಯಗಳ ಅಭಿವೃದ್ಧಿಯಾಗಬೇಕಿದೆ. ಹಾರಾಡಿ ಪ್ರದೇಶದಲ್ಲಿ ಮಳೆಗಾಲದಲ್ಲಿ ಜನಜೀವನ ಸಂಕಷ್ಟಕ್ಕೆ ಒಳಗಾಗುತ್ತದೆ. ಸೇತುವೆ ಇಲ್ಲದೆ ಇರುವುದರಿಂದ ಹೊಳೆಯಲ್ಲೇ ಮಳೆ ನೀರು ಉಕ್ಕೇರಿ ಹರಿಯುವಾಗ ಸಂಚಾರ ಅಸಾಧ್ಯ. ಈ ನಿಟ್ಟಿನಲ್ಲಿ ತ್ವರಿತವಾಗಿ ಸೇತುವೆ ನಿರ್ಮಾಣವಾಗಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಒಕ್ಕೊರಲಿನ ದನಿ
ವರದಿ ಜಾರಿಗೆ ಮುನ್ನ ಗ್ರಾಮಸ್ಥರ ಅಭಿಪ್ರಾಯವನ್ನು ಪಡೆಯಬೇಕು. ಸ್ಥಳೀಯ ಪರಿಸ್ಥಿತಿ ಹಾಗೂ ಕೃಷಿ ಬದುಕಿನ ವಾಸ್ತವಾಂಶಗಳನ್ನು ಪರಿಗಣಿಸಬೇಕು. ಸರಕಾರವು ಜನರಲ್ಲಿ ಇರುವ ಆತಂಕವನ್ನು ನಿವಾರಿಸಿ ಸ್ಪಷ್ಟ ಮಾಹಿತಿ ನೀಡಬೇಕು. ಪರಿಸರ ಸಂರಕ್ಷಣೆ ಮತ್ತು ಜನಜೀವನದ ನಡುವೆ ಸಮತೋಲನ ಕಾಯ್ದುಕೊಂಡು ನಿರ್ಧಾರ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಒಕ್ಕೊರಲಿನ ಆಗ್ರಹವಾಗಿದೆ.
ಕೃಷಿ ಚಟುವಟಿಕೆಗೆ ಅಪಾಯ ತರುವ ಯಾವುದೇ ಯೋಜನೆ ನಮಗೆ ಬೇಡ. ಈಗಾಗಲೇ ಅರಣ್ಯ ವ್ಯಾಪ್ತಿಯಲ್ಲಿ ಸಂಚಾರ ಮಾಡುವುದು ದುಸ್ತರವಾಗಿದೆ. ಇನ್ನು ಬೇರೆ ಯೋಜನೆ ಬಂದರೆ ಜೀವನ ನಡೆಸುವುದು ಹೇಗೆ?
-ಆನಂದ, ಶಿರ್ಲಾಲು
ಯೋಜನೆಯ ಸಾಧಕ ಬಾಧಕಗಳ ಬಗ್ಗೆ ಅಧಿಕಾರಿಗಳು ಸ್ಥಳೀಯರಿಗೆ ಸೂಕ್ತ ಮಾಹಿತಿ ನೀಡಬೇಕಾಗಿದೆ. ಸ್ಥಳೀಯರ ಪ್ರಶ್ನೆಗಳಿಗೆ ಸ್ಪಷ್ಟ ಹಾಗೂ ನೈಜ ಮಾಹಿತಿ ನೀಡಿ ಕೃಷಿ ಬದುಕನ್ನು ಉಳಿಸುವ ಕಾರ್ಯ ಸರಕಾರ ಮಾಡಬೇಕಿದೆ.
-ರಮಾನಂದ ಪೂಜಾರಿ, ಶಿರ್ಲಾಲು
ಸರಕಾರವು ಜನರ ಮೂಲಸೌಕರ್ಯ ಅಭಿವೃದ್ಧಿಗೆ ಪ್ರಥಮ ಪ್ರಾಶಸ್ತÂ ನೀಡಿ ಯೋಜನೆ ಜಾರಿ ಮಾಡಬೇಕು. ಜನತೆಗೆ ಕಾನೂನಿನ ಭಯ ಬೇಕು, ಆದರೆ ಅದೇ ಕಾನೂನು ಜನರ ಜೀವನಕ್ಕೆ ಬಾಧಕವಾಗಬಾರದು.
-ಪಾಂಡುರಂಗ ನಾಯಕ್, ಹಾರಾಡಿ
-ಜಗದೀಶ್ ಅಂಡಾರು

