ಅಂಕೋಲಾ: ಶಿರೂರಿನಲ್ಲಿ ಸಂಭವಿಸಿದ್ದ ಗುಡ್ಡ ಕುಸಿತ ದುರಂತ ಇಡೀ ರಾಜ್ಯವನ್ನು ನೋವಿಗೆ ದೂಡಿದ್ದು, ಇಂತಹ ಘಟನೆಗಳು ಮರುಕಳಿಸದಂತೆ ಎಲ್ಲ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.
ಖಾದರ್ ಹೇಳಿದರು.
ಜು.4ರ ಶನಿವಾರ ಅಂಕೋಲಾ ತಾಲೂಕಿನ ಶಿರೂರು ಗಂಗಾವಳಿ ನದಿಯಲ್ಲಿ 4.34 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿರುವ ಮಣ್ಣು ತೆರವು ಕಾಮಗಾರಿಯನ್ನು ಪರಿಶೀಲಿಸಿದ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
'ಶಿರೂರಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ಎಲ್ಲರಿಗೂ ನೋವು ತಂದಿದೆ. ಆ ಸಂದರ್ಭದಲ್ಲಿ ಶಾಸಕ ಸತೀಶ್ ಸೈಲ್, ಸ್ಥಳೀಯ ನಾಗರಿಕರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ತೋರಿದ ಕಾರ್ಯಕ್ಷಮತೆ ಶ್ಲಾಘನೀಯವಾಗಿದೆ. ವಿಶೇಷವಾಗಿ ಕೇರಳದ ಲಾರಿ ಚಾಲಕ ಅರ್ಜುನ್ ಅವರ ಮೃತದೇಹವನ್ನು ಪತ್ತೆಹಚ್ಚಿದ ಕಾರ್ಯದಿಂದ ಕೇರಳದ ಜನರು ಇಂದಿಗೂ ಕರ್ನಾಟಕದ ಬಗ್ಗೆ ಗೌರವ ವ್ಯಕ್ತಪಡಿಸುತ್ತಿದ್ದಾರೆ,ʼ ಎಂದು ಹೇಳಿದರು.
ಗುಡ್ಡ ಕುಸಿತ ಸಂಭವಿಸಿದ ಪ್ರದೇಶದಿಂದ ಸುಮಾರು 50 ಮೀಟರ್ ಅಂತರದಲ್ಲಿ ಮತ್ತೆ ಭೂಕುಸಿತ ಸಂಭವಿಸುವ ಸಾಧ್ಯತೆ ಇದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, 'ಇಂತಹ ಘಟನೆಗಳು ಮತ್ತೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುವುದು. ಸಾರ್ವಜನಿಕರ ಸುರಕ್ಷತೆಗೆ ಸರ್ಕಾರ ಮೊದಲ ಆದ್ಯತೆ ನೀಡಲಿದೆ,' ಎಂದರು.
ಐಆರ್‌ಬಿ ಸಂಸ್ಥೆ ಕೈಗೊಂಡಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಬಗ್ಗೆ ಸಾರ್ವಜನಿಕರಲ್ಲಿ ಇನ್ನೂ ಆತಂಕವಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ʼಈ ಕುರಿತು ಸ್ಥಳೀಯ ಶಾಸಕ ಸತೀಶ್ ಸೈಲ್, ಜಿಲ್ಲಾಧಿಕಾರಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಮಗ್ರ ಚರ್ಚೆ ನಡೆಸಿ, ಸುರಕ್ಷತೆಗೆ ಆದ್ಯತೆ ನೀಡುವಂತೆ ಹಾಗೂ ವೈಜ್ಞಾನಿಕ ರೀತಿಯಲ್ಲಿ ರಸ್ತೆ ಕಾಮಗಾರಿ ನಡೆಸುವಂತೆ ಸೂಚಿಸಲಾಗುವುದು,ʼ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ಸತೀಶ್ ಸೈಲ್ ಅವರು ಶಿರೂರು ಪ್ರದೇಶದ ಪ್ರಸಕ್ತ ಪರಿಸ್ಥಿತಿ ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಚಿವರಿಗೆ ಮಾಹಿತಿ ನೀಡಿದರು.
ಪರಿಶೀಲನೆ ವೇಳೆ ಮಾಜಿ ಶಾಸಕ ಕೆ.ಎಚ್. ಗೌಡ, ಡಿಸಿಸಿ ಜಿಲ್ಲಾಧ್ಯಕ್ಷ ಸಾಯಿ ಗಾಂವ್ಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಶ್ವರ ನಾಯಕ, ಪಾಂಡುರಂಗ ಗೌಡ, ಸುಜಾತಾ ಗಾಂವ್ಕರ್, ಗೋಪು ನಾಯಕ ಅಡ್ಲೂರು, ಬಿ.ಡಿ. ನಾಯ್ಕ, ಶಾಂತಿ ಆಗೇರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

