ಹೈದರಾಬಾದ್: ಎಸ್‌ಎಸ್ ರಾಜಮೌಳಿ(SS Rajamouli) ನಿರ್ದೇಶನದಲ್ಲಿ ಬರುತ್ತಿರುವ ಬಹುಕೋಟಿ ನಿರ್ಮಾಣದ ʼವಾರಣಾಸಿʼ (Varanasi Movie) ಒಂದಲ್ಲ ಒಂದು ಕಾರಣಕ್ಕೆ ಸದ್ದು ಮಾಡುತ್ತಲೇ ಇದೆ.
ಪ್ಯಾನ್ ಇಂಡಿಯಾದ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದು. ಮಲ್ಟಿಸ್ಟಾರ್ಸ್, ದುಬಾರಿ ಬಜೆಟ್‌ನಿಂದ ಚಿತ್ರ ಸುದ್ದಿಯಾಗುತ್ತಿದೆ.
ಪೌರಾಣಿಕ ಹಿನ್ನೆಲೆಯಲ್ಲಿ ʼವಾರಣಾಸಿʼ ಚಿತ್ರ ಮೂಡಿಬರಲಿದೆ. ʼಹನುಮಂತʼನಿಂದ ಮಹೇಶ್ ಬಾಬು (Mahesh Babu) ಪಾತ್ರ ಪ್ರೇರಿತವಾಗಿರಲಿದೆ ಎನ್ನಲಾಗಿದೆ. ಶೂಟಿಂಗ್ ಹಂತದಲ್ಲಿರುವ ʼವಾರಣಾಸಿʼಯ ಕಥಾವಸ್ತು ಏನು ಎನ್ನುವುದು ಇದುವರೆಗೆ ರಿವೀಲ್ ಆಗಿಲ್ಲ.
ಸೂಪರ್ ಸ್ಟಾರ್ ಮಹೇಶ್ ಬಾಬು, ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ಈ ಚಿತ್ರದ ಕಥೆಯ ಬಗ್ಗೆ ಈಗ ದೊಡ್ಡ ಮಟ್ಟದ ಸುದ್ದಿಯೊಂದು ಹರಿದಾಡುತ್ತಿದೆ.
ವೆಬ್‌ಸೈಟ್‌ನಲ್ಲಿ ಕಥಾವಸ್ತು ರಿವೀಲ್
ವರದಿಗಳ ಪ್ರಕಾರ, ಈ ಚಿತ್ರದ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ 'ಸಿನಿಸೈಟ್' (Cinesite) ಎಂಬ ವಿಎಫ್‌ಎಕ್ಸ್ (VFX) ಕಂಪನಿಯು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ 'ವಾರಣಾಸಿ' ಚಿತ್ರದ ಸಾರಾಂಶವನ್ನು (Synopsis) ಪ್ರಕಟಿಸಿದೆ ಎಂದು ಹೇಳಲಾಗುತ್ತಿದೆ. ಆ ಸಾರಾಂಶದ ಪ್ರಕಾರ, "ಒಬ್ಬ ಶಿವಭಕ್ತನು ಕಳೆದುಹೋದ ಅಪಾರ ಶಕ್ತಿಯ ಕಾಸ್ಮಿಕ್ ಕಲಾಕೃತಿಯನ್ನು ಪತ್ತೆಹಚ್ಚಲು ಕಾಲಾನಂತರದಲ್ಲಿ ಅಪಾಯಕಾರಿ ಪ್ರಯಾಣವನ್ನು ಕೈಗೊಳ್ಳುತ್ತಾನೆ. ಶತಮಾನಗಳಿಂದ ಮರೆಮಾಡಲಾಗಿರುವ ಪ್ರಾಚೀನ ರಹಸ್ಯಗಳನ್ನು ಅವನು ಒಟ್ಟುಗೂಡಿಸಿದಾಗ, ಅವನು ತನ್ನ ಧ್ಯೇಯದ ಹಿಂದಿನ ಸತ್ಯವನ್ನು ಅರಿತುಕೊಳ್ಳುತ್ತಾನೆʼʼ ಎಂದು ಬರೆಯಲಾಗಿದೆ.

ಈ ಕಥೆಯ ಎಳೆ ನೋಡಿದರೆ ಚಿತ್ರವು ಟೈಮ್ ಟ್ರಾವೆಲ್ ಆಧಾರಿತ ಸಾಹಸಮಯ ಚಿತ್ರ ಎಂಬುದು ಬಹುತೇಕ ಖಚಿತವಾದಂತಿದೆ. ಆದರೆ, ಈ ಬಗ್ಗೆ ಚಿತ್ರತಂಡದಿಂದ ಯಾವುದೇ ಅಧಿಕೃತ ಸ್ಪಷ್ಟನೆ ಇನ್ನೂ ಬಂದಿಲ್ಲ.
ಪ್ರಿಯಾಂಕಾ ಚೋಪ್ರಾ ಹೇಳಿದ್ದೇನು?
ಈ ವರ್ಷದ ಫೆಬ್ರವರಿಯಲ್ಲಿ ನಡೆದ ಖ್ಯಾತ ಟಾಕ್ ಶೋ 'ದಿ ಟುನೈಟ್ ಶೋ'ನಲ್ಲಿ ಮಾತನಾಡಿದ್ದ ಪ್ರಿಯಾಂಕಾ ಚೋಪ್ರಾ, "ನಾನು ಸುಮಾರು ಆರು-ಏಳು ವರ್ಷಗಳ ನಂತರ ಭಾರತೀಯ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ರಾಜಮೌಳಿ ಅವರ ನಿರ್ದೇಶನದ ಈ ಚಿತ್ರವು ಒಂದು ಅದ್ಭುತ ಸಾಹಸಮಯ ಯಾನವಾಗಲಿದೆ. ಈಗಾಗಲೇ 14 ತಿಂಗಳುಗಳಿಂದ ಚಿತ್ರೀಕರಣ ನಡೆಯುತ್ತಿದ್ದು, ಇನ್ನೂ ಆರು ತಿಂಗಳ ಕೆಲಸ ಬಾಕಿ ಇದೆ" ಎಂದು ತಿಳಿಸಿದ್ದರು.
ಬೃಹತ್ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವು ಮೂಲ ತೆಲುಗಿನಲ್ಲಿ ತಯಾರಾಗುತ್ತಿದ್ದು, ಕನ್ನಡ ಸೇರಿದಂತೆ ವಿವಿಧ ಭಾಷೆಗಳಿಗೆ ಡಬ್ ಆಗಿ ತೆರೆಕಾಣಲಿದೆ. ಏಪ್ರಿಲ್ 7, 2027 ರಂದು 'ವಾರಣಾಸಿ' ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.

