Dailyhunt
ಶ್ರೇಯಾಂಕ ಪಾಟೀಲ್ ಜತೆ ನಿರಂಜನ್‌ ನಿಶ್ಚಿತಾರ್ಥ?; ವೈರಲ್‌ ಸುದ್ದಿಗೆ ನಟ ಹೇಳಿದ್ದೇನು?

ಶ್ರೇಯಾಂಕ ಪಾಟೀಲ್ ಜತೆ ನಿರಂಜನ್‌ ನಿಶ್ಚಿತಾರ್ಥ?; ವೈರಲ್‌ ಸುದ್ದಿಗೆ ನಟ ಹೇಳಿದ್ದೇನು?

ಬೆಂಗಳೂರು: ಸೋಶಿಯಲ್ ಮೀಡಿಯಾದಲ್ಲಿ ನಿತ್ಯ ನೂರಾರು ಪೋಸ್ಟ್‌ಗಳು ಹರಿದಾಡುತ್ತವೆ. ಸೆಲೆಬ್ರಿಟಿಗಳ ಬಗ್ಗೆಯಂತೂ ಕೇಳೋದೇ ಬೇಡ ಅದು ನಿಜವಾಗಲಿ ಅಥವಾ ರೂಮರ್ಸ್‌ ಆಗಲಿ ಡೈಲಿ ಹತ್ತಾರು ಪೋಸ್ಟ್‌ಗಳು ಹರಿದಾಡುತ್ತವೆ.

ರೂಮರ್ಸ್‌ನಲ್ಲೇ ಎಷ್ಟೋ ಸೆಲೆಬ್ರಿಟಿಗಳ ಮದುವೆಯನ್ನೇ ಮಾಡಿಸಿರುವ ಪೋಸ್ಟ್‌ಗಳು ಟ್ರೋಲ್‌ ಪೇಜ್‌ನಲ್ಲಿ ಕಾಣಸಿಗುತ್ತವೆ.

ಕೆಲ ಪೋಸ್ಟ್‌ಗಳು ಎಷ್ಟು ವೈರಲ್‌ ಆಗುತ್ತವೆ ಅಂದರೆ ಕೊನೆಗೆ ಅದಕ್ಕೆ ಸ್ಪಷ್ಟನೆ ನೀಡಲು ಆಯಾ ಸೆಲೆಬ್ರಿಟಿಗಳೇ ತಮ್ಮ ಸೋಶಿಯಲ್‌ ಮೀಡಿಯಾ ಖಾತೆಗೆ ಬಂದು ಕ್ಲಾರಿಟಿ ಕೊಡಬೇಕು.

ಇತ್ತೀಚೆಗೆ ರಿಯಲ್‌ ಸ್ಟಾರ್‌ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್‌ (Niranjan Sudhindra) ಅವರ ವಿಚಾರದಲ್ಲೂ ಇದೇ ರೀತಿಯಾಗಿ ಪೋಸ್ಟ್‌ವೊಂದು ವೈರಲ್‌ ಆಗಿದೆ.

ನಟ ಉಪೇಂದ್ರ ಅವರ ಅಣ್ಣ ಸುಧೀಂದ್ರ ಅವರ ಹಿರಿಯ ಪುತ್ರ ಹಾಗೂ ನಟನಾಗಿರುವ ನಿರಂಜನ್ ಜೊತೆ, ಭಾರತೀಯ ಕ್ರಿಕೆಟರ್‌, ಆರ್‌ಸಿಬಿ ಆಟಗಾರ್ತಿ ಕನ್ನಡತಿ ಶ್ರೇಯಾಂಕ ಪಾಟೀಲ್ (Shreyanka Patil) ಜೊತೆ ಶೀಘ್ರದಲ್ಲೇ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎನ್ನುವ ಪೋಸ್ಟ್‌ವೊಂದು ಭಾರೀ ವೈರಲ್‌ ಆಗಿತ್ತು.

ಟ್ರೋಲ್‌ ಪೇಜ್‌ನಲ್ಲಿ ಏನಿತ್ತು?:

'ಉಪೇಂದ್ರ ಅವರ ಕುಟುಂಬದ ಸೊಸೆಯಾಗಲಿದ್ದಾರೆ ಶ್ರೇಯಾಂಕ ಪಾಟೀಲ್, IPL ನಲ್ಲಿ ಮಿಂಚಿದ ಕರ್ನಾಟಕದ ಪುಟ್ಟಿ ಇದೀಗ ಉಪ್ಪಿ ಅಣ್ಣನ ಮಗ ನಿರಂಜನ್ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂಬ ವರದಿಯಾಗಿದೆ, ಖುದ್ದು ಉಪೇಂದ್ರ ಅವರ ಮೂಲಕ ನಿರಂಜನ್ ಹಾಗೂ ಶ್ರೇಯಾಂಕ ಪಾಟೀಲ್ ಲವ್ ಸ್ಟೋರಿ ರಿವೀಲ್ ಆಗಿದ್ದು, ಇದೀಗ ಈ ಜೋಡಿ ಇದೇ ವರ್ಷ ಸಿಹಿ ಸುದ್ದಿ ‌ಕೊಡುವ ಸಾಧ್ಯತೆ ಇ‍‍ದೆ.' ಎಂದು ಪೋಸ್ಟ್‌ ಮಾಡಲಾಗಿತ್ತು.

ಈ ಪೋಸ್ಟ್‌ ಎಲ್ಲೆಡೆ ವೈರಲ್‌ ಆಗುತ್ತಿದ್ದಂತೆ, ನಟ ನಿರಂಜನ್ ಸುಧೀಂದ್ರ ಅವರು ಸ್ವತಃ ತಾವೇ ಕಮೆಂಟ್‌ ಮಾಡಿದ್ದಾರೆ. 'ಅಡ್ಮಿನ್ ಇನ್ವಿಟೇಶನ್ ಬಂದ್ರೆ ನಮಗೂ ಕಳುಹಿಸಿ ಕೊಡು ಗುರು. ಮೊದಲಿಗೆ ಫಾಕ್ಟ್ ಚೆಕ್ ಮಾಡಿ, ನಂತರ ಪೋಸ್ಟ್ ಮಾಡಿ. ಈ ರೀತಿಯಾಗಿ ಸುಳ್ಳು ಸುದ್ದಿ ಹರಡುವುದನ್ನು ನಿಲ್ಲಿಸಿ. Thank you for your attention to this matter! ಎಂದು ಬರೆದುಕೊಂಡು ಎಚ್ಚರಿಕೆ ರೀತಿ ರಿಯಾಕ್ಟ್‌ ಮಾಡಿದ್ದಾರೆ.

ಇತ್ತೀಚೆಗೆಗೆ ಸೋಶಿಯಲ್‌ ಮೀಡಿಯಾದಲ್ಲಿ ಈ ರೀತಿಯ ಹಾವಳಿಗಳು ಹೆಚ್ಚಾಗುತ್ತಿದೆ. ಮೊನ್ನೆಯಷ್ಟೇ ನಿರೂಪಕಿ ಅನುಪಮಾ ಗೌಡ ಅವರ ನಿಶ್ಚಿತಾರ್ಥ ವಿಚಾರವನ್ನು ಇದೇ ರೀತಿಯಾಗಿ ಹಬ್ಬಿಸಲಾಗಿತ್ತು.

ಸಿನಿಮಾದ ವಿಚಾರಕ್ಕೆ ಬಂದರೆ ಇತ್ತೀಚೆಗೆ ನಿರಂಜನ್ ಹಾಗೂ ಐಶ್ವರ್ಯ ಅರ್ಜುನ್ ನಟಿಸಿರುವ 'ಸೀತಾ ಪಯಣ'ದಲ್ಲಿ ಕಾಣಿಸಿಕೊಂಡಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Udayavani