Dailyhunt Logo
  • Light mode
    Follow system
    Dark mode
    • Play Story
    • App Story
ಸಿದ್ದಾಪುರ ಸಂತೆ: ಹಣ ಮಾತ್ರ ಬೇಕಂತೆ!

ಸಿದ್ದಾಪುರ ಸಂತೆ: ಹಣ ಮಾತ್ರ ಬೇಕಂತೆ!

ಸಿದ್ದಾಪುರ: ಕುಂದಾಪುರ ತಾಲೂಕಿನ ಅತೀ ದೊಡ್ಡ ವಾರದ ಸಂತೆಗಳಲ್ಲಿ ಒಂದಾದ ಸಿದ್ದಾಪುರ ಸಂತೆ ಮಾರುಕಟ್ಟೆ ಕನಿಷ್ಠ ಮೂಲಸೌಕರ್ಯ ಇಲ್ಲದೆ ಸೊರಗುತ್ತಿದೆ.

ಸುತ್ತಮುತ್ತಲಿನ 8 ಗ್ರಾಮಗಳ ಸುಮಾರು 10000 ಜನರ ಪ್ರಮುಖ ವ್ಯಾಪಾರ ಕೇಂದ್ರ ಬುಧವಾರ ನಡೆಯುವ ಸಂತೆ ಮಾರುಕಟ್ಟೆ.

ವಾರದ ಸಂತೆಗೆ ಘಟ್ಟದ ಮೇಲಿನವರು ಹಾಗೂ ಘಟ್ಟದ ಕೆಳಗಿನವರು ಮತ್ತು ವಿವಿಧ ಜಿಲ್ಲೆಗಳ ವ್ಯಾಪಾರಿಗಳು ಬರುತ್ತಾರೆ. ಅನೇಕ ವ್ಯಾಪಾರಿಗಳು ಸಂತೆಯ ಹಿಂದಿನ ದಿನವೇ ಬಂದು, ತಮ್ಮ ವಸ್ತುಗಳನ್ನು ಮಾರುಕಟ್ಟೆಯಲ್ಲಿ ಇಡುತ್ತಾರೆ.

ಇಲ್ಲಿನ ಮಾರುಕಟ್ಟೆ ಕಟ್ಟಡ ಯಾವಾಗ ಬೀಳುವುದೋ ಎಂಬಷ್ಟು ಶಿಥಿಲವಾಗಿದೆ. ವ್ಯಾಪಾರಿಗಳು ಮತ್ತು ಗ್ರಾಹಕರು ಇಬ್ಬರೂ ಭಯದಿಂದಲೇ ಬದುಕಬೇಕಾಗಿದೆ.
ಮಳೆ ಬಂದರೆ ನೀರು ಪ್ರವಾಹದಂತೆ ಈ ಮಾರುಕಟ್ಟೆಯ ನಡುವೆಯೇ ಹರಿದು ಹೋಗುತ್ತದೆ. ಇಡೀ ಪ್ರದೇಶ ಜಲಮಯವಾಗುತ್ತದೆ. ಜೊತೆಗೆ ಕೆಸರುಮಯವಾಗಿ ಅದೇ ಪರಿಸರದಲ್ಲಿ ವ್ಯಾಪಾರ ಮಾಡಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ.

ಮಾರುಕಟ್ಟೆಗೆ ಮಾಡಿದ ರಸ್ತೆಯ ಜಲ್ಲಿಕಲ್ಲುಗಳು ಎದ್ದು ನಿಂತಿವೆ. ಅದೆಷ್ಟೋ ಮಂದಿ ಆಯತಪ್ಪಿ ಬೀಳುತ್ತಾರೆ. ಇಲ್ಲಿ ಶೌಚಾಲಯವಿಲ್ಲ. ಕುಡಿಯುವ ನೀರು ಇಲ್ಲ. ಬಿಸಿಲಿಗೆ ನೆರಳು ಹಾಗೂ ಮಳೆಗೆ ರಕ್ಷಣೆ ಕೂಡ ಇಲ್ಲ. ವ್ಯಾಪಾರಿಗಳು ರಸ್ತೆಯನ್ನು ಆವರಿಸಿಕೊಂಡು ವ್ಯಾಪಾರ ನಡೆಸುತ್ತಾರೆ.

ಅಪಾಯಕಾರಿ ಕಟ್ಟಡ, ಮರಗಳು
ಮಾರುಕಟ್ಟೆಯಲ್ಲಿ ಇರುವ ಕಟ್ಟಡ ಹಳೆ ಕಾಲದ್ದಾಗಿದ್ದು, ಪಂಚಾಂಗದ ಕಲ್ಲುಗಳು ಉದುರಿ ಹೋಗಿವೆ.
ಮಾಡು, ರೀಪು, ಪಕಾಸಿಗಳು ಮುರಿದು ಬಿದ್ದು ವರ್ಷಗಳೇ ಕಳೆದಿವೆ. ವ್ಯಾಪಾರಿಗಳು ಮಾತ್ರ ಮುರಿದ ಕಟ್ಟಡದ ಮೇಲೆ ಟಾರ್ಪಾಲಿನ್ ಹಾಕಿ ಭಯದಿಂದ ವ್ಯಾಪಾರ ನಡೆಸುತ್ತಿದ್ದಾರೆ.
ಕಟ್ಟಡದ ಪಕ್ಕದಲ್ಲೇ ಅಪಾಯಕಾರಿ ಒಣಗಿದ ಮರಗಳಿವೆ. ಗೆಲ್ಲುಗಳು ಆಗಾಗ ಮುರಿದು ಬೀಳುತ್ತಿವೆ. ಇಲ್ಲಿರುವ ಗೆದ್ದಲು ಹಿಡಿದ ಮರಗಳನ್ನೂ ತೆರವು ಮಾಡಲಾಗುತ್ತಿಲ್ಲ.
ಮೀನಿನ ನೀರು ಮಾರುಕಟ್ಟೆಯ ಒಳಗೇ ಹರಿಯುತ್ತಿದೆ.

ಪಂ. ಕಣ್ಣೆದುರೇ ನಡೀತಿದೆ!
ಇಷ್ಟೆಲ್ಲ ಅವ್ಯವಸ್ಥೆಗಳಿರುವ ಮಾರುಕಟ್ಟೆ ಸಿದ್ದಾಪುರ ಪಂಚಾಯತ್‌ನ ಕಣ್ಣೆದುರೇ ಇದೆ!
ಸಿದ್ದಾಪುರ ಗ್ರಾ.ಪಂ.ನಿಂದ ಮಾರುಕಟ್ಟೆ ಏಲಂ ನಡೆದು ಈ ಬಾರಿ 3.85 ಲಕ್ಷ ರೂ.ಗೆ ಏಲಂಗೊಂಡಿದೆ. ಏಲಂಗೊಂಡ ಹಣ, ಮಾರುಕಟ್ಟೆಯ ಅಭಿವೃದ್ಧಿಗೆ ಮಾತ್ರ ಬಳಕೆಯಾಗುತ್ತಿಲ್ಲ.
ಪ್ರತಿಯೊಂದು ಗ್ರಾಮಸಭೆಯಲ್ಲಿ ಮಾರುಕಟ್ಟೆಯ ಅವ್ಯವಸ್ಥೆಯ ಬಗ್ಗೆ ಚರ್ಚೆಗಳು ಹಾಗೂ ಗಲಾಟೆಗಳು ನಡೆಯುತ್ತಿರುತ್ತವೆ. ಪ್ರತಿಯೊಂದು ಬಾರಿಯೂ ಹಾರಿಕೆಯ ಉತ್ತರ ಸಿಗುತ್ತಿದೆ.

ನೂತನ ಮೀನು ಮಾರುಕಟ್ಟೆ
ಎಪಿಎಂಸಿಯಿಂದ ನೂತನವಾಗಿ ಮೀನು ಮಾರುಕಟ್ಟೆ ನಿರ್ಮಾಣಗೊಂಡಿದೆ. ಪ್ರತಿನಿತ್ಯ ನೂತನವಾಗಿ ನಿರ್ಮಾಣಗೊಂಡ ಮೀನು ಮಾರುಕಟ್ಟೆಯ ಕಟ್ಟಡದಲ್ಲಿ ವ್ಯಾಪಾರ ನಡೆಯುತ್ತದೆ. ಹೆಚ್ಚಿನ ವ್ಯಾಪಾರಿಗಳು ಬುಧವಾರ ನಡೆಯುವ ವಾರದ ಸಂತೆಯಲ್ಲಿ ಹೊರಗಡ್ಡೆಯಲ್ಲಿಯೇ ಮೀನು ಮಾರಾಟ ಮಾಡುತ್ತಿದ್ದಾರೆ.

ಅನುದಾನಕ್ಕೆ ಮನವಿ
ಸಿದ್ದಾಪುರ ಮಾರುಕಟ್ಟೆ ಯಾವಾಗಲೋ ಅಭಿವೃದ್ಧಿಯಾಗಬೇಕಿತ್ತು. ಅಭಿವೃದ್ಧಿಗಾಗಿ ಪ್ರಯತ್ನ ನಡೆಯುತ್ತಿದೆ. ಪಶ್ಚಿಮ ಘಟ್ಟ ಅಭಿವೃದ್ಧಿ ಯೋಜನೆ ಅಡಿ ಮತ್ತು ಕರಾವಳಿ ಪ್ರಾಧಿಕಾರಕ್ಕೆ ಅನುದಾನಕ್ಕೆ ಮನವಿ ಮಾಡಿದ್ದೇವೆ. ತಾ.ಪಂ. ಕ್ರಿಯಾ ಯೋಜನೆಯಲ್ಲಿ ಅನುದಾನ ಇಡುವಂತೆ ಕೂಡ ಕೇಳಿಕೊಂಡಿದ್ದೇವೆ. -ನಾಗೇಂದ್ರ, ಪಿಡಿಒ ಸಿದ್ದಾಪುರ ಗ್ರಾ.ಪಂ.

ಮಳೆ ಬಂದಾಗ ಹೊಳೆ!
ಸಂತೆ ಮಾರುಕಟ್ಟೆ ಅವ್ಯವಸ್ಥೆಯ ಅಗ್ರಸ್ಥಾನದಲ್ಲಿದೆ. ಮೂಲಸೌಕರ್ಯ ಮರೀಚಿಕೆಯಾಗಿದೆ. ಲಕ್ಷಾಂತರ ರೂ.ಗೆ ಏಲಂಗೊಂಡಿದ್ದರೂ ಗ್ರಾ.ಪಂ. ಕನಿಷ್ಠ ಹಣವನ್ನು ಮಾರುಕಟ್ಟೆಗೆ ವಿನಿಯೋಗಿಸುತ್ತಿಲ್ಲ. ಬೀಳುವ ಹಂತದಲ್ಲಿರುವ ಮಾರುಕಟ್ಟೆಯ ಕಟ್ಟಡಗಳು, ಅಪಾಯಕಾರಿ ಮರಗಳಿಂದಾಗಿ ವ್ಯಾಪಾರಿಗಳು ಭಯದಿಂದ ವ್ಯಾಪಾರ ಮಾಡುವಂತಾಗಿದೆ. ರಸ್ತೆಯ ಮೇಲೆ ಇಟ್ಟು ವ್ಯಾಪಾರ ಮಾಡುತ್ತಿದ್ದಾರೆ. ಮಳೆ ಬಂದಾಗ ಮಾರುಕಟ್ಟೆ ಹೊಳೆಯಂತಾಗುತ್ತದೆ. -ರಾಜೇಂದ್ರ ಪೂಜಾರಿ ಬೆಚ್ಚಳ್ಳಿ, ವ್ಯಾಪಾರಿ

- ಸತೀಶ ಆಚಾರ್‌ ಉಳ್ಳೂರು

Dailyhunt
Disclaimer: This content has not been generated, created or edited by Dailyhunt. Publisher: Udayavani