Sunday, 11 Apr, 9.46 pm ಉದಯವಾಣಿ

ಟಾಪ್ 10 ಸುದ್ದಿ
ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಬರಲು ಎಷ್ಟು ಹಣ ಪಡೆದಿದ್ದಾರೆ : ಈಶ್ವರಪ್ಪ ಪ್ರಶ್ನೆ

ರಾಮದುರ್ಗ: ಬಿಜೆಪಿಯವರು ಆಪರೇಷನ್‌ ಕಮಲದ ಮೂಲಕ ಹಣ ನೀಡಿ ಕಾಂಗ್ರೆಸ್‌ ಶಾಸಕರನ್ನು ಖರೀದಿಸಿದ್ದಾರೆ ಎಂದು ಆರೋಪಿಸುವ ಸಿದ್ದರಾಮಯ್ಯ, ಜೆಡಿಎಸ್‌ ಬಿಟ್ಟು ಕಾಂಗ್ರೆಸ್‌ಗೆ ಬಂದಾಗ ಎಷ್ಟು ಹಣ ಪಡೆದುಕೊಂಡಿದ್ದಾರೆ ಎಂದು ಸ್ಪಷ್ಟಪಡಿಸಲಿ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ಸವಾಲು ಹಾಕಿದರು.

ಬೆಳಗಾವಿ ಲೋಕಸಭಾ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಾರ್ಥ ತಾಲೂಕಿಗೆ ಆಗಮಿಸಿದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನ ಒಳ ಜಗಳದಿಂದಾಗಿ 17 ಶಾಸಕರು ಬಿಜೆಪಿಗೆ ಬಂದಿದ್ದಾರೆ. ಈಗ ಏನೇನೋ ಆರೋಪಿಸುವ ಅವರಿಗೆ ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಇರಲಿಲ್ಲವೇ? ನಮ್ಮ ಪಕ್ಷದ ಬಗ್ಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ತಮ್ಮದೇ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್‌ ಜೈಲಿಗೆ ಹೋಗಿ ಬಂದಿರುವ ಬಗ್ಗೆ ಯಾಕೆ ಮಾತಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ಇದನ್ನೂ ಓದಿ :ನೀತಿ ಸಂಹಿತೆ ಉಲ್ಲಂಘನೆ ಆರೋಪ: ಹೆಚ್‌ಡಿಕೆ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು

ಯತ್ನಾಳ್‌ಗೆ ಕೈಮುಗಿದು ಪ್ರಾರ್ಥನೆ
ಶಾಸಕ ಯತ್ನಾಳ್‌ ಹಿಂದುತ್ವವಾದಿ. ಅವರ ತತ್ವ ಸಿದ್ಧಾಂತಗಳನ್ನು ನಾನೂ ಒಪ್ಪುತ್ತೇನೆ. ಪಕ್ಷ ಸಂಘಟನೆಗೆ ಅವರು ಶ್ರಮಿಸಿದ್ದಾರೆ. ಆದರೆ ಕೇಂದ್ರದ ಪ್ರತಿನಿಧಿಯಾಗಿ ರಾಜ್ಯ ಉಸ್ತುವಾರಿ ವಹಿಸಿಕೊಂಡ ಅರುಣ್‌ ಸಿಂಗ್‌ ಬಗೆಗೆ ಹಗುರವಾಗಿ ಮಾತನಾಡುವುದು ಒಳ್ಳೆಯದಲ್ಲ. ತಮ್ಮ ಹೇಳಿಕೆಯನ್ನು ಹಿಂಪಡೆದುಕೊಳ್ಳಬೇಕು. ಪಕ್ಷದಲ್ಲಿ ನಾಯಕರ ಮಧ್ಯೆ ಭಿನ್ನಾಭಿಪ್ರಾಯ ಇರಬಹುದು. ಅದನ್ನು ಪಕ್ಷದ ವೇದಿಕೆಯಲ್ಲಿಯೇ ಬಗೆಹರಿಸಿಕೊಳ್ಳಬೇಕು. ನಾನು ಅವರಿಗೆ ಸಲಹೆ ನೀಡುತ್ತಿಲ್ಲ. ಬದಲಾಗಿ ನನ್ನ ಸ್ನೇಹಿತರೆಂದು ಕೈಮುಗಿದು ಪ್ರಾರ್ಥಿಸುತ್ತಿದ್ದೇನೆ ಎಂದರು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Udayavani
Top