ದಾವಣಗೆರೆ: ಉಪಚುನಾವಣೆ ಮುಗಿದ ಮೇಲೆ ನಮ್ಮ ಕಚೇರಿಗೆ ಸಿಎಂ ಸಿದ್ದರಾಮಯ್ಯ ಬಂದು ಒಂದು ಗಂಟೆ ಇರಲಿ, ನಾನೂ ಅವರ ಕಚೇರಿಯಲ್ಲಿ ಒಂದು ತಿಂಗಳು ಇರುತ್ತೇನೆ. ಯಾರು ಬುದ್ಧಿವಂತ ಎಂಬುದನ್ನು ಆಗ ತೀರ್ಮಾನ ಮಾಡೋಣ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಸಿಎಂ ಸಿದ್ದರಾಮಯ್ಯಗೆ ಸವಾಲು ಹಾಕಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಸೋಮಣ್ಣ ಕೆಲಸವಿಲ್ಲದ ಸಚಿವ ಎನ್ನುವ ಸಿದ್ದರಾಮಯ್ಯ ಅವರು ನಾನು ಕೆಲಸ ಇಲ್ಲದವನಾ ಅಥವಾ ಸಿದ್ದರಾಮಯ್ಯ ಕೆಲಸ ಇಲ್ಲದವರಾ ಎನ್ನುವುದನ್ನು ಕಚೇರಿಗೆ ಬಂದರೆ ಅಂಕಿ ಅಂಶಗಳ ಸಮೇತ ಕೊಡುತ್ತೇನೆ. ಆಮೇಲೆ ಜನರೇ ತೀರ್ಮಾನ ಮಾಡಲಿ. ಅವರು ಮೊದಲು ನಮ್ಮ ಕಚೇರಿಗೆ ಬರಲಿ. ಸಿದ್ದರಾಮಯ್ಯಗೆ ತಾಂತ್ರಿಕ ವ್ಯವಸ್ಥೆ ಬಗ್ಗೆ ಏನೂ ಗೊತ್ತಿಲ್ಲ. ಇನ್ನೂ ಹಳೆಯ ಕಾಲದಲ್ಲೇ ಇದ್ದಾರೆ. ಅವರು ಮೊದಲಿನಂತಿಲ್ಲ ಎಂದರು.
ಈಗಿನ ಸಿದ್ದರಾಮಯ್ಯ ನಿದ್ರೆ ಮಾಡುವವರು. ಇನ್ನೊಬ್ಬರ ಬಗ್ಗೆ ಮಾತನಾಡಬೇಕಾದರೆ ಅಂಕಿ ಅಂಶ ಇಟ್ಟುಕೊಂಡು ಮಾತಾಡಬೇಕು. ರಾಜ್ಯದ ಮುಖ್ಯಮಂತ್ರಿ ಎನ್ನುವುದನ್ನು ಮರೆಯಬಾರದು. ನಾನು ಕೇಂದ್ರ ಸರ್ಕಾರದ 142 ಕೋಟಿ ಜನರ ಪ್ರತಿನಿಧಿ, ನರೇಂದ್ರ ಮೋದಿ ಸಚಿವ ಸಂಪುಟದ ಸದಸ್ಯ. ಗಾಂಭೀರ್ಯತೆಯಿಂದ ನಡೆದುಕೊಳ್ಳಲಿ ಎಂದು ಗುಡುಗಿದರು.
ದುಡ್ಡಿನಿಂದ ಮತ ಬರುತ್ತವೆ ಎನ್ನುವುದನ್ನು ಮರೆಯಬೇಕಾಗುತ್ತದೆ. ಈ ಸರ್ಕಾರ ಸಂಪೂರ್ಣ ನಿಷ್ಕ್ರಿಯವಾಗಿದೆ. ಮೂರು ವರ್ಷ ಕಾಲ ಕಳೆದು ಜನರಿಗೆ ಮತ್ತೆ ವಂಚನೆ ಮಾಡಲು ಬರುತ್ತಿದ್ದಾರೆ. ಸರ್ಕಾರದಿಂದ ನಡೆದ ಯಾವುದಾದರೂ ಒಂದು ಸಾಧನೆ, ಹೆಜ್ಜೆ ಗುರುತು ಇದ್ದರೆ ತೋರಿಸಲಿ. ಆಡಳಿತ ಪಕ್ಷದ ಒಬ್ಬನೇ ಒಬ್ಬ ಶಾಸಕ ನೆಮ್ಮದಿಯಾಗಿದ್ದೀನಿ ಎಂದು ಹೇಳಲಿ ನೋಡೋಣ. ಕ್ಷೇತ್ರದ ಮುಸಲ್ಮಾನರು ಬುದ್ಧಿವಂತರಾಗಿದ್ದಾರೆ. ಅವರಿಗೆ ಸರಿಯಾಗಿ ಬುದ್ಧಿ ಕಲಿಸುತ್ತಾರೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ವೀರಶೈವ ಲಿಂಗಾಯತ ಮತದಾರರು ನಿರ್ಣಾಯಕ. ಈಗ ಅಲ್ಪಸಂಖ್ಯಾತ ಸಮುದಾಯ ಕಾಂಗ್ರೆಸ್ ಜತೆ ಇಲ್ಲ. ಅಲ್ಪಸಂಖ್ಯಾತರು ಬಿಜೆಪಿನೇ, ಲಿಂಗಾಯತರು ಬಿಜೆಪಿನೇ. ಈ ದೇಶದಲ್ಲಿರೋ ಎಲ್ಲ ಜಾತಿ, ಎಲ್ಲಾ ವರ್ಗದವರು ಕೂಡ ಬಿಜೆಪಿ ಪರವಾಗಿದ್ದಾರೆ ಎಂದರು.

