Dailyhunt
ಸೋನಿಯಾ,ರಾಹುಲ್ ಮತ್ತು ನಾನು ಕುಳಿತು ನಿರ್ಣಯ ಕೈಗೊಳ್ಳುತ್ತೇವೆ; ಖರ್ಗೆ

ಸೋನಿಯಾ,ರಾಹುಲ್ ಮತ್ತು ನಾನು ಕುಳಿತು ನಿರ್ಣಯ ಕೈಗೊಳ್ಳುತ್ತೇವೆ; ಖರ್ಗೆ

ಲಬುರಗಿ: ರಾಜ್ಯ ಕಾಂಗ್ರೆಸ್ ನಲ್ಲಿ ಅಧಿಕಾರ ಬದಲಾವಣೆ, ದಲಿತ ಸಿಎಂ ಹೀಗೆ ವಿವಿಧ ವಿಚಾರಗಳು ಚರ್ಚೆಗೆ ಬಂದಿರುವ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ(ಮೇ1)ಮಹತ್ವದ ಹೇಳಿಕೆ ನೀಡಿದ್ದಾರೆ. ''ರಾಜಕೀಯ ವಿದ್ಯಮಾನಗಳ ಕುರಿತು ನಾವು ಮೂರು ಜನ ಸೋನಿಯಾ ಗಾಂಧಿ- ರಾಹುಲ್ ಗಾಂಧಿ ಹಾಗೂ ತಾವು ಕೂಡಿ ನಿರ್ಣಯ ಕೈಗೊಳ್ಳುತ್ತೇವೆ''ಎಂದು ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ರಾಜಕೀಯ ನಿರ್ಣಯ ಗಳನ್ನು ನಾವು ಮೂವರೇ ಕುಳಿತು ಕೈಗೊಳ್ಳುತ್ತೇವೆ. ಹೀಗಾಗಿ ರಾಜ್ಯದ ರಾಜಕೀಯ ವಿದ್ಯಮಾನಕ್ಕೆ ಸಂಬಂಧ ಪಟ್ಟಂತೆ ಸಹ ಶೀಘ್ರ ಮೂವರು ಚರ್ಚಿಸಿ ನಿರ್ಣಯ ಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.

ನಿರ್ಣಯ ಕೈಗೊಳ್ಳುವ ಕುರಿತಾದ ದಿನಾಂಕ ನಿಗದಿಯಾಗಿಲ್ಲ. ದಿನಾಂಕ ನಿಗದಿಯಾದಾಗ ತಮಗೆ ( ಮಾಧ್ಯಮಗಳಿಗೆ) ತಿಳಿಸಲಾಗುವುದು. ಪ್ರಮುಖವಾಗಿ ನಾವು ತೆಗೆದುಕೊಳ್ಳುವ ನಿರ್ಣಯಕ್ಕೆ ಎಲ್ಲರೂ ಒಪ್ಪಿಕೊಳ್ಳಬೇಕು ಎಂದರು.

ಬುದ್ದನ ಸಂದೇಶ ಇಂದು ಬಹಳ ಪ್ರಸ್ತುತವಾಗಿವೆ. ಶಾಂತಿ ಬಯಸುವ ಬುದ್ದನ ತತ್ವ ಜಗತ್ತಿಗೆ ಅಗತ್ಯವಾಗಿವೆ. ಇಂದು ಬುದ್ದ ಬೇಕಾಗಿದ್ದು, ಯುದ್ದ ಬೇಡಾಗಿದೆ. ಅಂದರೆ ಯುದ್ದದಿಂದ ವಿಶ್ವದಲ್ಲಿ ಸಾಕಷ್ಟು ತೊಂದರೆಗಳಾಗುತ್ತಿವೆ. ಎರಡು ದೇಶಗಳ ನಡುವೆ ಯುದ್ದ ನಡೆಯುತ್ತಿದೆಯಾದರೂ ಅದರ ಪರಿಣಾಮ ನೂರಾರು ದೇಶಗಳ ಮೇಲೆ ಪರಿಣಾಮ ಬೀರುತ್ತಿದೆ.‌ ತೈಲ ಅಭಾವ, ಗ್ಯಾಸ್ ಬೆಲೆ ಹೆಚ್ಚಳವಾಗುತ್ತಿದೆ. ಒಮ್ಮೇಲೆ 993 ರೂ ವಾಣಿಜ್ಯ ಬಳಕೆ ಸಿಲೆಂಡರ್ ದರ ಹೆಚ್ಚಳ ಮಾಡಿರುವುದು ನಿಜಕ್ಕೂ ಜನ ಸಾಮಾನ್ಯರ ಬದುಕಿನ‌ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಪ್ರಮುಖ ಈ ಸಮಯದಲ್ಲಿ ನಮ್ಮ ದೇಶದ ಪ್ರಧಾನಿ ಯಾರೊಬ್ಬರನ್ನು ಅಪ್ಪಿಕೊಳ್ಳಬಾರದು. ಪ್ರನುಖವಾಗಿ ರಾಜಕೀಯ ಮಾಡಬಾರದು ಎಂದರು.

ಪ್ರಧಾನಿ ಮೋದಿ ದೇಶದ ಜನರ ಹಿತ ಬಯಸುತ್ತಿಲ್ಲ. ಅದರಲ್ಲೂ ಕಾರ್ಮಿಕರ ನೀತಿಗಳನ್ನು ತಿರುಚಲಾಗುತ್ತಿದೆ. ಅದರಲ್ಲೂ ಪಂಡಿತ ಜವಾಹರಲಾಲ‌ ನೆಹರು ಜಾರಿಗೆ ತಂದ ಕಾರ್ಮಿಕ ನೀತಿಗಳನ್ನು ಬದಲಾವಣೆ ಮೂಲಕ ಕಾರ್ಮಿಕರ ಹಕ್ಕುಗಳನ್ನು ದಮನ ಮಾಡಲಾಗುತ್ತಿದೆ. ಇದಲ್ಲದೇ ಮೂರು ಕರಾಳ ಕಾರ್ಮಿಕ ವಿರೋಧಿ ಕಾನೂನುಗಳು ಜಾರಿಗೆ ತಂದು ಪೆಟ್ಟು ನೀಡಲಾಗಿದೆ. ಕಾರ್ಮಿಕರ ದಿನಾಚರಣೆ ಈ ಸಂದರ್ಭದಲ್ಲಿ ಕರಾಳ ಕಾರ್ಮಿಕರ ಕಾಯ್ದೆಗಳನ್ನು ವಾಪಸ್ ಪಡೆಯಬೇಕೆಂದು ಕಾಂಗ್ರೆಸ್ ಆಗ್ರಹಿಸುತ್ತದೆ ಎಂದರು.

ದೇಶದ ಹಿತಾಸಕ್ತಿ ಮರೆತು ಪ್ರಧಾನಿ ಬರೀ ಚುನಾವಣಾ ಭಾಷಣದಲ್ಲಿ ತೊಡಗಿದ್ದು, ಪ್ರಮುಖ ಸಮಸ್ಯೆಗಳನ್ನು ಮರೆಮಾಚಲಾಗುತ್ತಿದೆ.‌ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಮೂಲ ಉದ್ದೇಶ ಪೆಟ್ಟು ನೀಡಲಾಗಿದೆ. ಯುಪಿಎ ಸರ್ಕಾರ ಕೃಷಿ ಕೂಲಿ ಕಾರ್ಮಿಕರಿಗೆ ಹೊಲದಲ್ಲಿ ಕೆಲಸ ಇಲ್ಲದ ಸಮಯದಲ್ಲಿ ಉದ್ಯೋಗ ನೀಡುವ ನಿಟ್ಟಿನಲ್ಲಿ ಜಾರಿ ತರಲಾಗಿದೆ. ಆದರೆ ಕೇಂದ್ರ ಸರ್ಕಾರ ಬದಲಾವಣೆಗೊಳಿಸಿ ಕಾರ್ಮಿಕ ವಿರೋಧಿ ನೀತಿ ಅನುಸರಿಸಲಾಗಿದೆ. ಕಾರ್ಮಿಕರಿಗೆ ದಿನಕ್ಕೆ ಕನಿಷ್ಠ 400 ವೇತನ ನೀಡಬೇಕು. ಪ್ರಮುಖವಾಗಿ ಕಾರ್ಮಿಕರ ದಿನಾಚರಣೆಯಂಗವಾಗಿ ಕೇಂದ್ರ ಸರ್ಕಾರ ಈಗಲಾದರೂ ಕಾರ್ಮಿಕರ ಹಿತ ಕಾಯಲು ಮುಂದಾಗಬೇಕು ಎಂದು ಖರ್ಗೆ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಎಐಸಿಸಿ ಸಲಹೆಗಾರ ಪ್ರಣವ ಝಾ, ಸಚಿವ ಡಾ. ಶರಣಪ್ರಕಾಶ ಪಾಟೀಲ್ , ಶಾಸಕರಾದ ಅಲ್ಲಮಪ್ರಭು ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಜಗದೇವ ಗುತ್ತೇದಾರ, ತಿಪ್ಪಣ್ಣಪ್ಪ‌ ಕಮಕನೂರ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಶರಣಕುಮಾರ ಮೋದಿ ಸೇರಿದಂತೆ ಮುಂತಾದವರಿದ್ದರು.‌

Dailyhunt
Disclaimer: This content has not been generated, created or edited by Dailyhunt. Publisher: Udayavani