Dailyhunt Logo
  • Light mode
    Follow system
    Dark mode
    • Play Story
    • App Story
ಸೌಕೂರು- ಕಂಡ್ಲೂರು ರಸ್ತೆ ಗುಂಡಿಮಯ!

ಸೌಕೂರು- ಕಂಡ್ಲೂರು ರಸ್ತೆ ಗುಂಡಿಮಯ!

ಕಂಡ್ಲೂರು: ಇಲ್ಲಿನ ಮಾವಿನಕಟ್ಟೆ ಕ್ರಾಸ್‌ನಿಂದ ಪ್ರಸಿದ್ಧ ಸೌಕೂರು ದೇವಸ್ಥಾನ ಮಾರ್ಗವಾಗಿ ಕಂಡ್ಲೂರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸಂಚಾರ ದುಸ್ತರವಾಗಿದೆ.

ಈ ರಸ್ತೆಯಲ್ಲಿ ಪ್ರತಿದಿನ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸರಕಾರಿ ಹಾಗೂ ಖಾಸಗಿ ನೌಕರರು, ಕಾರ್ಖಾನೆ ಕಾರ್ಮಿಕರು, ಮಹಿಳೆಯರು ಸೇರಿದಂತೆ ನೂರಾರು ಮಂದಿ ಸಂಚರಿಸುತ್ತಿದ್ದಾರೆ.

ರಸ್ತೆ ಹೊಂಡಮಯವಾಗಿರುವುದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದು, ಅಪಘಾತದ ಭೀತಿ ಯಲ್ಲೇ ಓಡಾಡುವಂತಾಗಿದೆ.

ಮೂರರಲ್ಲಿ ಎರಡು ಕಿ.ಮೀ. ಹಾಳು
ಮಾವಿನಕಟ್ಟೆ ಕ್ರಾಸ್‌ನಿಂದ ಕಂಡ್ಲೂರು ವರೆಗೆ ಸುಮಾರು 3 ಕಿ.ಮೀ. ಉದ್ದದ ಸಂಪರ್ಕ ರಸ್ತೆಯ ಪೈಕಿ ಸುಮಾರು 2 ಕಿ.ಮೀ. ರಸ್ತೆ ಹದಗೆಟ್ಟಿದೆ. ರಸ್ತೆಯ ಹಲವೆಡೆ ಬೃಹತ್‌ ಹೊಂಡಗುಂಡಿಗಳು ನಿರ್ಮಾಣವಾಗಿದೆ. ಈಗಾಗಲೇ ರಸ್ತೆ ಹಾಳಾಗಿರುವ ನಡುವೆಯೇ ಕುಡಿಯುವ ನೀರಿನ ಪೈಪ್‌ಲೈನ್‌ ಅಳವಡಿಕೆ ಕಾಮಗಾರಿಗಾಗಿ ಹಲವೆಡೆ ರಸ್ತೆಯನ್ನು ಅಡ್ಡಲಾಗಿ ಅಗೆದು, ಬಳಿಕ ಸಮರ್ಪಕವಾಗಿ ಮಣ್ಣು ತುಂಬದೆ ಹಾಗೆಯೇ ಬಿಟ್ಟಿರುವ ಕಾರಣ ದ್ವಿಚಕ್ರ ವಾಹನ ಸವಾರರು ನಿತ್ಯ ಅಪಾಯದ ನಡುವೆ ಸಂಚರಿಸುವಂತಾಗಿದೆ.

80ಕ್ಕೂ ಮಿಕ್ಕಿ ಮನೆ
ಈ ಸಂಪರ್ಕ ರಸ್ತೆಯುದ್ದಕ್ಕೂ 80ಕ್ಕೂ ಹೆಚ್ಚು ಮನೆಗಳಿದ್ದು, ಪ್ರತಿದಿನ 150ಕ್ಕೂ ಅಧಿಕ ವಾಹನಗಳು ಸಂಚರಿಸುತ್ತವೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸರಕಾರಿ ಹಾಗೂ ಖಾಸಗಿ ನೌಕರರು, ಕಾರ್ಖಾನೆ ಕಾರ್ಮಿಕರು ಮತ್ತು ಮಹಿಳೆಯರು ಸೇರಿದಂತೆ ನೂರಾರು ಮಂದಿ ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ಕಂಡ್ಲೂರು ಹಾಗೂ ನೆಲ್ಲಿಕಟ್ಟೆ ಭಾಗದಲ್ಲಿ ಐದಾರು ಶಾಲಾ-ಕಾಲೇಜುಗಳಿರುವುದರಿಂದ ಬೆಳಗ್ಗೆ ಮತ್ತು ಸಂಜೆ ವೇಳೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚಿರುತ್ತದೆ. ಅಲ್ಲದೆ, 8ರಿಂದ 10 ಶಾಲಾ ಬಸ್‌ಗಳಲ್ಲಿ ಪ್ರತಿದಿನ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದಾರೆ.

ದೇವಸ್ಥಾನದ ಎದುರೇ ರಸ್ತೆ ಹಾಳು!
ಪ್ರಸಿದ್ಧ ಸೌಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಪ್ರತಿದಿನ ವಿವಿಧ ಭಾಗಗಳಿಂದ ಭಕ್ತರು ಭೇಟಿ ನೀಡುತ್ತಾರೆ. ಮಂಗಳವಾರ, ಶುಕ್ರವಾರ ಹಾಗೂ ವಿಶೇಷ ದಿನಗಳಲ್ಲಿ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಿರುತ್ತದೆ. ಆದರೆ ದೇವಸ್ಥಾನದ ಸಮೀಪದ ರಸ್ತೆ ಹೊಂಡಗುಂಡಿಗಳಿಂದ ಸಂಪೂರ್ಣ ಹದಗೆಟ್ಟಿದೆ. ಮಳೆಗಾಲದಲ್ಲಿ ರಸ್ತೆ ಮತ್ತಷ್ಟು ಹಾಳಾಗಿದ್ದು, ಭಕ್ತರು ಹಾಗೂ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಆಗಾಗ್ಗೆ ಅಪಘಾತ, ಕಾರೂ ಉರುಳಿತ್ತು!
ಕಾವ್ರಾಡಿ ಹಾಗೂ ಗುಲ್ವಾಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಗೆ ಬರುವ ಸೌಕೂರು   - ಕಂಡ್ಲೂರು ರಸ್ತೆಯ ಅಗಲ ಕಿರಿದಾಗಿರುವುದರಿಂದ ಆಗಾಗ್ಗೆ ಅಪಘಾತಗಳು ಸಂಭವಿಸುತ್ತಿವೆ. ಕೆಲವೆಡೆ ರಸ್ತೆ ಬದಿಯಲ್ಲಿ ಆಳವಾದ ತಗ್ಗುಗಳಿರುವುದರಿಂದ ವಾಹನ ಸಂಚಾರ ಮತ್ತಷ್ಟು ಅಪಾಯಕಾರಿ ಯಾಗಿದೆ. ಈ ಹಿಂದೆ ದ್ವಿಚಕ್ರ ವಾಹನ ಸವಾರರೊಬ್ಬರು ಬೈಕ್‌ನೊಂದಿಗೆ ರಸ್ತೆ ಬದಿಯ ತಗ್ಗಿಗೆ ಜಾರಿ ಬಿದ್ದ ಘಟನೆ ನಡೆದಿತ್ತು. ಅಲ್ಲದೆ ಸುಮಾರು ಎಂಟು ತಿಂಗಳ ಹಿಂದೆ ಕಾರೊಂದು ನಿಯಂತ್ರಣ ತಪ್ಪಿ ಉರುಳಿ ಬಿದ್ದ ಘಟನೆ ಕೂಡ ಸಂಭವಿಸಿತ್ತು. ಹೀಗಾಗಿ ಸಂಭವಿಸಬಹುದಾದ ಅನಾಹುತಗಳನ್ನು ತಪ್ಪಿಸಲು ರಸ್ತೆ ದುರಸ್ತಿ ಹಾಗೂ ಅಗಲೀಕರಣ ಕಾಮಗಾರಿ ನಡೆಯಲಿ ಎಂಬುದು ಸ್ಥಳೀಯರ ಆಗ್ರಹ.

ಈ ಸಂಪರ್ಕ ರಸ್ತೆಯನ್ನು 2015-16ನೇ ಸಾಲಿನಲ್ಲಿ, ಅಂದರೆ ಸುಮಾರು ಹತ್ತು ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು. ಬಳಿಕ ಇದುವರೆಗೆ ರಸ್ತೆ ದುರಸ್ತಿ ಅಥವಾ ತೇಪೆ ಕಾಮಗಾರಿಯೂ ನಡೆದಿಲ್ಲ. ಪರಿಣಾಮ ರಸ್ತೆಯಲ್ಲಿನ ಹೊಂಡಗುಂಡಿಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜಲ್ಲಿಕಲ್ಲುಗಳು ಮೇಲಕ್ಕೆದ್ದು ವಾಹನ ಸಂಚಾರಕ್ಕೆ ಅಪಾಯಕಾರಿಯಾಗಿ ಪರಿಣಮಿಸಿವೆ.

100ಕ್ಕೂ ಕಾರ್ಮಿಕರ ಓಡಾಟ
ಕಂಡ್ಲೂರು, ನೆಲ್ಲಿಕಟ್ಟೆಯಲ್ಲಿ ಹಂಚಿನ ಕಾರ್ಖಾನೆ ಹಾಗೂ ಮುಳ್ಳುಗುಡ್ಡೆಯಲ್ಲಿ ಗೇರು ಬೀಜ ಕಾರ್ಖಾನೆಯಿದ್ದು, ಇಲ್ಲಿಗೆ ಕೆಲಸಕ್ಕೆ ತೆರಳುವ 100ಕ್ಕೂ ಅಧಿಕ ಕಾರ್ಮಿಕರು ಇದೇ ರಸ್ತೆಯಲ್ಲಿ ನಿತ್ಯ ಸಂಚರಿಸುತ್ತಾರೆ. ಜತೆಗೆ ನೇರಳಕಟ್ಟೆ, ಮಾವಿನಕಟ್ಟೆ, ಬಟ್ರಾಡಿ, ಕೋಳಿಫಾರಂ, ಕೆತ್ತೆಮಕ್ಕಿ ಭಾಗದಿಂದ ಅಂಪಾರು, ಸಿದ್ದಾಪುರ ಭಾಗಗಳಿಗೆ ತೆರಳುವವರು ಕೂಡ ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ.

ರಸ್ತೆಯನ್ನು ವಿಸ್ತರಿಸಿ
ಸೌಕೂರು- ಕಂಡ್ಲೂರು ರಸ್ತೆಯಲ್ಲಿ ದಿನದಿಂದ ದಿನಕ್ಕೆ ವಾಹನಗಳ ಓಡಾಟ ಹೆಚ್ಚುತ್ತಿದೆ. ರಸ್ತೆ ವಿಸ್ತರಣೆಗೆ ಸಂಬಂಧಿಸಿದಂತೆ ಈಗಾಗಲೇ ಶಾಸಕರಿಗೆ, ಸಂಸದರಿಗೆ ಸ್ಥಳೀಯಾಡಳಿತಕ್ಕೆ ಮನವಿ ನೀಡಲಾಗಿದೆ. ಕೂಡಲೇ ಸಂಬಂಧಪಟ್ಟ ಆಡಳಿತ ವ್ಯವಸ್ಥೆ ರಸ್ತೆ ದುರಸ್ತಿ ಹಾಗೂ ವಿಸ್ತರಣೆಗೆ ಕ್ರಮ ಕೈಗೊಳ್ಳಲಿ. - ಸುರೇಂದ್ರ ಶೆಟ್ಟಿ, ಮಾಜಿ ಸದಸ್ಯ, ಗುಲ್ವಾಡಿ ಗ್ರಾ.ಪಂ.

ಸ್ಥಳೀಯಾಡಳಿತದಿಂದ ಕಾಮಗಾರಿ ಅಸಾಧ್ಯ
ಸೌಕೂರು- ಕಂಡ್ಲೂರು ರಸ್ತೆಯ ಸಮಸ್ಯೆ ಗಮನದಲ್ಲಿದೆ. ಆದರೆ ಬಹುವೆಚ್ಚದ ಕಾಮಗಾರಿ ಇದಾಗಿರುವುದರಿಂದ ಗ್ರಾ.ಪಂ. ಮಟ್ಟದಿಂದ ಅಸಾಧ್ಯ. ಲೋಕೋಪಯೋಗಿ ಇಲಾಖೆ ಈ ಬಗ್ಗೆ ಕ್ರಮ ಕೈಗೊಳ್ಳಲಿ. - ಗಣೇಶ್‌ ಹೆಬ್ಟಾರ್‌, ಗುಲ್ವಾಡಿ ಗ್ರಾಮ ಪಂಚಾಯತ್‌ ಪಿಡಿಒ

- ವಿಜಯಕುಮಾರ ಹಿರೇಮಠ

Dailyhunt
Disclaimer: This content has not been generated, created or edited by Dailyhunt. Publisher: Udayavani