Saturday, 21 Nov, 6.20 am ಉದಯವಾಣಿ

ಟಾಪ್ 10 ಸುದ್ದಿ
ಸೃಷ್ಟಿಯ ಮಹಾ ನಿಯಮವನ್ನು ಗೌರವಿಸುವ ಜೀವನ

ಈ ಸೃಷ್ಟಿಯಲ್ಲಿ ಸರಿ ಅಥವಾ ತಪ್ಪು ಎಂಬಂಥ ಕಪ್ಪು-ಬಿಳುಪು ತೀರ್ಮಾನಗಳಿಲ್ಲ; ಯುಕ್ತಾ ಯುಕ್ತತೆ ಮಾತ್ರ ಇರುವುದು. ಸತ್ಯ-ಸುಳ್ಳು, ಸರಿ-ತಪ್ಪು, ನೈತಿಕ-ಅನೈತಿಕ, ಶೀಲ-ಅಶ್ಲೀಲ ಇತ್ಯಾದಿಗಳೆಲ್ಲವೂ ಯಾದೃಚ್ಛಿಕವಾಗಿರುತ್ತವೆ. ಅಂದರೆ ಕಾಲ- ದೇಶಗಳ ಆಧಾರದಲ್ಲಿ, ಸಮಯ – ಸಂದರ್ಭಗಳ ಹಿನ್ನೆಲೆಯಲ್ಲಿ ಬದಲಾಗುತ್ತವೆ. ನಮ್ಮಲ್ಲಿ ಅಶ್ಲೀಲ ಎನಿಸಿದ್ದು ಪಶ್ಚಿಮದ ದೇಶಗಳಲ್ಲಿ ಅಶ್ಲೀಲ ಅಲ್ಲದಿರ ಬಹುದು. ಈಗ ಅನೈತಿಕ ಎನ್ನಿಸಿಕೊಂಡದ್ದು ಮುಂದೊಂದು ದಿನ ಸ್ವೀಕೃತವಾಗಬಹುದು. ಹಾಗಾಗಿ ಕಾಲ- ದೇಶಗಳ ಆಧಾರದಲ್ಲಿ, ಸಮಯ- ಸಂದರ್ಭಗಳ ಹಿನ್ನೆಲೆಯಲ್ಲಿ ಯಾವುದು ಯುಕ್ತವೋ ಅದನ್ನು ಮಾಡ ಬೇಕು. ಇದಕ್ಕಾಗಿ ವಿವೇಚನೆ ಅಗತ್ಯ.

ವಿಷ್ಣುವಿಗೆ ಇಬ್ಬರು ಪತ್ನಿಯರು. ಒಬ್ಟಾಕೆ ಅದೃಷ್ಟಲಕ್ಷ್ಮೀ, ಇನ್ನೊಬ್ಬಳು ದುರಾದೃಷ್ಟ ಲಕ್ಷ್ಮೀ. ಇಬ್ಬರಿಗೂ ತಾವೇ ಸುಂದರಿಯರು ಎಂಬ ಹಮ್ಮು ಇತ್ತು. ಒಂದು ದಿನ ಇಬ್ಬರೂ ಬಂದು ವಿಷ್ಣು ದೇವರಲ್ಲಿ “ಪತಿದೇವಾ, ನಮ್ಮಿಬ್ಬರಲ್ಲಿ ಯಾರು ಹೆಚ್ಚು ಸೌಂದರ್ಯ ವುಳ್ಳವರು’ ಎಂದು ಕೇಳಿ ದರು. ವಿಷ್ಣು ಅದೃಷ್ಟ ಲಕ್ಷ್ಮಿ ಯಲ್ಲಿ, “ನೀನು ಆಗಮಿ ಸುತ್ತಿರುವಾಗ ಬಹಳ ಸುಂದರಿಯಾಗಿ ಕಾಣುತ್ತೀ’ ಎಂದ. ದುರಾದೃಷ್ಟಲಕ್ಷ್ಮಿ ಯಲ್ಲಿ, “ನೀನು ನಿರ್ಗಮಿಸುತ್ತಿರುವಾಗ ಸುಂದರಿಯಾಗಿ ತೋರುತ್ತೀ’ ಎಂದ. ಅದೃಷ್ಟ ಬರುವಾಗ, ದುರಾದೃಷ್ಟ ಹೋಗು ವಾಗ – ತುಂಬಾ ಚೆನ್ನಾಗಿರುತ್ತದೆಯಲ್ಲವೇ?ಯುಕ್ತಾಯುಕ್ತತೆ ಎಂದರೆ ಇದು.

ಬದುಕು ಹೀಗೆಯೇ. ಇಲ್ಲಿ ಸರಿ ಅಥವಾ ತಪ್ಪುಗಳಿಲ್ಲ. ಎಲ್ಲವೂ ಸೃಷ್ಟಿಯ ಒಂದು ಮಹಾ ನಿಯಮದ ಪ್ರಕಾರ ನಡೆಯುತ್ತಿರುತ್ತದೆ. ಅದನ್ನು ನಮಗೆ ಬದಲಿಸಲಾಗುವುದಿಲ್ಲ. ಆದಿ ಮತ್ತು ಅಂತ್ಯವೇ ಇಲ್ಲದ “ಕಾಲ’ದ ಯಾವುದೋ ಒಂದು ಬಿಂದುವಿನಲ್ಲಿ ಆಗಿ -ಹೋಗುವ ನಾವು “ಇದು ಸರಿ’, “ಇದು ತಪ್ಪು’ ಎಂದು ನಿರ್ಣಯ ಹೇಳುವುದು ಹೇಗೆ? ಹಾಗಾಗಿಯೇ ಬದುಕು ಎಂದರೆ ಯುಕ್ತವಾಗಿರುವುದು. ನಾವು ಸೃಷ್ಟಿಯ ನಿಯಮಗಳಿಗೆ ಅನುಗುಣವಾಗಿದ್ದಾಗ, ಯುಕ್ತವಾಗಿದ್ದಾಗ ಬದುಕನ್ನು ಸ್ವೀಕರಿಸಲು ಶಕ್ತರಾಗುತ್ತೇವೆ. ಇದು ಸರಿ, ಇದು ತಪ್ಪು ಎಂದು ನಾವೇ ನಿರ್ಧರಿಸಿಕೊಂಡು ಅದಕ್ಕೆ ತಕ್ಕಂತೆ ಜೀವಿಸಲು ಹೊರಟರೆ ಮೂರ್ಖ ರಾಗಿಬಿಡುತ್ತೇವೆ. ಸರಿಯಾದವುಗಳನ್ನು ಹುಡುಕುತ್ತ ಹೊರಟರೆ ಬದುಕು ಬಂಜೆ ಯಾಗುತ್ತದೆ, ಶೂನ್ಯವಾಗುತ್ತದೆ.

ಜನರು ಸಾಮಾನ್ಯವಾಗಿ ತಾವು ಉತ್ತಮ ನೈತಿಕತೆ, ಸದ್ಗುಣಗಳನ್ನು ಹೊಂದಿದ್ದೇವೆ ಎಂದುಕೊಳ್ಳುತ್ತಾರೆ. ಇದರಿಂದ ಮೇಲರಿಮೆ ಕಾಣಿಸಿಕೊಳ್ಳುತ್ತದೆ. ಮೇಲರಿಮೆ ಎಂದರೆ ತಾನು ಮೇಲೆ, ಎಲ್ಲವೂ ತನಗಿಂತ ಕೆಳಗೆ ಎಂಬ ಭಾವ. ಆಗ ಎಲ್ಲವೂ ಕಳಪೆಯಾಗಿ, ಕೀಳಾಗಿ, ಕುರೂಪಿಯಾಗಿ ತೋರುತ್ತದೆ. ಆದರೆ ಒಳ್ಳೆಯವರು ಎಲ್ಲೆಲ್ಲೂ ಇದ್ದಾರೆ. ಎಲ್ಲರಿಗೂ ಅವರವರದೇ ಆದ ಮೌಲ್ಯಗಳು, ನೈತಿಕತೆ ಇರುತ್ತವೆ. ದಟ್ಟಾರಣ್ಯದ ಮೂಲೆ ಯಲ್ಲಿ ವಾಸಿಸುವ ಆದಿವಾಸಿ ಹಿರಿಯಜ್ಜ ಉತ್ತಮೋತ್ತಮ ಗುಣಗಳನ್ನು ಹೊಂದಿ, ಶೀಲಯುತ ಬದುಕನ್ನು ಬದುಕಿಯೂ ಹೊರಜಗತ್ತಿನ ದೃಷ್ಟಿಗೆ ಬೀಳದೆ ಮಣ್ಣಲ್ಲಿ ಮಣ್ಣಾಗಬಹುದು. ನಾವು -ನೀವು ಏನು ಮಾಡುತ್ತೇವೆ, ನಮ್ಮ ಸರಿ-ತಪ್ಪುಗಳು ಇತ್ಯಾದಿ ಯಾವುದೂ ಅವನನ್ನು ಬಾಧಿಸು ವುದಿಲ್ಲ. ಉತ್ಕೃಷ್ಟವಾಗಿ ಜೀವಿಸಿದವರು ಸ್ವರ್ಗಕ್ಕೆ ಹೋಗುತ್ತಾರೆ ಎಂಬ ಒಂದು ನಂಬಿಕೆಯೊಂದಿಗೆ ಅವನ ಬದುಕು.

ಎಲ್ಲಿ ಆದಿ, ಎಲ್ಲಿ ಅಂತ್ಯ ಎಂಬುದು ತಿಳಿದಿಲ್ಲದ ಈ ಸೃಷ್ಟಿಯನ್ನು ಸರಳಗೊಳಿಸಿ, ಅದಕ್ಕೊಂದು ಚೌಕಟ್ಟು ವಿಧಿಸುವ ಪ್ರಯತ್ನ ನಮ್ಮದು. ಅದಕ್ಕಾಗಿ ನಮ್ಮ ನಿಯಮಗಳು, ಕಟ್ಟಳೆಗಳು, ಸರಿ-ತಪ್ಪಿನ ಪರಿಕಲ್ಪನೆ ಇತ್ಯಾದಿ. ಆದರೆ ಅದಕ್ಕೆ ಬಲವಾಗಿ ಜೋತು ಬಿದ್ದು ಎಲ್ಲವನ್ನೂ ಅವುಗಳ ಮೂಲಕ ನೋಡುವು ದಕ್ಕೆ ಹೊರಟರೆ ಸೃಷ್ಟಿಯ ಮಹಾನಿಯಮ ನಮ್ಮ ಕೈಜಾರುತ್ತದೆ. ಬದುಕಿನಲ್ಲಿ ಯಕ್ತವಾಗಿ ನಡೆದುಕೊಳ್ಳೋಣ, “ವ್ಯವಸ್ಥೆ’ಯನ್ನು ಸೃಷ್ಟಿಗೇ ಬಿಡೋಣ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Udayavani
Top