Dailyhunt Logo
  • Light mode
    Follow system
    Dark mode
    • Play Story
    • App Story
Sullia: ಶಿಕ್ಷಕರಿಲ್ಲದೆ ಕಮಿಲ ಶಾಲೆಗೆ ಬೀಗ

Sullia: ಶಿಕ್ಷಕರಿಲ್ಲದೆ ಕಮಿಲ ಶಾಲೆಗೆ ಬೀಗ

ಸುಳ್ಯ: ಶಾಲಾ ಆರಂಭವಾಗಿ ಕೇವಲ 20 ದಿನಗಳಲ್ಲೇ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮ ಪಂಚಾಯತ್‌ವ್ಯಾಪ್ತಿಯ ಕಮಿಲ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬಾಗಿಲು ಮುಚ್ಚಿದೆ..!

ಪೂರ್ಣಕಾಲಿಕ ಶಿಕ್ಷಕರನ್ನು ನಿಯೋಜಿಸದ ಶಿಕ್ಷಣ ಇಲಾಖೆಯ ನಿರ್ಲಕ್ಷ್ಯವೇ ಶಾಲೆಯ ಅಸ್ತಿತ್ವಕ್ಕೆ ತೆರೆ ಎಳೆದಿದೆ ಎಂಬ ಆರೋಪ ಸ್ಥಳೀಯರಿಂದ ಕೇಳಿಬಂದಿದೆ.

ಎಂಟನೇ ಶಾಲೆ
ಕಳೆದ ವಾರವಷ್ಟೇ ಸುಳ್ಯ ತಾಲೂಕಿನ ಏಳು ಶಾಲೆಗಳನ್ನು ಅಧಿಕೃತವಾಗಿ ಮುಚ್ಚಲಾಗಿತ್ತು. ಅವುಗಳಲ್ಲಿ ಗುತ್ತಿಗಾರು ವ್ಯಾಪ್ತಿಯ ಎರಡು ಶಾಲೆಗಳೂ ಸೇರಿದ್ದವು. ಇದೀಗ ಅದೇ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕಮಿಲ ಶಾಲೆಯಲ್ಲೂ ವಿದ್ಯಾರ್ಥಿಗಳಿಲ್ಲದೆ ಬೋಧನಾ ಚಟುವಟಿಕೆ ಸ್ಥಗಿತಗೊಂಡಿರುವುದು ಗ್ರಾಮೀಣ ಶಿಕ್ಷಣ ವ್ಯವಸ್ಥೆಯ ದುಸ್ಥಿತಿಯನ್ನು ಮತ್ತೂಮ್ಮೆ ಬಯಲಿಗೆಳೆದಿದೆ.

ದಿನಕ್ಕೊಬ್ಬ ಶಿಕ್ಷಕ...!
ಈ ಶೈಕ್ಷಣಿಕ ವರ್ಷದ ಆರಂಭದಲ್ಲಿ ಕಮಿಲ ಶಾಲೆಯಲ್ಲಿ ನಾಲ್ವರು ವಿದ್ಯಾರ್ಥಿಗಳು ದಾಖಲಾಗಿ ಪ್ರತಿದಿನ ಶಾಲೆಗೆ ಹಾಜರಾಗುತ್ತಿದ್ದರು. ಆದರೆ ಶಾಲೆಗೆ ಪೂರ್ಣಕಾಲಿಕ ಶಿಕ್ಷಕರನ್ನು ನೇಮಿಸದೆ, ನಡುಗಲ್ಲು ಹಾಗೂ ಗುತ್ತಿಗಾರು ಪಿಎಂಶ್ರೀ ಶಾಲೆಗಳಿಂದ ದಿನಕ್ಕೊಬ್ಬರಂತೆ ಶಿಕ್ಷಕರನ್ನು ಕಳುಹಿಸಿ ಪಾಠ ನಡೆಸಲಾಗುತ್ತಿತ್ತು.

ಇಂತಹ ತಾತ್ಕಾಲಿಕ ವ್ಯವಸ್ಥೆಯಿಂದ ಮಕ್ಕಳಲ್ಲಿ ಕಲಿಕೆಯ ನಿರಂತರತೆ ಕಳೆದುಹೋಗಿದ್ದು, ಪೋಷಕರಲ್ಲೂ ಆತಂಕ ಮೂಡಿಸಿತ್ತು. ಅತಿಥಿ ಶಿಕ್ಷಕರೊಬ್ಬರನ್ನು ನೇಮಿಸುವ ಪ್ರಯತ್ನವೂ ನಡೆದಿತ್ತಾದರೂ ಅದು ಒಂದು ದಿನಕ್ಕಷ್ಟೇ ಸೀಮಿತವಾಯಿತು. ಪರಿಣಾಮ, ಪೋಷಕರು ಮಕ್ಕಳನ್ನು ಸಮೀಪದ ಇತರ ಶಾಲೆಗಳಿಗೆ ದಾಖಲಿಸಿದ್ದು, ಕಮಿಲ ಶಾಲೆಯಲ್ಲಿ ವಿದ್ಯಾರ್ಥಿಗಳೇ ಉಳಿಯದಂತಾಯಿತು.

ಆರು ವರ್ಷಗಳಿಂದ ತಾತ್ಕಾಲಿಕ ವ್ಯವಸ್ಥೆ
ಸ್ಥಳೀಯರ ಪ್ರಕಾರ, ಕಳೆದ ಆರು ವರ್ಷಗಳಿಂದ ಕಮಿಲ ಶಾಲೆಗೆ ಪೂರ್ಣಕಾಲಿಕ ಶಿಕ್ಷಕರನ್ನು ನಿಯೋ ಜಿಸಿರಲಿಲ್ಲ. ಇನ್‌ಚಾರ್ಜ್‌ ವ್ಯವಸ್ಥೆಯ ಮೂಲಕವೇ ಶಾಲೆ ನಡೆಯು ತ್ತಿತ್ತು. ಈ ನಡುವೆ ವಿದ್ಯಾರ್ಥಿಗಳ ಸಂಖ್ಯೆ ನಿರಂತರವಾಗಿ ಕುಸಿದಿದ್ದು, ಕೊನೆಗೆ ಶಾಲೆಯಲ್ಲಿ ಬೋಧನಾ ಚಟುವಟಿಕೆ ಸ್ಥಗಿತಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.

1961ರಲ್ಲಿ ಆರಂಭವಾದ ಶಾಲೆ
1961ರಲ್ಲಿ ಆರಂಭಗೊಂಡ ಕಮಿಲ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಸ್ವಂತ ಜಾಗ, ಸುಸಜ್ಜಿತ ಕಟ್ಟಡ, ವೇದಿಕೆ ಹಾಗೂ ಆಟದ ಮೈದಾನವಿದೆ. ಶಾಲೆಯ ಸಮೀಪದ ಅಂಗನವಾಡಿಯಲ್ಲೂ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವುದು ಆತಂಕ ಮೂಡಿಸಿದೆ.

ಈ ನಡುವೆ ಗುತ್ತಿಗಾರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮೆಟ್ಟಿನಡ್ಕ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದರಿಂದ ಐದನೇ ತರಗತಿವರೆಗೆ 10 ವಿದ್ಯಾರ್ಥಿಗಳಿಗೆ ಒಬ್ಬರೇ ಶಿಕ್ಷಕಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಲೆ ಮಜಲು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 10 ವಿದ್ಯಾರ್ಥಿಗಳಿದ್ದು, ಇಬ್ಬರು ಶಿಕ್ಷಕರಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆ ಇದೇ ರೀತಿ ಕುಸಿದರೆ ಈ ಶಾಲೆಗಳ ಭವಿಷ್ಯವೂ ತೆರೆಮರೆಗೆ ಸರಿಯಲಿದೆ.

ಶಾಶ್ವತವಾಗಿ ಮುಚ್ಚಿಲ್ಲ
ಕಮಿಲ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಶಾಶ್ವತವಾಗಿ ಮುಚ್ಚಿಲ್ಲ. ಸದ್ಯ ವಿದ್ಯಾರ್ಥಿಗಳಿಲ್ಲದ ಕಾರಣ ತಾತ್ಕಾಲಿಕವಾಗಿ ಬೋಧನಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ನಡೆದರೆ ಶಾಲೆಯನ್ನು ಪುನಃ ಆರಂಭಿಸಲಾಗುವುದು.
-ವೈ.ಎಸ್‌. ಹರಗಿ, ಕ್ಷೇತ್ರ ಶಿಕ್ಷಣಾಧಿಕಾರಿ, ಸುಳ್ಯ

Dailyhunt
Disclaimer: This content has not been generated, created or edited by Dailyhunt. Publisher: Udayavani