Dailyhunt Logo
  • Light mode
    Follow system
    Dark mode
    • Play Story
    • App Story
ಸೂರಲ್ಪಾಡಿ: ನೂತನ ಟೋಲ್‌ಗೇಟ್‌ ಬಳಿ ಬ್ಯಾರಿಕೇಡ್‌ಗೆ ಖಾಸಗಿ ಬಸ್‌ ಢಿಕ್ಕಿ, ಮೂವರಿಗೆ ಗಾಯ

ಸೂರಲ್ಪಾಡಿ: ನೂತನ ಟೋಲ್‌ಗೇಟ್‌ ಬಳಿ ಬ್ಯಾರಿಕೇಡ್‌ಗೆ ಖಾಸಗಿ ಬಸ್‌ ಢಿಕ್ಕಿ, ಮೂವರಿಗೆ ಗಾಯ

ಮೂಡುಬಿದಿರೆ: ಮಂಗಳೂರು-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿ 169ರ ಗಂಜಿಮಠ ಸಮೀಪದ ಸೂರಲ್ಪಾಡಿಯಲ್ಲಿ ನಿರ್ಮಾಣ ಹಂತದಲ್ಲಿರುವ ನೂತನ ಟೋಲ್‌ಗೇಟ್ ಪ್ರದೇಶದಲ್ಲಿ ಖಾಸಗಿ ಎಕ್ಸ್‌ಪ್ರೆಸ್‌ (Express) ಬಸ್‌ ರಸ್ತೆ ಬದಿಯ ಸಿಮೆಂಟ್ (Cement) ಬ್ಯಾರಿಕೇಡ್‌ಗೆ ಢಿಕ್ಕಿ ಹೊಡೆದ ಪರಿಣಾಮ ಚಾಲಕ ಹಾಗೂ ಇಬ್ಬರು ಪ್ರಯಾಣಿಕರು ಗಾಯಗೊಂಡ ಘಟನೆ ರವಿವಾರ ಸಂಭವಿಸಿದೆ.

ಕಾರ್ಕಳದಿಂದ ಮಂಗಳೂರಿನತ್ತ ತೆರಳುತ್ತಿದ್ದ ಬಸ್‌ ಸೂರಲ್ಪಾಡಿ ಸಮೀಪ ಸಾಗುತ್ತಿದ್ದಾಗ, ಮುಂಭಾಗದಲ್ಲಿದ್ದ ಟಿಪ್ಪರ್ (Tipper) ಲಾರಿಯೊಂದು ಏಕಾಏಕಿ ಎಡಭಾಗಕ್ಕೆ ತಿರುಗಿದೆ. ಲಾರಿಗೆ ಢಿಕ್ಕಿಯಾಗುವುದನ್ನು ತಪ್ಪಿಸಲು ಚಾಲಕ ಬಸ್‌ ಅನ್ನು ಬಲಭಾಗಕ್ಕೆ ತಿರುಗಿಸಿದಾಗ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಸಿಮೆಂಟ್ ಬ್ಯಾರಿಕೇಡ್‌ಗೆ ಢಿಕ್ಕಿಯಾಗಿದೆ. ಢಿಕ್ಕಿಯ ರಭಸಕ್ಕೆ ಬಸ್‌ನ ಮುಂಭಾಗ ಸಂಪೂರ್ಣವಾಗಿ ಹಾನಿಗೊಂಡಿದೆ.

ಅಪಘಾತ ಸಂಭವಿಸಿದ ವೇಳೆ ಬಸ್‌ನಲ್ಲಿ ಸುಮಾರು 35 ಮಂದಿ ಪ್ರಯಾಣಿಕರಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡ ಚಾಲಕ ಮತ್ತು ಇಬ್ಬರು ಪ್ರಯಾಣಿಕರನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದಾರೆ. ವಿಷಯ ತಿಳಿದ ಬಜಪೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಈ ಪ್ರದೇಶದಲ್ಲಿ ಸಮರ್ಪಕ ಸುರಕ್ಷತಾ ಕ್ರಮಗಳು, ಸುಗಮ ವಾಹನ ಸಂಚಾರಕ್ಕೆ ಮಾರ್ಗದರ್ಶನ ಹಾಗೂ ಸೂಚನಾ ಫಲಕಗಳ ಕೊರತೆಯಿಂದಾಗಿ ನಿರಂತರ ಅಪಘಾತಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Udayavani