ಸುರತ್ಕಲ್: ಸುರತ್ಕಲ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಸರ ಸುಲಿಗೆ ಪ್ರಕರಣಗಳನ್ನು ಭೇದಿಸಿದ ಸುರತ್ಕಲ್ ಪೊಲೀಸರು ಆರೋಪಿಯನ್ನು ಬಂಧಿಸಿ ಕಳವಾದ ಚಿನ್ನಾಭರಣಗಳನ್ನು ವಶಪಡಿಸಿಕೊಂಡರು.
2ನೇ ಬ್ಲಾಕ್ ನಿವಾಸಿ ಮೊಹಮ್ಮದ್ ಅಬ್ದುಲ್ ಜಾಫರ್ (28) ಬಂಧಿತ ಆರೋಪಿ.ಜೂ.
26ರ ಮುಂಜಾನೆ ಚೊಕ್ಕಬೆಟ್ಟು ಅಜಾದ್ ನಗರ 2ನೇ ಬ್ಲಾಕ್‌ನ ಜಾಹೀದ್ ಮನೆಯಲ್ಲಿ ಮಲಗಿದ್ದಾಗ ಕಿಟಕಿ ಮೂಲಕ ಕೈ ಹಾಕಿದ ಈತ ಅವರ ಕುತ್ತಿಗೆಯಲ್ಲಿದ್ದ ಕರಿಮಣಿ ಸರ ಎಳೆದಿದ್ದ. ತುಂಡಾಗಿ ಕೈಗೆ ಸಿಕ್ಕಿದ ಸರದೊಂದಿಗೆ ಆರೋಪಿ ಪರಾರಿಯಾಗಿದ್ದ.
ಜೂ 27ರ ಬೆಳಿಗ್ಗೆ ಚೊಕ್ಕಬೆಟ್ಟು 8ನೇ ಬ್ಲಾಕ್‌ನ ಫಯಾಜ್ ಎಂಬವರ ಮನೆಯ ಬಾಗಿಲು ತೆರೆದು ಒಳನುಗ್ಗಿ ಮಹಿಳೆಯ ಕುತ್ತಿಗೆಯಲ್ಲಿದ್ದ 1 ಲಕ್ಷ ರೂ. ಮೌಲ್ಯದ ಸರವನ್ನು ದೋಚಿದ್ದ.
ಎರಡೂ ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿ ಕೊಂಡು ತನಿಖೆ ನಡೆಸಿದ ಸುರತ್ಕಲ್ ಪೊಲೀಸರು ಮೊಹಮ್ಮದ್ ಅಬ್ದುಲ್ ಜಾಫರ್ ನನ್ನು ಸೋಮವಾರ ಸ್ಟೇಟ್ ಬ್ಯಾಂಕ್ ಬಳಿ ಚಿನ್ನಾಭರಣಗಳ ಸಹಿತ ಬಂಧಿಸಿದ್ದಾರೆ. ಆರೋಪಿ ವಿರುದ್ಧ ಸುರತ್ಕಲ್ ಠಾಣೆಯಲ್ಲಿ 2025ರಲ್ಲಿ ಹಾಗೂ ಉರ್ವ ಠಾಣೆಯಲ್ಲಿ 2018ರಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು.

