ಸುರತ್ಕಲ್: ಸುರತ್ಕಲ್ ಜಂಕ್ಷನ್ ಶನಿವಾರ ಬೆಳಗ್ಗೆ ದಟ್ಟವಾದ ಹೊಗೆಯಿಂದ ಕಿರಿಕಿರಿ ಅನುಭವಿಸಿತು. ಹಳೆಯ ಲಾರಿಯೊಂದು ರಸ್ತೆಯಲ್ಲಿ ಸಾಗುವಾಗ ದಟ್ಟ ಹೊಗೆಯನ್ನು ಉಗುಳುತ್ತಾ ಸಾಗಿದ್ದರಿಂದ ಜಂಕ್ಷನ್ ಸಂಪೂರ್ಣ ಹೊಗೆಮಯವಾಯಿತು.
ಏಕಾಏಕಿ ಹೊಗೆ ಆವರಿಸಿದ ಕಾರಣ ರಸ್ತೆಯಲ್ಲಿ ನಡೆಯುತ್ತಿದ್ದ ಜನರು ಕೆಮ್ಮುತ್ತಾ ಪರದಾಡಿದರು.
ಹೊಗೆಯ ತೀವ್ರತೆಗೆ ಹೊಟೇಲ್ ಒಳಗೆ ಆಹಾರ ಸೇವಿಸುತ್ತಿದ್ದ ಗ್ರಾಹಕರು ಕೂಡ ಗಾಬರಿಗೊಂಡರು. ಎಲ್ಲಿ ಬೆಂಕಿ ಹೊತ್ತಿಕೊಂಡಿದೆಯೋ ಎಂಬ ಆತಂಕದಲ್ಲಿ ಜನರು ಹೊರಗೆ ಬಂದು ನೋಡಿದಾಗ, ಅದು ಮಾಲಿನ್ಯ ತಪಾಸಣೆ ಇಲ್ಲದ ಹಳೆಯ ಲಾರಿಯಿಂದ ಹೊರಬಂದ ದಟ್ಟ ಹೊಗೆ ಎಂದು ಗೊತ್ತಾಯಿತು.
ದಿನನಿತ್ಯ ಸಾವಿರಾರು ವಾಹನಗಳು, ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಓಡಾಡುವ ಈ ಜಂಕ್ಷನ್‌ನಲ್ಲಿ ಇಂತಹ ವಾಹನಗಳಿಂದ ಉಂಟಾಗುವ ವಾಯು ಮಾಲಿನ್ಯವು ಆರೋಗ್ಯಕ್ಕೆ ತೀವ್ರ ಹಾನಿ ಉಂಟು ಮಾಡುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಫಿಟ್‌ನೆಸ್ ಇಲ್ಲದ, ಮಾಲಿನ್ಯ ನಿಯಂತ್ರಣಕ್ಕೆ ಒಳಪಡದ ವಾಹನಗಳ ವಿರುದ್ಧ ಕಠಿನ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಆರ್‌ಟಿಒ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕೆಂಬುದು ಸ್ಥಳೀಯರ ಒತ್ತಾಯವಾಗಿದೆ.

