ನವದೆಹಲಿ: ಸ್ವಾತಂತ್ರ್ಯೋತ್ಸವದ ಮುನ್ನಾದಿನವಾದ ಶುಕ್ರವಾರ ರಾಷ್ಟ್ರ ರಾಜಧಾನಿ ದೆಹಲಿಯ ದೆಹಲಿ ಹೈಕೋರ್ಟ್, ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-3 ಸೇರಿದಂತೆ ಆರು ಸ್ಥಳಗಳಿಗೆ ಬಾಂಬ್ ಬೆದರಿಕೆ ಸಂದೇಶಗಳು ಬಂದಿವೆ.
ದೆಹಲಿ ಹೈಕೋರ್ಟ್ ಹಾಗೂ ವಿಮಾನ ನಿಲ್ದಾಣದ ಹೊರತಾಗಿ ಜಾಮ್ನಗರ್ ಹೌಸ್, ಜಂಡೇವಾಲನ್‌ನ ಕಟ್ಟಡವೊಂದು, ಸಾಕೇತ್‌ನ ಕಚೇರಿ ಹಾಗೂ ದೆಹಲಿ ಕಂಟೋನ್ಮೆಂಟ್ ಎಸ್‌ಡಿಎಂ ಕಚೇರಿಗೂ ಬಾಂಬ್ ಬೆದರಿಕೆ ಬಂದಿದೆ.
ಬೆದರಿಕೆ ಹಿನ್ನೆಲೆಯಲ್ಲಿ ಅಗ್ನಿಶಾಮಕ ಸಿಬಂದಿ ಸೇರಿದಂತೆ ತುರ್ತು ಸೇವಾ ತಂಡಗಳನ್ನು ಸ್ಥಳಗಳಿಗೆ ನಿಯೋಜಿಸಲಾಗಿದ್ದು, ಅಧಿಕಾರಿಗಳು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ. ಬೆದರಿಕೆ ನಿಜವೇ ಎಂಬುದನ್ನು ಪರಿಶೀಲಿಸುವ ಕಾರ್ಯವೂ ಮುಂದುವರಿದಿದೆ.
ಸ್ಫೋಟಕ ಪತ್ತೆಯಾಗಿಲ್ಲ
ಈವರೆಗೆ ಯಾವುದೇ ಅನುಮಾನಾಸ್ಪದ ವಸ್ತು ಅಥವಾ ಸ್ಫೋಟಕಗಳಿರುವುದನ್ನು ದೃಢಪಡಿಸುವ ಯಾವುದೇ ಸಾಕ್ಷ್ಯ ಪತ್ತೆಯಾಗಿಲ್ಲ ಎಂದು ಲಭ್ಯ ಮಾಹಿತಿಯಿಂದ ತಿಳಿದುಬಂದಿದೆ.

