ಗೋಕಾಕ : ಕೊರೊನಾ ಎರಡನೆ ಅಲೆ ದಿನೇ ದಿನೇ ಉಲ್ಬಣವಾಗುತ್ತಿದ್ದು, ಇದರ ಹತೋಟಿಗೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ಇದಕ್ಕಾಗಿ ಸೋಮವಾರದಿಂದ ಮೇ 4 ರವರೆಗೆ ಸ್ವಯಂ ಪ್ರೇರಿತರಾಗಿ ಮಧ್ಯಾಹ್ನ ಅಂಗಡಿಗಳನ್ನು ಬಂದ್ ಮಾಡಿ ಸಹಕರಿಸುವಂತೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ವ್ಯಾಪಾರಸ್ಥರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಕೊರೊನಾ ಮಹಾಮಾರಿ ಗೋಕಾಕ ಹಾಗೂ ಅರಭಾವಿ ಮತಕ್ಷೇತ್ರಗಳಲ್ಲಿ ಶರವೇಗದಲ್ಲಿ ಹರಡುತ್ತಿದ್ದು ಈ ಬಗ್ಗೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಇದರ ನಿರ್ಮೂಲನೆಗಾಗಿ ಸಾರ್ವಜನಿಕರ ಸಹಾಯ ಅವಶ್ಯವಾಗಿದ್ದು, ಇದಕ್ಕಾಗಿಯೇ ತಹಶೀಲ್ದಾರ್ ಮತ್ತು ಡಿವೈಎಸ್‌ಪಿ ನೇತೃತ್ವದಲ್ಲಿ ಟಾಸ್ಕ್ ಪೋರ್ಸ್ ಸಮಿತಿ ರಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ದಿನೇ ದಿನೇ ಜನಜಂಗುಳಿ ಹೆಚ್ಚುತ್ತಿದೆ.
ಇದರಿಂದ ತಮ್ಮನ್ನು ತಾವೇ ಸ್ವಯಂ ಪ್ರೇರಿತವಾಗಿ ಲಾಕ್‌ಡೌನ್ ಮಾಡಿಕೊಂಡಂತಾಗುತ್ತದೆ. ಕೊರೊನಾ ಚೈನ್ ಬ್ರೆಕ್ ಮಾಡುವುದೇ ನಮ್ಮ ಸರ್ಕಾರದ ಉದ್ದೇಶವಾಗಿದೆ ಎಂದು ಅವರು ಹೇಳಿದ್ದಾರೆ. ನಿಯಂತ್ರಣಕ್ಕೆ ಸರ್ಕಾರ ಜಾರಿ ಮಾಡಿರುವ ಹೊಸ ಬಿಗಿ ಮಾರ್ಗಸೂಚಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ನಾಗರಿಕರು ಸಹಕರಿಸಬೇಕು. ಅಲ್ಲದೇ ಅನಗತ್ಯವಾಗಿ ಓಡಾಡಬೇಡಿ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಬಿ.ಎಸ್. ಯಡಿಯೂರಪ್ಪನವರ ಸಲಹೆಯಂತೆ ಮುನ್ನೆಚ್ಚರಿಕೆ ನಿಯಮಗಳನ್ನು ಪಾಲಿಸಿ ಸೋಂಕು ನಿಯಂತ್ರಣಕ್ಕೆ ನೆರವಾಗುವಂತೆ ಶಾಸಕ ಹಾಗೂ ಕಹಾಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮನವಿ ಮಾಡಿಕೊಂಡಿದ್ದಾರೆ.

