ಚೆನ್ನೈ: ಆಧುನಿಕ ಪ್ಯಾನ್ ಇಂಡಿಯಾ ಆಯಕ್ಷನ್ ಸಿನಿಮಾಗಳಲ್ಲಿ ಅತಿಯಾದ ಹಿಂಸೆ ಹಾಗೂ ಸ್ತ್ರೀವಿರೋಧಿ ಧೋರಣೆಗಳನ್ನು ವೈಭವೀಕರಿಸಲಾಗುತ್ತಿದೆ ಎಂದು 'ವಿ ದಿ ಲೀಡರ್ಸ್' ಸಂಸ್ಥಾಪಕ, ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ತೀವ್ರವಾಗಿ ಟೀಕಿಸಿದ್ದಾರೆ.
'ಯಶ್ ಅಭಿನಯದ ಟಾಕ್ಸಿಕ್' ಸಿನಿಮಾ ಕುರಿತು ಸುದ್ದಿಗಾರರು ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ಅಣ್ಣಾಮಲೈ, ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಸಿನಿಮಾಗಳ ಸೆನ್ಸಾರ್ ನಿಯಮಗಳು ಕಟ್ಟುನಿಟ್ಟಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಿನಿಮಾಗಳಲ್ಲಿ ಅತಿಯಾದ ಹಿಂಸೆ, ಸ್ತ್ರೀವಿರೋಧಿ ವಿಚಾರಗಳು ಹಾಗೂ ನೋಡುವುದಕ್ಕೂ ಕಷ್ಟವಾಗುವ ಹಲವು ದೃಶ್ಯಗಳನ್ನು ವಯೋಮಿತಿ ಹೊಂದಿರುವ ಚಿತ್ರಗಳಲ್ಲಿಯೂ ಪ್ರೇಕ್ಷಕರು ಪದೇಪದೆ ನೋಡಬೇಕಾದ ಪರಿಸ್ಥಿತಿ ಇದೆ ಎಂದು ಅವರು ಹೇಳಿದರು.
ಸಿನಿಮಾಗಳನ್ನು ನಿಷೇಧಿಸಿ ಎಂದು ಹೇಳುತ್ತಿಲ್ಲ
ತಾವು ಸಿನಿಮಾಗಳನ್ನು ನಿಷೇಧಿಸಬೇಕು ಎಂದು ಒತ್ತಾಯಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ ಅಣ್ಣಾಮಲೈ, ನಟ ಎಷ್ಟೇ ದೊಡ್ಡ ಸ್ಟಾರ್ ಆಗಿದ್ದರೂ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ತನ್ನ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಆಗ್ರಹಿಸಿದರು.
ಅಲ್ಲದೆ, 'ಎ' ಪ್ರಮಾಣಪತ್ರ ಪಡೆದ ಸಿನಿಮಾಗಳ ಪ್ರದರ್ಶನಕ್ಕೆ ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಪ್ರವೇಶಿಸದಂತೆ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳ ಮಾಲಕರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು. ಈ ನಿಯಮವನ್ನು ಹಲವು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಸಮರ್ಪಕವಾಗಿ ಪಾಲಿಸಲಾಗುತ್ತಿಲ್ಲ ಎಂದು ಅವರು ಆರೋಪಿಸಿದರು.
ಪರದೆಯ ಮೇಲಿನ ಅತಿಯಾದ ಹಿಂಸೆ ಹಾಗೂ ಪುರುಷ ಪ್ರಧಾನ, ಸ್ತ್ರೀವಿರೋಧಿ ವಿಚಾರಗಳು ಯುವ ಪೀಳಿಗೆಯನ್ನು ತಪ್ಪುದಾರಿಗೆಳೆಯುವ ಅಪಾಯವಿದೆ ಎಂದು ಅಣ್ಣಾಮಲೈ ಎಚ್ಚರಿಸಿದರು.
ಮಹಿಳೆಯರನ್ನು ಕೇವಲ ವಸ್ತುವಿನಂತೆ ಬಿಂಬಿಸುವ ಸಿನಿಮಾಗಳನ್ನೂ ಅವರು ಬಹಿರಂಗವಾಗಿ ಟೀಕಿಸಿದರು. ಸ್ತ್ರೀವಿರೋಧಿ ಧೋರಣೆಗಳನ್ನು ಸಾಮಾನ್ಯೀಕರಿಸುವುದು ಸಿನಿಮಾ ನೋಡುವ ಅನುಭವಕ್ಕೆ ಧಕ್ಕೆ ತರುತ್ತದೆ ಎಂದು ಹೇಳಿದ್ದಾರೆ.
ಪುರುಷರು ಒಂದೇ ಸಮಯದಲ್ಲಿ ಹಲವು ಮಹಿಳೆಯರೊಂದಿಗೆ ಸಂಬಂಧ ಹೊಂದಿರುವುದನ್ನು ವೈಭವೀಕರಿಸುವುದು ನಿಜವಾದ ಪ್ರಗತಿಪರ ಚಿಂತನೆಗೆ ವಿರುದ್ಧವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸಿನಿಮಾಗಳಿಗೆ ಸಮಾಜ ಮತ್ತು ಸಂಸ್ಕೃತಿಯ ಮೇಲೆ ಅಪಾರ ಪ್ರಭಾವ ಬೀರುವ ಶಕ್ತಿಯಿದೆ. ಹೀಗಾಗಿ ಚಿತ್ರನಿರ್ಮಾಪಕರು ವಿಷಕಾರಿ ಹಾಗೂ ಹಿಂದುಳಿದ ಮನೋಭಾವಗಳನ್ನು ಉತ್ತೇಜಿಸುವ ಬದಲು ಸಮಾಜವನ್ನು ಸಬಲಗೊಳಿಸುವ ಸಂದೇಶಗಳನ್ನು ನೀಡಲು ಆ ಶಕ್ತಿಯನ್ನು ಬಳಸಬೇಕು ಎಂದು ಅಣ್ಣಾಮಲೈ ಹೇಳಿದರು.
ಅಣ್ಣಾಮಲೈ ಅವರ ಈ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಲವು ನೆಟ್ಟಿಗರು ಅವರ ಅಭಿಪ್ರಾಯವನ್ನು ಬೆಂಬಲಿಸಿ ವಿಡಿಯೋ ಹಾಗೂ ಹೇಳಿಕೆಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಅತಿಯಾದ ಹಿಂಸೆ, ರಕ್ತಪಾತದ ದೃಶ್ಯಗಳು ಹಾಗೂ ಮಹಿಳೆಯರ ವಸ್ತೂಕರಣದ ವಿರುದ್ಧ ಇತ್ತೀಚಿನ ದಿನಗಳಲ್ಲಿ ಸಿನಿಪ್ರಿಯರ ಒಂದು ವರ್ಗವೂ ಧ್ವನಿ ಎತ್ತುತ್ತಿದೆ. ಸಾಮೂಹಿಕ ಪ್ರೇಕ್ಷಕರನ್ನು ಸೆಳೆಯಲು ಇಂತಹ ಅಂಶಗಳನ್ನು ಸುಲಭದ ಮಾರ್ಗವಾಗಿ ಚಿತ್ರನಿರ್ಮಾಪಕರು ಬಳಸುತ್ತಿದ್ದಾರೆ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.

