ಬೆಂಗಳೂರು: ಬಿಡುಗಡೆಯಾದ ಮೊದಲ ದಿನವೇ ವಿಶ್ವದಾದ್ಯಂತ 150 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಚಿತ್ರಕ್ಕೆ ಪೈರಸಿ ಸಂಕಷ್ಟ ಎದುರಾಗಿದ್ದು ಚಿತ್ರದ ಕೆಲ ದೃಶ್ಯಗಳನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವುದು ಕಂಡು ಬಂದಿದೆ.
ಫೇಸ್‌ಬುಕ್ ಪೇಜ್‌ಗಳಲ್ಲಿ ಚಿತ್ರದ ಕಂಟೆಂಟ್ ಹರಿದಾಡುತ್ತಿರುವುದು ಕಂಡು ಬಂದಿದ್ದು, ಚಿತ್ರ ತಂಡ ಕ್ರಮ ಕೈಗೊಳ್ಳಲು ಈಗಾಗಲೇ ಸೂಚನೆ ನೀಡಿದೆ. ಚಿತ್ರದ ಮೊದಲ ಪ್ರದರ್ಶನದ ಬಳಿಕ ಚಿತ್ರಮಂದಿರಗಳಲ್ಲಿಯೇ ರೆಕಾರ್ಡ್ ಮಾಡಲಾಗಿದೆ ಎನ್ನಲಾದ ಕಡಿಮೆ ಗುಣಮಟ್ಟದ ವಿಡಿಯೋಗಳು ಹರಿದಾಡಲು ಆರಂಭವಾಗಿರುವುದು ಬೆಳಕಿಗೆ ಬಂದಿದೆ. ನಿರ್ಮಾಣ ಸಂಸ್ಥೆಯ ಎಚ್ಚರಿಕೆಯ ನಡುವೆಯೂ ಇಂತಹ ಬೆಳವಣಿಗೆ ನಡೆದಿರುವುದು ಚಿತ್ರತಂಡಕ್ಕೆ ಆಘಾತವಾಗಿ ಪರಿಣಮಿಸಿದೆ.
ಯಾವುದೇ ಕಾರಣಕ್ಕೂ ದೃಶ್ಯಗಳನ್ನು ರೆಕಾರ್ಡ್ ಮಾಡಬೇಡಿ ಎಂದು ಚಿತ್ರ ತಂಡ ಮನವಿ ಮಾಡಿತ್ತು ಮಾತ್ರವಲ್ಲದೆ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿತ್ತು. ' ಸಿನಿಮಾ ಬಿಡುಗಡೆಗೆ ಮುನ್ನ ಯಶ್ ತಮ್ಮ ಇಡೀ ತಂಡದ ಪರವಾಗಿ ಅಭಿಮಾನಿಗಳಿಗೆ ವಿಶೇಷ ಮನವಿ ಒಂದನ್ನು ಮಾಡಿದ್ದರು.
ಇನ್‌ಸ್ಟಾಗ್ರಾಮ್‌ನಲ್ಲಿ ಸುದೀರ್ಘ ಪೋಸ್ಟ್ ಒಂದನ್ನು ಹಂಚಿಕೊಂಡು, ಅಭಿಮಾನಿಗಳ ಅಪಾರ ಬೆಂಬಲಕ್ಕೆ ಧನ್ಯವಾದ ತಿಳಿಸುವುದರ ಜತೆಗೆ, ಚಿತ್ರಮಂದಿರಗಳಲ್ಲಿ ಯಾವುದೇ ಸ್ಪಾಯ್ಲರ್ (ಚಿತ್ರದ ಕಥೆ ಅಥವಾ ದೃಶ್ಯಗಳನ್ನು ಬಿಟ್ಟುಕೊಡುವುದು) ನೀಡದೆ ಸಿನಿಮಾವನ್ನು ಅನುಭವಿಸುವಂತೆ ಮನವಿ ಮಾಡಿದ್ದರು.
'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಇದು ಕೇವಲ ಒಂದು ಸಿನಿಮಾವಲ್ಲ ಎಂದು ಹೇಳಿ "ಟಾಕ್ಸಿಕ್ ನಮಗೆ ಕೇವಲ ಸಿನಿಮಾವಷ್ಟೇ ಅಲ್ಲ; ಇದು ನಾವು ಪ್ರತೀ ಫ್ರೇಮ್, ಪ್ರತೀ ದೃಶ್ಯ ಹಾಗೂ ಪ್ರತಿಯೊಂದು ಆಯ್ಕೆಯನ್ನು ಅತ್ಯಂತ ಜಾಗರೂಕತೆಯಿಂದ ಹೆಣೆದು, ವರ್ಷಗಳ ಕಾಲ ನಮ್ಮ ಹೃದಯವನ್ನು ಸುರಿದು ನಿರ್ಮಿಸಿದ ಒಂದು ಜಗತ್ತು" ಎಂದು ಹೇಳಿದ್ದರು.

