Dailyhunt Logo
  • Light mode
    Follow system
    Dark mode
    • Play Story
    • App Story
ಟಾರ್ಗೆಟ್‌ 2028: 'ಕೈ' ಪರಾಜಿತ ಅಭ್ಯರ್ಥಿಗಳ ಜತೆ ಹರಿಪ್ರಸಾದ್‌ ಸಭೆ

ಟಾರ್ಗೆಟ್‌ 2028: 'ಕೈ' ಪರಾಜಿತ ಅಭ್ಯರ್ಥಿಗಳ ಜತೆ ಹರಿಪ್ರಸಾದ್‌ ಸಭೆ

ಬೆಂಗಳೂರು: ವಿಶೇಷ ಸಮಗ್ರ ಪರಿಷ್ಕರಣೆಯಿಂದ (ಎಸ್‌ಐಆರ್‌) ಲಕ್ಷಾಂತರ ಮತದಾರರು ಹೊರಗುಳಿಯುವ ಆತಂಕದ ಬೆನ್ನಲ್ಲೇ 2023ರ ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡ ಅಭ್ಯರ್ಥಿಗಳೊಂದಿಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌ ಸಭೆ ನಡೆಸಿ, ಹಲವು ಸೂಚನೆಗಳನ್ನು ನೀಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಸುಮಾರು 84 ಅಭ್ಯರ್ಥಿಗಳು ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಹರಿಪ್ರಸಾದ್‌, 2023ರ ಚುನಾವಣೆಯಲ್ಲಿ ಇನ್ನೂ 20ರಿಂದ 22 ಸೀಟುಗಳನ್ನು ನಾವು ಗೆಲ್ಲುವ ಸಾಧ್ಯತೆ ಇತ್ತು. ಅತ್ಯಲ್ಪ ಮತಗಳ ಅಂತರದಿಂದ ಪರಾಭವಗೊಂಡಿದ್ದೇವೆ. ಈ ಮಧ್ಯೆ ಎಸ್‌ಐಆರ್‌ ನಡೆದಿದ್ದು, ಹಲವು ಕ್ಷೇತ್ರಗಳ ಲಕ್ಷಾಂತರ ಮತದಾರರು ಪಟ್ಟಿಯಿಂದ ಹೊರಗುಳಿಯಲಿದ್ದಾರೆ. ಅದರ ಬಗ್ಗೆ ಎಚ್ಚರ ವಹಿಸಬೇಕು ಎಂದು ನಿರ್ದೇಶನ ನೀಡಿದರು ಎನ್ನಲಾಗಿದೆ.

ವಿಶೇಷವಾಗಿ ಅಲ್ಪ ಮತಗಳ ಅಂತರದಿಂದ ಸೋಲನುಭವಿಸಿದ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಹೆಚ್ಚಿನ ನಿಗಾ ವಹಿಸಬೇಕು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಮಗೆ ಆ ಕ್ಷೇತ್ರಗಳಲ್ಲಿ ಗೆಲ್ಲುವ ಅವಕಾಶಗಳಿರುತ್ತವೆ. ಆದರೆ, ನಮ್ಮ ಮತಗಳು ಕಳೆದುಹೋಗದಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ಕ್ಷೇತ್ರಗಳಲ್ಲಿ ಸಕ್ರಿಯವಾಗಿರಬೇಕು ಎಂದು ಕಿವಿಮಾತು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶಾಸಕರಿಲ್ಲದ ಕ್ಷೇತ್ರದಲ್ಲೇ ಅಭಿಯಾನ

ಸಭೆ ಬಳಿಕ ಸುದ್ದಿಗೋಷ್ಠಿಯಲ್ಲೂ ಈ ವಿಷಯ ತಿಳಿಸಿದ ಹರಿಪ್ರಸಾದ್‌, 2023ರ ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡ ಅಭ್ಯರ್ಥಿಗಳನ್ನು ಕರೆದು ಅವರ ಜತೆ ಎಸ್‌ಐಆರ್ ಕುರಿತು ಚರ್ಚೆ ಮಾಡಲಾಗಿದೆ. ಅವರ ಕ್ಷೇತ್ರದಲ್ಲಿನ ವಿಚಾರಗಳ ಬಗ್ಗೆ ಸವಿಸ್ತಾರವಾದ ಸಂಗತಿಗಳನ್ನು ಹಂಚಿಕೊಳ್ಳಲಾಯಿತು ಎಂದು ಹೇಳಿದರು.

ಅರ್ಹ ಮತದಾರರು ತಮ್ಮ ಮತಗಳನ್ನುಕಳೆದುಕೊಳ್ಳಬಾರದು ಎಂದು ಮನವಿ ಮಾಡುತ್ತೇನೆ. ನಮ್ಮ ಶಾಸಕರು ಇಲ್ಲದ ಜಾಗಲ್ಲಿಯೇ ಈ ಅಭಿಯಾನ ಮಾಡಲಾಗುತ್ತಿದೆ. ನಾವು ಎಸ್‌ಐಆರ್ ವಿರುದ್ಧವಲ್ಲ. ಆದರೆ, ಸಕ್ರಮವಾಗಿ ಜನರ ಕೆಲಸ ಮಾಡುವವರ ಪರ. ಮತದಾರರ ಪಟ್ಟಿ ಮೇಲೆ ಪ್ರಜಾಪ್ರಭುತ್ವ ನಿಂತಿದೆ. ಇದನ್ನು ಉಳಿಸುವುದೇ ನಮ್ಮ ಹೋರಾಟ. ಚುನಾವಣಾ ಆಯೋಗವು ಪ್ರತಿ ಶನಿವಾರ, ಭಾನುವಾರ ಅರ್ಜಿ ನಮೂನೆ ನೀಡಿ ಅವಕಾಶಗಳನ್ನು ಕೊಡಿ ಎಂದು ಕೇಳಿದ್ದೇವೆ. ಅರ್ಹ ಮತದಾರರು ತಮ್ಮ ಅವಕಾಶಗಳನ್ನು ಕಳೆದುಕೊಳ್ಳಬಾರದು ಎಂದು ತಿಳಿಸಿದರು.

ಅನೇಕ ಕಡೆ ಬಿಎಲ್‌ಒಗಳು ಸಹಕಾರ ಕೊಡುತ್ತಿಲ್ಲ. ಆದರೆ ಹೆಚ್ಚಿನ ಬಿಎಲ್‌ಓಗಳು ಸಹಕಾರ ನೀಡಿದ್ದಾರೆ. ಹೆಚ್ಚಿನ ಮತಗಳು ಡಿಲೀಟ್ ಆಗಿರುವುದು ದುರ್ಬಲ ವರ್ಗಕ್ಕೆ ಸೇರಿದ ಮತದಾರರ ಹೆಸರುಗಳು ಎಂಬುದು ಆತಂಕಕಾರಿ ಸಂಗತಿ. ಆಯಾ ಜಿಲ್ಲಾ ಚುನಾವಣಾಧಿಕಾರಿಯನ್ನು ಭೇಟಿ ಮಾಡಿ ಚರ್ಚೆ ನಡೆಸಲಾಗುತ್ತದೆ ಎಂದರು.

ಇಷ್ಟು ದಿನ ನಡೆದ ಎಸ್‌ಐಆರ್ ಪ್ರಕ್ರಿಯೆ ಕುರಿತು ತೃಪ್ತಿ ಇದೆಯೇ ಎಂದು ಕೇಳಿದಾಗ, ಅರ್ಹರ ಹೆಸರು ಮತಪಟ್ಟಿಯಿಂದ ಹೋಗಬಾರದು ಎಂಬುದೇ ನಮ್ಮ ಕಾಳಜಿ. ಹಕ್ಕು ಹೊಂದುವುದು ಎಲ್ಲರ ಮೂಲಭೂತ ಕರ್ತವ್ಯ. ನಮ್ಮೆಲ್ಲರ ಹಕ್ಕು ಎಂದು ಸ್ಪಷ್ಟಪಡಿಸಿದರು.

ಜತೆಗೆ ಕಲ್ಯಾಣ ಕರ್ನಾಟಕದಲ್ಲಿ ಬರ ಪರಿಹಾರಕ್ಕೆ ಏನು ಮಾಡಬೇಕು ಎಂದೂ ಸಹ ಚರ್ಚೆ ನಡೆಸಲಾಗಿದೆ. ಇದರ ಮೂಲಕ ಸರ್ಕಾರದ ಗಮನ ಸೆಳೆಯಲು ನಾವು ಸಭೆ ನಡೆಸಿದ್ದೇವೆ ಎಂದೂ ಅವರು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಎಂಎಲ್‌ಸಿ ನಾರಾಯಣಸ್ವಾಮಿ, ಮಾಜಿ ಮೇಯರ್‌ ರಾಮಚಂದ್ರಪ್ಪ ಇದ್ದರು.

ತೋರಿಸಿಕೊಳ್ಳಲು ಪಾದಯಾತ್ರೆ: ಬಿಜೆಪಿ ವಿರುದ್ಧ ಹರಿಪ್ರಸಾದ್‌ ಕಿಡಿ

ದೇಶದಲ್ಲಿ ಭ್ರಷ್ಟಾಚಾರದ ಪಿತಾಮಹ ಯಾರಾದರೂ ಇದ್ದರೆ ಅದು ಯಡಿಯೂರಪ್ಪನವರು. ಚೆಕ್ ಮೂಲಕ ಲಂಚ ತೆಗೆದುಕೊಂಡು ಜೈಲಿಗೆ ಹೋದವರು ಇಂದು ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿರುವುದು ಹಾಸ್ಯಾಸ್ಪದ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌ ಟೀಕಿಸಿದರು. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಪಾದಯಾತ್ರೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆಪರೇಷನ್ ಮೂಲಕ ಸರ್ಕಾರ ತಂದು ಅಧಿಕಾರಕ್ಕೆ ಬಂದವರಿಂದ ನಾವು ಪಾಠ ಕಲಿಯಬೇಕಿಲ್ಲ. ಬಿಜೆಪಿ ಮತ್ತು ಜೆಡಿಎಸ್ ಒಟ್ಟಿಗೆ ಇದ್ದಷ್ಟು ಬಹಳ ಒಳ್ಳೆಯದು. ಹಲವಾರು ಗುಂಪುಗಳು ಜೀವಂತವಾಗಿರಬೇಕು. ಸಾಮ್ರಾಟ್ ಆಶೋಕ ಹಾಗೂ ಬೇಬಿ ಯಡಿಯೂರಪ್ಪ ಅವರು 3 ವರ್ಷಗಳಲ್ಲಿ ಏನೂ ಮಾಡಲು ಆಗಿಲ್ಲ. ಈಗ ಏನೋ ಮಾಡುತ್ತಿದ್ದೇವೆ ಎಂದು ತೋರಿಸಿಕೊಳ್ಳಲು ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

Dailyhunt
Disclaimer: This content has not been generated, created or edited by Dailyhunt. Publisher: Udayavani