Dailyhunt Logo
  • Light mode
    Follow system
    Dark mode
    • Play Story
    • App Story
ತಾಯಿಯ ಹೆಸರಿನಲ್ಲಿ ಗಿಡ ನೆಡುವುದು ಪ್ರಕೃತಿಗೆ ಸಲ್ಲಿಸುವ ಕೃತಜ್ಞತೆ: ಪ್ರೊ. ಸದಾಕತ್

ತಾಯಿಯ ಹೆಸರಿನಲ್ಲಿ ಗಿಡ ನೆಡುವುದು ಪ್ರಕೃತಿಗೆ ಸಲ್ಲಿಸುವ ಕೃತಜ್ಞತೆ: ಪ್ರೊ. ಸದಾಕತ್

ಮೂಡುಬಿದಿರೆ: ತಾಯಿ ತನ್ನ ಮಕ್ಕಳನ್ನು ಪ್ರೀತಿಯಿಂದ ಪೋಷಿಸಿ, ರಕ್ಷಿಸುವಂತೆ ಭೂಮಿ ತಾಯಿಯೂ ಸಮಸ್ತ ಜೀವಸಂಕುಲವನ್ನು ಪೋಷಿಸುತ್ತಾಳೆ. ತಾಯಿಯ ಮೇಲಿನ ಪ್ರೀತಿ ಮತ್ತು ಗೌರವವನ್ನು ಪರಿಸರ ಸಂರಕ್ಷಣೆಯೊಂದಿಗೆ ಬೆಸೆಯುವ ಕೇಂದ್ರ ಸರ್ಕಾರದ 'ಏಕ್ ಪೇಡ್ ಮಾ ಕೆ ನಾಮ್' ಅಭಿಯಾನವು ಪ್ರಕೃತಿಯೊಂದಿಗೆ ಮಾನವನ ಭಾವನಾತ್ಮಕ ಸಂಬಂಧವನ್ನು ಗಟ್ಟಿಗೊಳಿಸುವ ಮಹತ್ವದ ಹೆಜ್ಜೆಯಾಗಿದೆ ಎಂದು ಆಳ್ವಾಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ.

ಸದಾಕತ್ ನುಡಿದರು.

ವಿದ್ಯಾಗಿರಿಯ ಪ್ಯಾಲೇಸ್ ಗ್ರೌಂಡ್ಸ್‌ ನಲ್ಲಿ ಮಂಗಳವಾರ ಆಳ್ವಾಸ್ ಪದವಿಪೂರ್ವ ಕಾಲೇಜಿನ ಇಕೋ ಕ್ಲಬ್ ವತಿಯಿಂದ ಆಯೋಜಿಸಿದ್ದ 'ಏಕ್ ಪೇಡ್ ಮಾ ಕೆ ನಾಮ್ 3.0' ವೃಕ್ಷಾರೋಪಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಿಡ ನೆಡುವುದು ಕೇವಲ ಪರಿಸರ ಕಾರ್ಯಕ್ರಮವಲ್ಲ, ಪ್ರಕೃತಿಯ ಸಂರಕ್ಷಣೆಯನ್ನು ಪ್ರತಿಯೊಬ್ಬರ ಜವಾಬ್ದಾರಿಯನ್ನಾಗಿ ರೂಪಿಸುವ ಜನಾಂದೋಲನದ ಭಾಗವಾಗಿದೆ ಎಂದರು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು 2024ರ ವಿಶ್ವ ಪರಿಸರ ದಿನದಂದು 'ಏಕ್ ಪೇಡ್ ಮಾ ಕೆ ನಾಮ್' ಅಭಿಯಾನಕ್ಕೆ ಚಾಲನೆ ನೀಡಿ, ಪ್ರತಿಯೊಬ್ಬರೂ ತಮ್ಮ ತಾಯಿಯ ಗೌರವಾರ್ಥವಾಗಿ ಒಂದು ಗಿಡ ನೆಡುವಂತೆ ಕರೆ ನೀಡಿದ್ದರು. ತಾಯಿಯ ಮೇಲಿನ ಪ್ರೀತಿ ಮತ್ತು ಭೂಮಿಯ ಮೇಲಿನ ಕಾಳಜಿಯನ್ನು ಒಂದೇ ಭಾವನೆಯಲ್ಲಿ ಬೆಸೆಯುವ ಈ ಅಭಿಯಾನವು ದೇಶಾದ್ಯಂತ ಜನರಲ್ಲಿ ಪರಿಸರ ಸಂರಕ್ಷಣೆಯ ಅರಿವು ಮೂಡಿಸುತ್ತಿದೆ ಎಂದರು.

ತಾಯಿ ತನ್ನ ಮಕ್ಕಳಿಗೆ ಆಹಾರ, ಆಶ್ರಯ, ಪ್ರೀತಿ ಮತ್ತು ರಕ್ಷಣೆಯನ್ನು ನೀಡುತ್ತಾಳೆ. ಅದೇ ರೀತಿ ಭೂಮಿತಾಯಿ ನಮಗೆ ಆಹಾರ, ನೀರು, ಶುದ್ಧ ಗಾಳಿ ಹಾಗೂ ಬದುಕಿಗೆ ಅಗತ್ಯವಾದ ನೈಸರ್ಗಿಕ ಸಂಪನ್ಮೂಲಗಳನ್ನು ನೀಡುತ್ತಾಳೆ. ತಾಯಿಯನ್ನು ಗೌರವಿಸುವುದು ನಮ್ಮ ಕರ್ತವ್ಯವಾದರೆ, ಭೂಮಿತಾಯಿಯನ್ನು ಸಂರಕ್ಷಿಸುವುದೂ ನಮ್ಮ ಜವಾಬ್ದಾರಿ. ಹೀಗಾಗಿ ತಾಯಿಯ ಹೆಸರಿನಲ್ಲಿ ಗಿಡ ನೆಡುವುದು ಪ್ರಕೃತಿಗೆ ಸಲ್ಲಿಸುವ ಕೃತಜ್ಞತೆಯ ಸಂಕೇತ ಎಂದು ತಿಳಿಸಿದರು.

120 ವಿದ್ಯಾರ್ಥಿಗಳ ಭಾಗಿ

ಕಾರ್ಯಕ್ರಮದಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಿವಿಧ ವಿಭಾಗಗಳ 120 ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ವೃಕ್ಷಾರೋಪಣೆ ಮಾಡಿದರು. ವಿದ್ಯಾರ್ಥಿಗಳು ಸಸಿಗಳನ್ನು ನೆಡುವುದರ ಜೊತೆಗೆ ಅವುಗಳ ಸಂರಕ್ಷಣೆ ಹಾಗೂ ಪೋಷಣೆಯ ಕುರಿತು ಅರಿವು ಪಡೆದರು.

ಕಾರ್ಯಕ್ರಮದಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ ಇಕೋ ಕ್ಲಬ್ ಸಂಚಾಲಕಿ ಅಕ್ಷತಾ, ಜೀವಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರಶಾಂತ್ ಶೆಟ್ಟಿ, ವಿವಿಧ ವಿಭಾಗಗಳ ಮುಖ್ಯಸ್ಥರಾದ ಕುಮಾರ್ ಹಾಗೂ ಅನಿಲ್ ಮಸ್ಕರೇನಸ್ ಉಪಸ್ಥಿತರಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Udayavani