Dailyhunt
Tamil Nadu: ಮಹಿಳಾ ಮೀಸಲಾತಿ ವಿರೋಧಿಸುವ ಡಿಎಂಕೆಯನ್ನು ಮಹಿಳೆಯರು ಕ್ಷಮಿಸಲ್ಲ: ಪಳನಿಸ್ವಾಮಿ

Tamil Nadu: ಮಹಿಳಾ ಮೀಸಲಾತಿ ವಿರೋಧಿಸುವ ಡಿಎಂಕೆಯನ್ನು ಮಹಿಳೆಯರು ಕ್ಷಮಿಸಲ್ಲ: ಪಳನಿಸ್ವಾಮಿ

ರೋಡ್: ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆಯನ್ನು ವಿರೋಧಿಸುವ ಮೂಲಕ ಡಿಎಂಕೆ ಸರ್ಕಾರ ತಮಿಳುನಾಡಿನ ಜನತೆಗೆ ದ್ರೋಹ ಬಗೆದಿದೆ. ಈ ನಡೆಯನ್ನು ರಾಜ್ಯದ ಮಹಿಳೆಯರು ಎಂದಿಗೂ ಕ್ಷಮಿಸುವುದಿಲ್ಲ ಎಂದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರವಿವಾರ ಈರೋಡ್ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಡಿಎಂಕೆ ಮತ್ತು ಅದರ ಮಿತ್ರಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಮಹಿಳಾ ಹಕ್ಕುಗಳ ಕಸಿದ ಮಿತ್ರಪಕ್ಷಗಳು
"ಮುಖ್ಯಮಂತ್ರಿ ಸ್ಟಾಲಿನ್ ಕೇವಲ ಮಸೂದೆಯನ್ನು ಸೋಲಿಸಿಲ್ಲ, ಬದಲಾಗಿ ತಮಿಳುನಾಡಿನ ಹೆಣ್ಣುಮಕ್ಕಳ ಹಕ್ಕುಗಳನ್ನು ತುಳಿದಿದ್ದಾರೆ. ಕಾಂಗ್ರೆಸ್, ವಿಸಿಕೆ ಮತ್ತು ಎಡಪಕ್ಷಗಳೂ ಸಹ ಮಹಿಳಾ ಮೀಸಲಾತಿಯನ್ನು ವಿರೋಧಿಸುವ ಮೂಲಕ ಮಹಿಳೆಯರ ಹಕ್ಕುಗಳನ್ನು ಕಸಿದುಕೊಂಡಿವೆ," ಎಂದು ಅವರು ಆರೋಪಿಸಿದರು.

ಕ್ಷೇತ್ರ ಮರುವಿಂಗಡಣೆಯಿಂದ ತಮಿಳುನಾಡಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಭರವಸೆ ನೀಡಿದ್ದರೂ, ಡಿಎಂಕೆ ಅನಗತ್ಯವಾಗಿ ಇದನ್ನು ವಿರೋಧಿಸುತ್ತಿದೆ. ಮುಂಬರುವ ಚುನಾವಣೆಯಲ್ಲಿ ಜನರೇ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಭವಿಷ್ಯ ನುಡಿದರು.

ಹದಗೆಟ್ಟ ಕಾನೂನು ಸುವ್ಯವಸ್ಥೆ
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಟೀಕಿಸಿದ ಪಳನಿಸ್ವಾಮಿ, "ಜನಸಾಮಾನ್ಯರ ರಕ್ಷಣೆ ಮಾಡಬೇಕಾದ ಪೊಲೀಸ್ ಪಡೆಗೇ ಇಂದು ರಕ್ಷಣೆ ಇಲ್ಲದಂತಾಗಿದೆ. ಹಳ್ಳಿ-ಹಳ್ಳಿಗಳಲ್ಲಿ ಗಾಂಜಾ ಮಾರಾಟ ಎಗ್ಗಿಲ್ಲದೆ ಸಾಗುತ್ತಿದ್ದು, ಮಾದಕ ವ್ಯಸನಿಗಳಿಂದ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಎಐಎಡಿಎಂಕೆ ಅಧಿಕಾರಕ್ಕೆ ಬಂದರೆ ಗಾಂಜಾ ಮುಕ್ತ ತಮಿಳುನಾಡು ಮಾಡುವುದಾಗಿ" ಭರವಸೆ ನೀಡಿದರು.

ಚುನಾವಣಾ ಭರವಸೆಗಳ ಮಹಾಪೂರ

-ಪಡಿತರ ಅಂಗಡಿಗಳಲ್ಲಿ ವಿತರಿಸುವ ಅಕ್ಕಿಯನ್ನು ಮಾರುಕಟ್ಟೆಯಲ್ಲಿ ಸಿಗುವ ಗುಣಮಟ್ಟದ ಅಕ್ಕಿಗೆ ಸಮಾನವಾಗಿ ನೀಡಲಾಗುವುದು.

-ನೇಯ್ಗೆಗಾರರ ಮಾಸಿಕ ಪೆನ್ಷನ್ ಅನ್ನು 1,000 ರಿಂದ 2,500 ಕ್ಕೆ ಏರಿಸಲಾಗುವುದು.

-ಮುಚ್ಚಲ್ಪಟ್ಟ 700 ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಪುನರಾರಂಭಿಸಿ, ಶಿಕ್ಷಣ ಕ್ಷೇತ್ರಕ್ಕೆ ಮೊದಲ ಆದ್ಯತೆ ನೀಡಲಾಗುವುದು.

-ಸರ್ಕಾರಿ ಶಿಕ್ಷಕರ ದೀರ್ಘಕಾಲದ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಲಾಗುವುದು.

Dailyhunt
Disclaimer: This content has not been generated, created or edited by Dailyhunt. Publisher: Udayavani