ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ವಿಜಯ್ ನೇತೃತ್ವದ ಸರ್ಕಾರವು ರಾಜ್ಯದಲ್ಲಿ ಹಸು ಮತ್ತು ಕರುಗಳ ಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸುವ ಮದ್ರಾಸ್ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಬುಧವಾರ (ಜು.01) ಅರ್ಜಿ ಸಲ್ಲಿಸಿದ್ದು, ಇದು ರಾಜಕೀಯ ವಿವಾದಕ್ಕೆ ಕಾರಣವಾಗಿದೆ ಎಂದು ವರದಿ ತಿಳಿಸಿದೆ.
ಮೇ 27ರ ಹೈಕೋರ್ಟ್‌ನ ಆದೇಶದ ವಿರುದ್ಧ ಟಿವಿಕೆ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಇದು ತಮಿಳುನಾಡು ಪ್ರಾಣಿ ಸಂರಕ್ಷಣಾ ಕಾಯ್ದೆ, 1958ಕ್ಕೆ ವಿರುದ್ಧವಾಗಿದೆ ಎಂದು ವಾದಿಸಿದೆ. ಕೃಷಿ ಕೆಲಸ ಮತ್ತು ಸಂತಾನೋತ್ಪತ್ತಿ ಮಾಡಲು ಅನರ್ಹವೆಂದು ಪ್ರಮಾಣೀಕರಿಸಲ್ಪಟ್ಟ 10 ವರ್ಷಕ್ಕಿಂತ ಮೇಲ್ಪಟ್ಟ ಹಸುಗಳನ್ನು ವಧಿಸಲು ಕಾನೂನು ಅನುಮತಿಸುತ್ತದೆ. ಆದರೆ ಹೈಕೋರ್ಟ್ ಕಾನೂನನ್ನು ಮೀರಿದ ಸಂಪೂರ್ಣ ನಿಷೇಧವನ್ನು ಹೇರಿದೆ ಎಂದು ತಮಿಳುನಾಡು ಸರ್ಕಾರ ವಾದಿಸಿದೆ.
ಕೊಯಮತ್ತೂರಿನಲ್ಲಿ ಬಕ್ರೀದ್ ಸಮಯದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಗೋಹತ್ಯೆಯನ್ನು ತಡೆಯಲು ಮಾತ್ರ ಹೈಕೋರ್ಟ್‌ನ ಮುಂದೆ ಸಲ್ಲಿಸಲಾದ ಮೂಲ ಅರ್ಜಿಗೆ ಸಂಬಂಧಿಸಿದಂತೆ ಸರ್ಕಾರ ವಾದಿಸಿತ್ತು. ಆದರೆ, ಸಂಪೂರ್ಣ ನಿಷೇಧದ ಆದೇಶಕ್ಕೆ ಕೋರದಿದ್ದರೂ, ತಮಿಳುನಾಡಿನಾದ್ಯಂತ ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಿ ನ್ಯಾಯಾಲಯವು ಆದೇಶ ನೀಡಿದೆ ಎಂದು ಹೇಳಿದೆ.
"ಬಕ್ರೀದ್ ಹಬ್ಬದ ಮುನ್ನಾದಿನ ಅಥವಾ ಇನ್ನಾವುದೇ ದಿನದಂದು ಯಾವುದೇ ಹಸು ಅಥವಾ ಕರುವನ್ನು ವಧಿಸದಂತೆ ನೋಡಿಕೊಳ್ಳಬೇಕು" ಎಂದು ವಿಭಾಗೀಯ ಪೀಠವು ತನ್ನ ಆದೇಶದಲ್ಲಿ ರಾಜ್ಯಕ್ಕೆ ನಿರ್ದೇಶನ ನೀಡಿದೆ ಎಂದು ತಿಳಿಸಿದೆ.

