Thursday, 03 Dec, 1.04 am ಉದಯವಾಣಿ

ಟಾಪ್ 10 ಸುದ್ದಿ
ತನಿಖಾ ಸಂಸ್ಥೆ ಕಚೇರಿಗಳಲ್ಲಿ ಸಿಸಿ ಕೆಮರಾ: ಸು. ಕೋರ್ಟ್‌

ಹೊಸದಿಲ್ಲಿ: ವಿವಿಧ ಪ್ರಕರಣಗಳಲ್ಲಿ ತನಿಖೆ ಕೈಗೊಳ್ಳುವ ಮತ್ತು ಬಂಧಿಸುವ ಅಧಿಕಾರ ಹೊಂದಿರುವ ಸಿಬಿಐ, ಜಾರಿ ನಿರ್ದೇಶನಾಲಯ (ಇಡಿ) ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸಹಿತ ಎಲ್ಲ ತನಿಖಾ ಸಂಸ್ಥೆಗಳ ಕಚೇರಿಗಳಲ್ಲಿ ಸಿಸಿ ಕೆಮರಾ ಮತ್ತು ರೆಕಾರ್ಡಿಂಗ್‌ ಉಪಕರಣ ಗಳನ್ನು ಅಳವಡಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯವು ಬುಧ ವಾರ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಿದೆ.

ಸಿಸಿ ಕೆಮರಾಗಳು ಪ್ರತೀ ಪೊಲೀಸ್‌ ಠಾಣೆ ಯಲ್ಲಿಯೂ ಅಳವಡಿಕೆ ಯಾಗಿರಬೇಕು. ಅವು ಆಗಮನ ಮತ್ತು ನಿರ್ಗಮನ ದ್ವಾರ, ಲಾಕಪ್‌, ಕಾರಿಡಾರ್‌ಗಳು, ಸ್ವಾಗತಕಾರಿಣಿ ಸ್ಥಳಗಳನ್ನು ಚಿತ್ರೀಕರಿಸುವ ರೀತಿಯಲ್ಲಿ ಇರುವಂತೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ನೋಡಿಕೊಳ್ಳಬೇಕು ಎಂದು ನ್ಯಾಯಪೀಠ ಆದೇಶ ನೀಡಿದೆ.

ಪೊಲೀಸ್‌ ಠಾಣೆಗಳಲ್ಲಿ ಮಾನವ ಹಕ್ಕು ಉಲ್ಲಂಘನೆಯಾಗದಂತೆ ನೋಡಿಕೊಳ್ಳಲು ಸಿಸಿ ಕೆಮರಾ ಅಳವಡಿಸುವಂತೆ ಸುಪ್ರೀಂ ಕೋರ್ಟ್‌ ಈ ಹಿಂದೆ ಆದೇಶ ನೀಡಿತ್ತು. ಇದಕ್ಕೆ ಪೂರಕವಾಗಿ ಎಲ್ಲ ತನಿಖಾ ಸಂಸ್ಥೆಗಳು ತಮ್ಮ ಎಲ್ಲ ಕಚೇರಿಗಳಲ್ಲಿ ಕಡ್ಡಾಯವಾಗಿ ಸಿಸಿ ಕೆಮರಾ ಅಳವಡಿಸಿಕೊಳ್ಳಬೇಕು ಎಂದು ಆದೇಶ ನೀಡಿದೆ.

ಸಿಸಿ ಕೆಮರಾ ವ್ಯವಸ್ಥೆಯು ನೈಟ್‌ ವಿಷನ್‌ ಹೊಂದಿರಬೇಕು ಹಾಗೂ ವೀಡಿಯೋ ಚಿತ್ರೀಕರಣ ಸಾಮರ್ಥ್ಯದ ಜತೆಗೆ ಧ್ವನಿಗ್ರಹಣ ಮತ್ತು ದಾಖಲೀಕರಣ ಸಾಮರ್ಥ್ಯವನ್ನೂ ಹೊಂದಿರಬೇಕು ಎಂದೂ ಅದು ಆದೇಶಿಸಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Udayavani
Top