ತಿರುಪತಿ: ಯುವಜನರೇ ಕಷ್ಟಪಟ್ಟು ಏದುಸಿರು ಬಿಡುತ್ತಾ ಏರುವ ತಿರುಪತಿಯ ಅಲಿಪಿರಿ ಮೆಟ್ಟಿಲುಗಳನ್ನು ಕರ್ನಾಟಕದ 116 ವರ್ಷದ ವೃದ್ಧೆಯೊಬ್ಬರು ಹತ್ತುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಕರ್ನಾಟಕದ ಭೀಮವ್ವ 3,350 ಮೆಟ್ಟಿಲುಗಳನ್ನು ಹತ್ತುವ ಮೂಲಕ ಈ ಸಾಧನೆ ಮಾಡಿದ್ದಾರೆ.
ಅಲ್ಲದೇ ಅಷ್ಟೂ ಮಾರ್ಗದಲ್ಲಿ ಯಾರದೇ ಸಹಾಯವನ್ನೂ ಪಡೆಯದ ಭೀಮವ್ವ, ಕೈಯಲ್ಲಿ ಕೋಲೊಂದನ್ನು ಹಿಡಿದು, 'ಗೋವಿಂದಾ ಗೋವಿಂದಾ ' ಎಂದು ದೇವರ ನಾಮ ಜಪಿಸುತ್ತಾ ಬೆಟ್ಟವನ್ನು ಹತ್ತಿದ್ದಾರೆ.
ಭೀಮವ್ವ ಅವರ ಈ ದೃಢಸಂಕಲ್ಪ, ಭಕ್ತಿಯನ್ನು ಕಂಡು ದಾರಿಯುದ್ದಕ್ಕೂ ಇದ್ದ ಸಹಯಾತ್ರಿಕರು ಅಚ್ಚರಿಗೊಳಗಾಗಿದ್ದಾರೆ. ಕೆಲವರು ಅವರ ಈ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಯಸ್ಸು ಕೇವಲ ದೇಹಕ್ಕೆ ಮಿತಿಗಳನ್ನು ವಿಧಿಸಬಹುದೇ ಹೊರತು, ಮಾನಸಿಕ ಸ್ಥೈರ್ಯವಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಭೀಮವ್ವ ಸಾಕ್ಷಿಯಾಗಿದ್ದಾರೆ.
ತಿರುಮಲ ಬೆಟ್ಟ ಹತ್ತಲು ಶ್ರೀವಾರಿ ಹಾಗೂ ಅಲಿಪಿರಿ ಎಂಬ 2 ಮಾರ್ಗಗಳಿದ್ದು, ಈ ಪೈಕಿ ಅಲಿಪಿರಿ ಕಠಿಣವಾದ ಮಾರ್ಗವಾಗಿದೆ. ಶ್ರೀವಾರಿ ಮಾರ್ಗದಲ್ಲಿ 2,388 ಮೆಟ್ಟಿಲುಗಳಿದ್ದು ಸುಮಾರು 2.1 ಕಿ.ಮೀ. ಇದೆ. ಅದೇ ಅಲಿಪಿರಿ 3,550 ಮೆಟ್ಟಿಲುಗಳೊಂದಿಗೆ 11 ಕಿ.ಮೀ. ಮಾರ್ಗವಿದೆ.

