Dailyhunt Logo
  • Light mode
    Follow system
    Dark mode
    • Play Story
    • App Story
Tooth Gum: ವಸಡಿನ ಕೀವು

Tooth Gum: ವಸಡಿನ ಕೀವು

ಸಡಿನ ಕೀವು ಎಂಬುದು ಸರ್ವೇಸಾಮಾನ್ಯವಾಗಿ ಕಾಣಿಸಿಕೊಳ್ಳುವ ಸಮಸ್ಯೆಯಾಗಿದೆ. ಬಹಳಷ್ಟು ಜನರಿಗೆ ಇದರ ಅರಿವು ಕಡಿಮೆ. ಇದಕ್ಕೆ ಮುಖ್ಯ ಕಾರಣವೆಂದರೆ ವಸಡಿನ ರೋಗ. ವಸಡುಗಳು ಹಲ್ಲಿನ ಅಡಿಪಾಯವಿದ್ದಂತೆ. ಬಲಿಷ್ಠವಾದ ಅಡಿಪಾಯ ಇದ್ದರೆ ಹೇಗೆ ಕಟ್ಟಡವು ಬಲಾಡ್ಯವಾಗಿ ಇರುತ್ತದೆಯೋ, ಹಾಗೆಯೇ ಹಲ್ಲುಗಳ ಸದೃಢತೆಗೆ ಆರೋಗ್ಯಕರ ವಸಡು ಆವಶ್ಯಕ.

ವಸಡಿನ ಕಾಯಿಲೆಗೆ ಮುಖ್ಯ ಕಾರಣವೆಂದರೆ ಹಲ್ಲಿನ ಮೇಲಿನ ದಂತಪಾಚಿ. ಇದಕ್ಕೆ ಡೆಂಟಲ್‌ ಪ್ಲಾಕ್‌ ಎಂದು ಕರೆಯುತ್ತಾರೆ. ಈ ಪ್ಲಾಕ್‌ ಬ್ಯಾಕ್ಟೀರಿಯಾಗಳಿಂದ ಕೂಡಿದ್ದು, ವಸಡಿನ ಕಾಯಿಲೆಯನ್ನು ಉಂಟುಮಾಡುತ್ತದೆ. ಇದನ್ನು ಹಾಗೆಯೇ ಬಿಟ್ಟರೆ ಕಾಲಕ್ರಮೇಣ ದಂತಪಾಚಿಯು ಗಟ್ಟಿಯಾಗಿ ದಂತಕಿಟ್ಟ (ಡೆಂಟಲ್‌ ಕ್ಯಾಲ್ಕುಲಸ್‌) ಆಗಿ ಪರಿವರ್ತನೆಗೊಳ್ಳುತ್ತದೆ.

ಇದು ವಸಡಿನ ಊತಕ್ಕೆ ಕಾರಣವಾಗುತ್ತದೆ. ಹಲ್ಲುಜ್ಜಬೇಕಾದರೆ ವಸಡಿನಿಂದ ರಕ್ತಸ್ರಾವ, ಬಾಯಿಯ ದುರ್ವಾಸನೆ, ವಸಡು ಜಾರುವಿಕೆ ಹಾಗು ಹಲ್ಲುಗಳು ಅಲುಗಾಡುವುದಕ್ಕೆ ಕಾರಣವಾಗುತ್ತದೆ.

ತಪ್ಪು ಕಲ್ಪನೆಗಳು

ಹಳ್ಳಿಪ್ರದೇಶಗಳಲ್ಲಿ ವಸಡಿನ ಕೀವು ಕೀವು ಆದ ಜಾಗಕ್ಕೆ ಕಲ್ಲುಪ್ಪು ಇಟ್ಟು ಜೋರಾಗಿ ಒತ್ತಿ ಅದನ್ನು ಒಡೆಯುತ್ತಾರೆ. ಇದರಿಂದ ಕೆಲವು ಬಾರಿ ಸೋಂಕು ಬೇರೆ ಜಾಗಕ್ಕೆ ಪಸರಿಸಬಹುದು.

ಸೂಜಿಯಿಂದ ಚುಚ್ಚಿ ಒಡೆಯುವುದು- ಇದರಿಂದ ಸೋಂಕು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇರುತ್ತದೆ.

ಪರಿಹಾರ ಹೇಗೆ?

ವಸಡಿನ ಕೀವು ಕೀವು ಆದಾಗ ಕೂಡಲೇ ದಂತವೈದ್ಯರನ್ನು ಕಾಣಬೇಕು. ದಂತ ವೈದ್ಯರು ವಸಡಿನ ಕೀವು ಆಗಲು ಕಾರಣವನ್ನು ಪತ್ತೆಹಚ್ಚುತ್ತಾರೆ. ಈ ಮೊದಲೇ ತಿಳಿಸಿದಂತೆ ಮಧುಮೇಹ (ಡಯಾಬಿಟಿಸ್‌) ಇರುವ ವ್ಯಕ್ತಿಗಳಲ್ಲಿ ವಸಡಿನ ಕೀವು ಜಾಸ್ತಿಯಾಗಿ ಕಾಣಿಸಿಕೊಳ್ಳುತ್ತದೆ. ಆದುದರಿಂದ ದಂತವೈದ್ಯರು ನಿಮಗೆ ರಕ್ತಪರೀಕ್ಷೆ ಮಾಡಲು ಹೇಳಬಹುದು. ಮಧುಮೇಹ ಕಾಯಿಲೆ ಇರುವ ವ್ಯಕ್ತಿಗಳು ತಮ್ಮ ರಕ್ತದ ಸಕ್ಕರೆ ಪ್ರಮಾಣವನ್ನು ಹತೋಟಿಯಲ್ಲಿಟ್ಟಾಗ ವಸಡಿನ ಕೀವು ಕೀವು ಆಗುವ ಅಪಾಯ ಕಡಿಮೆಯಾಗುತ್ತದೆ.

ಕೀವಿನ ಕಾರಣವನ್ನು ಪತ್ತೆ ಹಚ್ಚಿದ ಬಳಿಕ, ವೈದ್ಯರು ಆ ಗುಳ್ಳೆಯನ್ನು ಕ್ರಿಮಿಮುಕ್ತ ಉಪಕರಣಗಳ ಸಹಾಯದಿಂದ ಸ್ವತ್ಛ ಮಾಡಿ, ಕೀವನ್ನು ಸಂಪೂರ್ಣವಾಗಿ ತೆಗೆಯುತ್ತಾರೆ. ಆ ಜಾಗಕ್ಕೆ ಆಂಟಿಸೆಪ್ಟಿಕ್‌ ಔಷಧ ಹಾಕುತ್ತಾರೆ. ಅನಂತರ ನಿಮಗೆ ಆಂಟಿಬಯೋಟಿಕ್‌ ಮಾತ್ರೆಗಳನ್ನೂ ನೀಡುತ್ತಾರೆ. ಈ ಮಾತ್ರೆಗಳು ಸೋಂಕು ಉಂಟುಮಾಡುವ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುತ್ತವೆ. ಎಂದಿಗೂ ಕೂಡ ಆಂಟಿಬಯೋಟಿಕ್‌ ಮಾತ್ರೆಗಳನ್ನು ವೈದ್ಯರ ಸಲಹೆ ವಿನಃ ತಗೆದುಕೊಳ್ಳಬಾರದು.

ಇಷ್ಟೇ ಅಲ್ಲದೆ ಅದೇ ಭೇಟಿಯಲ್ಲಿ ಹಲ್ಲಿನ ಸ್ವಚ್ಛತೆ (ಡೆಂಟಲ್‌ ಸ್ಕೇಲಿಂಗ್‌) ಕೂಡ ಮಾಡಿಸುವುದು ಉತ್ತಮ. ಏಕೆಂದರೆ ಈ ಸಣ್ಣ ಚಿಕಿತ್ಸೆಯಿಂದ ಹಲ್ಲಿನ ಮೇಲಿರುವ ದಂತಕಿಟ್ಟ (ಡೆಂಟಲ್‌ ಕ್ಯಾಲ್ಕುಲಸ್‌) ಸಂಪೂರ್ಣವಾಗಿ ಹೋಗುತ್ತದೆ ಹಾಗು ವಸಡಿನ ಆರೋಗ್ಯದಲ್ಲಿ ಸುಧಾರಣೆ ಉಂಟಾಗುತ್ತದೆ.

ಪ್ರತೀ 6 ತಿಂಗಳಿಗೊಮ್ಮೆ ದಂತವೈದರನ್ನು ಭೇಟಿ ಮಾಡಿ ಬಾಯಿಯ ಹಾಗೂ ಹಲ್ಲಿನ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ. ರೋಗ ಬಂದ ಅನಂತರ ಚಿಕಿತ್ಸೆ ಪಡೆಯುವುದಕ್ಕಿಂತ ರೋಗವು ಬಾರದಂತೆ ಪ್ರಾಥಮಿಕ ಹಂತದÇÉೇ ತಡೆಗಟ್ಟುವುದು ಉತ್ತಮ ಹಾಗು ಜಾಣತನ.

ವಸಡಿನ ಕೀವಿಗೆ ಮುಖ್ಯ ಕಾರಣಗಳು

 ಅನಿಯಮಿತವಾದ ಹಲ್ಲಿನ ಸ್ವಚ್ಛತೆ

 ಹಲ್ಲಿನ ಸಂದುಗಳಲ್ಲಿ ಕಡ್ಡಿ/ ಟೂತ್‌ಪಿಕ್‌ ಹಾಕುವುದು

 ತಿಂದ ಆಹಾರ ಪದಾರ್ಥಗಳು ಸಿಕ್ಕಿಕೊಳ್ಳುವುದು

 ಮಧುಮೇಹ

ಕಾಯಿಲೆಯ ಲಕ್ಷಣಗಳು

ತೀವ್ರ ನೋವು, ಕೆಂಪಾದ ವಸಡು, ಕೀವು ಗಾತ್ರದಲ್ಲಿ ದೊಡ್ಡದಾಗುವುದು, ಗುಳ್ಳೆ ಆಕಾರದ ವಸಡು, ಬಾಯಿಯ ವಾಸನೆ, ನಾಲಗೆಯಲ್ಲಿ ಕಹಿ ರುಚಿ, ಜ್ವರ ಇತ್ಯಾದಿ

-ಡಾ| ಬಿ. ಅಂಬರೀಶ್‌ ಕಾಮತ್‌

ಪೋಸ್ಟ್ ಗ್ರಾಜುಯೇಟ್‌,

-ಡಾ| ಸಂತೋಷ್‌ ಕುಮಾರ್‌

ಪ್ರೊಫೆಸರ್‌ ಮತ್ತು ವಿಭಾಗ ಮುಖ್ಯಸ್ಥರು

ಪೆರಿಯೋಡೊಂಟಾಲಜಿ ವಿಭಾಗ

ಎಂಕಾಡ್ಸ್‌, ಮಾಹೆ, ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಪೆರಿಯೋಡೊಂಟಾಲಜಿ ವಿಭಾಗ, ಎಂಕಾಡ್ಸ್‌, ಮಾಹೆ, ಮಣಿಪಾಲ)

Dailyhunt
Disclaimer: This content has not been generated, created or edited by Dailyhunt. Publisher: Udayavani