ಉಡುಪಿ: ಕಿಸಾನ್ ಕ್ರೆಡಿಟ್ ಯೋಜನೆಯಡಿ ಜಿಲ್ಲೆಯ ರೈತರಿಗೆ ಬೆಳೆಸಾಲ, ಮೀನುಗಾರರಿಗೆ ಮೀನುಗಾರಿಕೆ ಉದ್ದೇಶಿತ ಸಾಲ ಹಾಗೂ ಹೈನುಗಾರರಿಗೆ ಹೈನುಗಾರಿಕೆ ಪೂರಕ ಸಾಲ ಒದಗಿಸಲಾಗುತ್ತಿದೆ. ಜಿಲ್ಲೆಯ 49,429 ರೈತರು ಸುಮಾರು 725.05 ಕೋಟಿಯಷ್ಟು ಬೆಳೆ ಸಾಲ ಪಡೆದಿದ್ದಾರೆ.
ಕುಂದಾಪುರ ತಾಲೂಕು ಒಂದರಲ್ಲೇ 29623 ರೈತರು 393 .71 ಕೋಟಿ ಸಾಲ ಪಡೆದಿದ್ದರೆ, ಕಾರ್ಕಳದಲ್ಲಿ 6184 ರೈತರು 115.57 ಕೋಟಿ ರೂ. ಪಡೆದಿದ್ದಾರೆ. ತಾಲೂಕುಗಳಾದ ಬ್ರಹ್ಮಾವರ 77.22 ಕೋಟಿ, ಬೈಂದೂರು 69.16 ಕೋಟಿ, ಹೆಬ್ರಿ 37.97 ಕೋಟಿ, ಉಡುಪಿ 21.49 ಕೋಟಿ ಮತ್ತು ಕಾಪು 9.93 ಕೋಟಿ ರೂ. ಸಾಲ ಸೌಲಭ್ಯ ಪಡೆದಿವೆ. ರೈತರು ತಮ್ಮಲ್ಲಿರುವ ಜಮೀನಿನ ಲಭ್ಯತೆ ಆಧಾರದಲ್ಲಿ ಅದರಲ್ಲಿ ಬೆಳೆಯುವ ಬೆಳೆಗೆ ರಾಷ್ಟ್ರೀಕೃತ ಬ್ಯಾಂಕ್ ಗಳ ಮೂಲಕ ಸಾಲ ಸೌಲಭ್ಯ ಒದಗಿಸಲಾಗುತ್ತದೆ.
ಜಿಲ್ಲೆಯ 6890 ಹೈನುಗಾರರಿಗೆ 42.26 ಕೋಟಿ ಸಾಲ ನೀಡಲಾಗಿದೆ. ಬೈಂದೂರಿನ 4831 ಹೈನುಗಾರರು 6.87 ಕೋಟಿ, ಕುಂದಾಪುರದ 1759 ಹೈನುಗಾರರು 14.19 ಕೋಟಿ, ಬ್ರಹ್ಮಾವರದ 650 ಹೈನುಗಾರರಿಗೆ 5.04 ಕೋಟಿ, ಕಾರ್ಕಳದ 523 ಹೈನುಗಾರರಿಗೆ 5.14 ಕೋಟಿ, ಹೆಬ್ರಿಯ 408 ಹೈನುಗಾರರಿಗೆ 4.82 ಕೋಟಿ, ಉಡುಪಿಯ 400 ಹೈನುಗಾರರಿಗೆ 4.22 ಕೋಟಿ ಹಾಗೂ ಕಾಪುವಿನ 264 ಹೈನುಗಾರರಿಗೆ 1.98 ಕೋಟಿ ಸಾಲ ಒದಗಿಸಲಾಗಿದೆ.
ಜಿಲ್ಲೆಯ 3952 ಮೀನುಗಾರರಿಗೆ 111.22 ಕೋಟಿ ಸಾಲ ನೀಡಲಾಗಿದೆ. ಕುಂದಾಪುರದ 1571 ಮೀನುಗಾರರು 34.20 ಕೋಟಿ, ಬೈಂದೂರಿನ 1156 ಮೀನುಗಾರರು 19.05 ಕೋಟಿ, ಉಡುಪಿಯ 631 ಮೀನುಗಾರರಿಗೆ 39.95 ಕೋಟಿ, ಬ್ರಹ್ಮಾವರದ 342 ಮೀನುಗಾರರಿಗೆ 9.48 ಕೋಟಿ, ಕಾಪುವಿನ 250 ಮೀನುಗಾರರಿಗೆ 8.54 ಕೋಟಿ ಸಾಲ ಒದಗಿಸಲಾಗಿದೆ. ಕಾರ್ಕಳ ಹಾಗೂ ಹೆಬ್ರಿ ತಾಲೂಕಿನಲ್ಲಿ ಯಾವುದೇ ಹಂಚಿಕೆಯಾಗಿಲ್ಲ.
ಶೇ.9ರ ಬಡ್ಡಿ ದರದಲ್ಲಿ 1ರಿಂದ 3 ಲಕ್ಷ ರೂ. ನೀಡಲಾಗುತ್ತಿದ್ದು, ಇದನ್ನು ವರ್ಷದೊಳಗೆ ಪೂರ್ಣ ಮರುಪಾವತಿ ಮಾಡಿದರೆ ಅನುಕೂಲ ಹೆಚ್ಚಿದೆ. ಜಮೀನು ಲಭ್ಯತೆ ಹೆಚ್ಚಿದ್ದರೆ ಹೆಚ್ಚು ಸಾಲವೂ ಅರ್ಹತೆ ಮಾನದಂಡಗಳಿಗೆ ಅನುಗುಣವಾಗಿ ನೀಡಲಾಗುತ್ತದೆ ಎಂದರು.
2025-26ರಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ಜಿಲ್ಲೆಯ ಸುಮಾರು 60,267 ಫಲಾನುಭವಿಗಳಿಗೆ 878.53 ಕೋಟಿ ಸಾಲ ವಿತರಿಸಲಾಗಿದೆ. ಎರಡು ಲಕ್ಷ ಮಿತಿಯಲ್ಲಿ ಸಾಲವಿದ್ದರೆ ಸಲ್ಲಿಸಬೇಕಾದ ದಾಖಲಾತಿ ಪ್ರಮಾಣವೂ ಕಡಿಮೆ ಇರುತ್ತದೆ. ಕಿಸಾನ್ ಕಾರ್ಡ್ ಪಡೆದವರಿಗೆ ಸುಲಭವಾಗಿ ಸಾಲ ದೊರೆಯಲಿದೆ
- ಹರೀಶ್, ಲೀಡ್ ಬ್ಯಾಂಕ್ ಮ್ಯಾನೇಜರ್ ಉಡುಪಿ.

