Dailyhunt
ಉದ್ಯೋಗ ನುಂಗಿದ ಕೋವಿಡ್ ! ಪದವೀಧರನ ಬದುಕಿಗೆ ಖಾತ್ರಿ ಆಸರೆ

ಉದ್ಯೋಗ ನುಂಗಿದ ಕೋವಿಡ್ ! ಪದವೀಧರನ ಬದುಕಿಗೆ ಖಾತ್ರಿ ಆಸರೆ

ಗಜೇಂದ್ರಗಡ: ಕೋವಿಡ್ ಆರ್ಭಟಕ್ಕೆ ಇಡೀ ದೇಶವೇ ನಲುಗಿದೆ. ಮಹಾಮಾರಿ ನಿಯಂತ್ರಣಕ್ಕೆ ಸರ್ಕಾರ ಕರ್ಫ್ಯೂ ಜಾರಿಗೊಳಿಸಿದ್ದರಿಂದ ಬೆಂಗಳೂರಿನಿಂದ ಸ್ವಗ್ರಾಮಕ್ಕೆ ಆಗಮಿಸಿದ ಪದವೀಧರನ ಬದುಕಿಗೆ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಕೆಲಸ ಆಸರೆಯಾಗಿದೆ.

ದಿಂಡೂರು ಗ್ರಾಮದ ನಿವಾಸಿ ದುರ್ಗಪ್ಪ ಮಾದರ, ಪದವಿ ಮುಗಿಸಿ ಬೆಂಗಳೂರಿನ ಮಹಾಬೆಲ್‌ ಇಂಡಸ್ಟ್ರೀಸ್‌ ಎಲ್‌ಇಡಿ ಕಂಪನಿಯಲ್ಲಿ ಕಳೆದ 8 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದರು. ಆದರೀಗ ಬೆಂಗಳೂರಿನಲ್ಲಿ ಕೊರೊನಾ ಹೊಡೆತಕ್ಕೆ ಕೆಲಸ ಮಾಡುತ್ತಿದ್ದ ಕಂಪನಿ ಬಾಗಿಲು ಮುಚ್ಚಿದೆ.

ಕೋವಿಡ್‌ ಆರ್ಭಟಕ್ಕೆ ಹಲವಾರು ನೌಕರರು ಕೆಲಸ ಕಳೆದುಕೊಂಡಿದ್ದಾರೆ. ಅವರ ಸಾಲಿನಲ್ಲಿ ದುರ್ಗಪ್ಪ ಸಹ ಒಬ್ಬರು. ಉದ್ಯೋಗ ಇಲ್ಲದೇ ಸಂಕಷ್ಟದ ಬದುಕು ಸಾಗಿಸುತ್ತಿದ್ದ ದುರ್ಗಪ್ಪ ಬೆಂಗಳೂರು ತೊರೆದು, ಸ್ವಗ್ರಾಮಕ್ಕೆ ಮರಳಿದ್ದರು.

ಗ್ರಾಮಕ್ಕೆ ಬಂದ ನಂತರ ಯಾವೊಂದು ಕೆಲಸವಿಲ್ಲದೇ, ನಿರುದ್ಯೋಗದ ಸಮಸ್ಯೆ ಕಾಡತೊಡಗಿತು. ತುತ್ತಿನ ಚೀಲ ತುಂಬಿಸಿಕೊಳ್ಳಲು ಪದವಿಯ ಹಂಗಿಲ್ಲದೇ ರಾಜೂರು ಗ್ರಾಪಂ ವತಿಯಿಂದ ನಡೆಯುತ್ತಿದ್ದ ನರೇಗಾ ಅಡಿಯಲ್ಲಿ ಹೊಸ ಜಾಬ್‌ ಕಾರ್ಡ್‌ ಪಡೆದು ಕೂಲಿ ಕೆಲಸದಲ್ಲಿ ಇದೀಗ ತಲ್ಲೀನರಾಗಿದ್ದಾರೆ.

ಕೈ ಹಿಡಿದ ನರೇಗಾ: ಕಲಿತದ್ದು ಬಿ.ಎ ಶಿಕ್ಷಣ. ಕೆಲಸ ಮಾತ್ರ ಇಲ್ಲ. ಏನು ಮಾಡೋದು, ಬೇರೆ ಊರಿಗೆ ತೆರಳಿ ಕೆಲಸ ಮಾಡಬೇಕು ಅಂದ್ರೆ ಕೊರೊನಾ ಪೀಕಲಾಟ ಬೇರೆ ಎಂದು ದಿನಂಪ್ರತಿ ಕೊರಗುತ್ತ ದಿನ ಕಳೆಯುತ್ತಿದ್ದ, ದುರ್ಗಪ್ಪನಿಗೆ ಇದ್ದೂರಲ್ಲೇ ಸಂಜೀವಿನಿಯಂತೆ ನರೇಗಾ ಕೂಲಿ ಕೆಲಸ ದೊರೆಯುವ ಮೂಲಕ ಪದವೀಧರನ ಕೈ ಹಿಡಿದಿದೆ. ಸದ್ಯ ಸಾಮೂಹಿಕ ಬದು ನಿರ್ಮಾಣ ಕಾಮಗಾರಿಯಲ್ಲಿ ಕೆಲಸ ಮಾಡುವ ಮೂಲಕ ಧನ್ಯತಾ ಭಾವ ಮೆರೆಯುತ್ತಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Udayavani