1963ರಲ್ಲಿ ಟರ್ಕಿಯ ಕಪ್ಪಡೋಕಿಯಾ ಪ್ರಾಂತದ ಒಂದು ಹಳ್ಳಿ ಮನೆಯಲ್ಲಿ ನಡೆದ ಒಂದು ಸಣ್ಣ ದುರಸ್ತಿ ಕಾರ್ಯವು ಮಾನವ ಇತಿಹಾಸದ ಒಂದು ಮರೆಯಾದ ಪುಟವನ್ನೇ ತೆರೆಯುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಆ ಒಂದು ಅಚ್ಚರಿಯ ಘಟನೆಯಿಂದ ಭೂಗರ್ಭದಲ್ಲಿ ಹೂತು ಹೋಗಿದ್ದ ಡೆರಿಂಕ್ಯು ನಗರದ ಕುರಿತಾಗಿ ಅಚ್ಚರಿಯ ಮಾಹಿತಿ ಇಡೀ ಪ್ರಪಂಚಕ್ಕೆ ದೊರಕಿತು.
ಹಿಂದಿನ ವಾರದ ಅಂಕಣದಲ್ಲಿ, ಭೂಗರ್ಭದಲ್ಲಿ ಹೂತು ಹೋಗಿದ್ದ ಈ ಡೆರಿಂಕ್ಯು ನಗರವನ್ನು ಹೇಗೆ ಪತ್ತೆ ಹಚ್ಚಲಾಯಿತು, ಅಲ್ಲಿ ಕಂಡು ಬಂದ ವಿಶೇಷತೆಗಳೇನು ಎನ್ನುವ ಮಾಹಿತಿಯನ್ನ ನೀವು ಓದಿದ್ದೀರಿ. ಮುಂದುವರಿದ ಈ ಅಂಕಣದಲ್ಲಿ ಆ ನಗರವನ್ನು ಏಕೆ ನಿರ್ಮಿಸಲಾಗಿತ್ತು? ಅದನ್ನು ಯಾರು ನಿರ್ಮಿಸಿದರು? ಅಲ್ಲಿನ ಪ್ರಮುಖ ಆಕರ್ಷಣೆಗಳು ? ಇನ್ನು ಹಲವಾರು ಆಸಕ್ತಿದಾಯಕ ಅಂಶಗಳನ್ನು ತಿಳಿದುಕೊಳ್ಳೋಣ.
ರಕ್ಷಣೆ ಮತ್ತು ಯುದ್ಧತಂತ್ರ
ಅಂದಿನ ಕಾಲದಲ್ಲಿ ಆಕ್ರಮಣಕಾರರಿಂದ ರಕ್ಷಿಸಿಕೊಳ್ಳಲು ಕೋಟೆ ಕೊತ್ತಲುಗಳನ್ನು ನಿರ್ಮಿಸಿಕೊಳ್ಳುವುದು ಸಾಮಾನ್ಯವಾಗಿತ್ತು. ಇದೇ ತಂತ್ರವನ್ನು ಇಲ್ಲಿ ನೆಲೆಸಿದ್ದ ಅಂದಿನ ಕಾಲದ ಜನರು ತಮ್ಮ ರಕ್ಷಣೆಗಾಗಿ ಪ್ರಮುಖವಾಗಿ ಶತ್ರುಗಳ ಆಕ್ರಮಣದಿಂದ ತಪ್ಪಿಸಿಕೊಳ್ಳಲು ಭೂಮಿಯ ಅಡಿಯಲ್ಲಿ ಇಡೀ ಜಗತ್ತನ್ನೇ ಸೃಷ್ಟಿಸಿಕೊಂಡಿದ್ದರೆಂದು ಸಂಶೋಧನೆ ಮೂಲಕ ಗೊತ್ತಾಯಿತು. ಇಲ್ಲಿನ ಭೌಗೋಳಿಕ ಪರಿಸರ ಅಥವಾ ಭೂರಚನೆ ಅವರಿಗೆ ಇಂತಹ ರಕ್ಷಣಾತ್ಮಕ ನಗರವನ್ನು ಕಟ್ಟಿಕೊಳ್ಳಲು ನೆರವು ನೀಡಿದೆ ಎನ್ನಬಹುದು. ಈ ನಗರದ ಅತ್ಯಂತ ಆಕರ್ಷಕ ಭಾಗವೆಂದರೆ ಅದರ ಭದ್ರತೆ.
ಕಲ್ಲಿನ ಬಾಗಿಲುಗಳು
ಇಲ್ಲಿನ ರಕ್ಷಣ ವ್ಯವಸ್ಥೆ ಎಷ್ಟು ಅದ್ಭುತವಾಗಿತ್ತೆಂದರೆ, ಒಳಗಿನಿಂದ ಮಾತ್ರ ತೆರೆಯಬಹುದಾದ ಬೃಹತ್ ಗುಂಡಿನಾಕಾರದ ಕಲ್ಲುಗಳನ್ನು ದಾರಿಗಳನ್ನು ಮುಚ್ಚಲು ಬಳಸಲಾಗುತ್ತಿತ್ತು. ಪ್ರತಿಯೊಂದು ಅಂತಸ್ತನ್ನು ಸುಮಾರು 500 ಕೆ.ಜಿ. ತೂಕದ ಬೃಹತ್ ಚಕ್ರಾಕಾರದ ಕಲ್ಲಿನ ಬಾಗಿಲುಗಳಿಂದ ಮುಚ್ಚಬಹುದಾಗಿತ್ತು.
ಕಿರಿದಾದ ಸುರಂಗಗಳು
ಸುರಂಗಗಳು ಬಹಳ ಕಿರಿದಾಗಿದ್ದವು, ಇದರಿಂದ ಶತ್ರು ಸೈನಿಕರು ಗುಂಪಾಗಿ ಒಳಬರಲು ಸಾಧ್ಯವಿರಲಿಲ್ಲ; ಒಬ್ಬೊಬ್ಬರಾಗಿ ಬರಬೇಕಿತ್ತು, ಇದರಿಂದ ಕಾವಲು ಕಾಯುತ್ತಿದ್ದ ರಕ್ಷಕರಿಗೆ ಆಕ್ರಮಣಕಾರರನ್ನು ಎದುರಿಸುವುದು ಸುಲಭವಾಗುತ್ತಿತ್ತು. ಓಬವ್ವನ ಕಿಂಡಿಯಲ್ಲಿ ಒಬ್ಬೊಬ್ಬರೆ ಒಳ ಬರುವಂತಹ ರೀತಿಯಲ್ಲಿ ಅತೀ ಕಿರಿದಾದ ಮಾರ್ಗಗಳಿದ್ದವು, ಆದರೆ ಬಗ್ಗಿಕೊಂಡು ನುಸುಳಿ ಬರುವಂತೆ ಅಲ್ಲ.
ಈ ನಗರವನ್ನೆನೂ ಕೆಲವೇ ವರ್ಷಗಳಲ್ಲಿ ನಿರ್ಮಿಸಲಾಗಿರಲಿಲ್ಲ. ನೂರಾರು ವರ್ಷಗಳ ಕಾಲ ಹಂತಹಂತವಾಗಿ ಈ ನಗರವನ್ನು ನಿರ್ಮಾಣ ಮಾಡಿದ್ದರು. ಮೊದಲಿಗೆ ಕ್ರಿ.ಪೂ. 2000ರ ಕಾಲಕ್ಕೆ ಸೇರಿದ ಹಿಟ್ಟೈಟ್ ಜನಾಂಗದವರು ಈ ಕಟ್ಟಡದ ಕೆಲಸವನ್ನು ಶುರು ಮಾಡಿದ್ದರು. ತದನಂತರ ಫ್ರಿಜಿಯನ್ ಸಮುದಾಯದವರು (ಕ್ರಿ. ಪೂರ್ವ 1600 -1200)ಮುಂದುವರಿಸಿಕೊಂಡು ಹೋಗಿದ್ದಾರೆ. ತದನಂತರ ಹಲವಾರು ನಾಗರಿಕತೆಯ ಜನಾಂಗದವರು ಇದನ್ನು ಅಭಿವೃದ್ಧಿ ಪಡಿಸಿರಬಹುದು ಎಂದು ಅಂದಾಜಿಸಲಾಗಿದೆ. ಒಟ್ಟಿನಲ್ಲಿ ಸಾವಿರಾರು ವರ್ಷಗಳ ಹಿಂದೆ ಹಿಟ್ಟೈಟ್‌ಗಳು ಮತ್ತು ಫ್ರಿಜಿಯನ್ ಸಮುದಾಯಗಳು Hittites and Phrygians) ಈ ನಗರವನ್ನು ನಿರ್ಮಿಸಿರಬಹುದು ಎನ್ನಲಾಗಿದೆ.
ರೋಮನ್ ಆಳ್ವಿಕೆಯ ಆರಂಭಿಕ ಶತಮಾನಗಳಲ್ಲಿ (2 ಮತ್ತು 3ನೇ ಶತಮಾನ), ಕ್ರಿಶ್ಚಿಯನ್ ಧರ್ಮವನ್ನು ಹೆಚ್ಚಾಗಿ ಕಾನೂನುಬಾಹಿರ ಅಥವಾ ಅನುಮಾನದಿಂದ ನೋಡಲಾಗುತ್ತಿತ್ತು. ಟರ್ಕಿ ದೇಶದ ಕಪ್ಪಡೋಸಿಯಾ ರೋಮನ್ ಪ್ರಾಂತವಾಗಿದ್ದರಿಂದ, ಸ್ಥಳೀಯ ಮತಾಂತರಿಗಳು ರೋಮನ್ ಸಾಮ್ರಾಜ್ಯದ ಕಿರುಕುಳದಿಂದ ತಪ್ಪಿಸಿಕೊಳ್ಳಲು ಡೆರಿಂಕ್ಯುನಂತಹ ಭೂಗತ ನಗರಗಳಲ್ಲಿ ಬಚ್ಚಿಟ್ಟುಕೊಂಡು ಜೀವಿಸಲು ಪ್ರಾರಂಭಿಸಿದರು. ಇದಕ್ಕೆ ಪುರಾವೆಯೆಂಬಂತೆ, ಪುರಾತತ್ತ್ವಜ್ಞರು ಸಂಶೋಧನೆ ನಡೆಸುವಾಗ ಸುರಂಗಗಳ ಒಳಗೆ ರೋಮನ್ ಯುಗದ ನಾಣ್ಯಗಳು ಮತ್ತು ಎಣ್ಣೆ ದೀಪಗಳು ದೊರಕಿವೆ, ಇದು ರೋಮನ್ ಸಾಮ್ರಾಜ್ಯದ ಉತ್ತುಂಗದಲ್ಲಿದ್ದಾಗ ಇಲ್ಲಿನ ಜನರು ಈ ಜಾಗದಲ್ಲಿ ವಾಸಿಸುತ್ತಿದ್ದರು ಅಥವಾ ಅಡಗಿಕೊಂಡಿದ್ದರು. ಇದೇ ಸಮಯದಲ್ಲಿ ಇಲ್ಲಿ ವಾಸವಿದ್ದ ಜನರು ರಕ್ಷಣಾತ್ಮಕ ವ್ಯವಸ್ಥೆಯನ್ನು ಇನ್ನೂ ಕಠಿನಗೊಳಿಸಿದರು. ಅನಂತರ, ಅರಬ್-ಬೈಜಾಂಟೈನ್ ಯುದ್ಧಗಳ(ಕ್ರಿ.ಶ. 780 -1180) ಸಮಯದಲ್ಲಿ ಅರಬ್ ದಾಳಿಗಳಿಂದ ಇಲ್ಲಿ ವಾಸಿಸುತ್ತಿದ್ದ ನಿವಾಸಿಗಳನ್ನು ರಕ್ಷಿಸಲು ಇದೇ ಸುರಂಗಗಳನ್ನು ಇನ್ನಷ್ಟು ವಿಸ್ತರಿಸಲಾಯಿತು. ಅದೇ ಸಮಯದಲ್ಲಿ ಸುಮಾರು 20,000 ಜನಸಂಖ್ಯೆಯ ಗರಿಷ್ಠ ಜನಸಂಖ್ಯೆಯನ್ನು ತಲುಪಿತು ಎಂದು ಅಂದಾಜಿಸಲಾಗಿದೆ.
ಪ್ರಾಚೀನ ಭಾರತೀಯ ನಂಟು ಮತ್ತು ಇತಿಹಾಸ
ಈ ನಗರದ ಮೇಲಿನ ಹಂತಗಳಲ್ಲಿ ಕ್ರಿ.ಪೂ. 2000ರ ಕಾಲದ ಹಿಟ್ಟೈಟ್ (Hittites) ಸಂಸ್ಕೃತಿಯ ಕುರುಹುಗಳು ಸಿಕ್ಕಿವೆ. ಇತಿಹಾಸಕಾರರ ಪ್ರಕಾರ, ಈ ಹಿಟ್ಟೈಟ್‌ಗಳು ಇಂಡೋ-ಯೂರೋಪಿಯನ್ ಮೂಲದವರಾಗಿದ್ದು, ಹಿಟ್ಟೈಟ್ ಸಮುದಾಯ ಮತ್ತು ಪ್ರಾಚೀನ ಭಾರತದ ನಡುವೆ ಆಳವಾದ ಸಂಪರ್ಕವಿದೆ. ಏಕೆಂದರೆ ಅವರು ಋಗ್ವೇದದಂತಹ ಪವಿತ್ರ ಹಿಂದೂ ಗ್ರಂಥಗಳಲ್ಲಿ ಉಲ್ಲೇಖೀಸಲಾದ ಆರ್ಯರೊಂದಿಗೆ ಸಂಬಂಧಿಸಿದ ವಿಶಾಲ ಇಂಡೋ-ಯೂರೋಪಿಯನ್ ವಲಸೆಯ ಭಾಗವಾಗಿದ್ದರು. ಇವರು ಸಹ ಭಾರತೀಯರಂತೆ ಬಹುದೇವತ ಆರಾಧಕರಾಗಿದ್ದರು. ಕಳೆದ ಶತಮಾನದಲ್ಲಿ ನಡೆದ ಸಂಶೋಧನೆ ಪ್ರಕಾರ ಇವರು ಸರ್ವ ಧರ್ಮ ಸಹಿಷ್ಣುಗಳಾಗಿದ್ದರು. ಜಾತ್ಯಾತೀತ ಮೌಲ್ಯಗಳಿಗೂ ಸಹ ಒತ್ತು ಕೊಟ್ಟಿದ್ದರು. ನಮ್ಮಲ್ಲಿನ ಹಬ್ಬಗಳು, ಜಾತ್ರೆಗಳು ಹೇಗೆ ಪ್ರಕೃತಿಗೆ ಸಂಬಂಧಿಸಿದವಾಗಿದ್ದವೋ ಅದೇ ರೀತಿ ಅವರು ಸಹ ಸುಗ್ಗಿ, ಹೊಸ ವರ್ಷ, ಇತ್ಯಾದಿಗಳನ್ನು ಆಚರಿಸುತ್ತಿದ್ದರು. ಕೆಲವು ಹಬ್ಬಗಳ ಆಚರಣೆಯಲ್ಲಿ ದೇವರುಗಳನ್ನು ಹೊತ್ತು ಮೆರವಣಿಗೆಯಲ್ಲಿ ಸಾಗುತಿದ್ದರಂತೆ. ಭಾರತದಲ್ಲಿದ್ದಂತೆ ರಾಜಾಡಳಿತ ಅಲ್ಲಿಯೂ ಇತ್ತು, ಜನರ ಅಪೇಕ್ಷೆ, ಇಚ್ಛೆ, ಕಷ್ಟ ನಷ್ಟಗಳ ಬಗ್ಗೆ ಅರಿವಿಟ್ಟುಕೊಂಡು ಆಡಳಿತ ನಡೆಸುತ್ತಿದ್ದ ರು. ಇವರ ಮೇಲೆ ಆಕ್ರಮಣಗಳು ಹೆಚ್ಚಾದಂತೆ, ಇವರ ಅರಸೊತ್ತಿಗೆ ನಶಿಸಿಹೋಯಿತು. ಅನಂತರ ಬಂದ ಹಲವಾರು ಶತ್ರುಗಳು ಈ ಭಾಗವನ್ನು ಆಕ್ರಮಿಸಿಕೊಂಡಿದ್ದರೂ ಬಹುಕಾಲ ಮುಂದುವರೆಯಲಿಲ್ಲ.
ಮುಂದೆ ಅಲ್ಲಿ ನೆಲೆಕಂಡುಕೊಂಡ ಫ್ರಿಜಿಯನ್ ಸಮುದಾಯವು ಸಹ ಇನ್ನೊಂದು ಇಂಡೋ-ಯೂರೋಪಿಯನ್ ಗುಂಪಾಗಿದ್ದರು. ಈ ನಗರದಲ್ಲಿನ ಕೆಳಗಿನ ಹಂತಗಳು ಲೋಹ ಯುಗದಲ್ಲಿ ಫ್ರಿಜಿಯನ್‌ಗಳಿಂದ ನಿರ್ಮಾಣ ಮುಂದುವರಿದಿದ್ದನ್ನು ಸೂಚಿಸುತ್ತವೆ. ಇವರು ಸಹ ಇಂಡೋ ಆರ್ಯನ್ ಮೂಲದವರಾಗಿದ್ದರಿಂದ ಭಾರತೀಯ ಪೂರ್ವಜರಿಗೂ ಇವರಿಗೂ, ವಾಸ್ತುಶಿಲ್ಪ ಕೌಶಲ ಸೇರಿದಂತೆ ಹಲವಾರು ವಿಚಾರಗಳಲ್ಲಿ ಮತ್ತು ವಿಷಯಗಳಲ್ಲಿ ಹೋಲಿಕೆಗಳಿದ್ದವು.
ಮರುಹುಟ್ಟು
1920ರ ದಶಕದ ಗ್ರೀಕೊ-ಟರ್ಕಿಷ್ ಯುದ್ಧದ ಅನಂತರ ಈ ನಗರದ ರಹಸ್ಯಗಳು ಜನರ ನೆನಪಿನಿಂದ ಮರೆಯಾಗಿದ್ದವು. ಆದರೆ 1963ರ ಆ ರೈತನ "ಕೋಳಿ ಕಳೆದುಹೋದ' ಘಟನೆಯಿಂದಾಗಿ ಈ ಅದ್ಭುತ ಪ್ರಪಂಚಕ್ಕೆ ಮತ್ತೆ ಜೀವ ಬಂದಿತು. 1985ರಲ್ಲಿ ಯುನೆಸ್ಕೋ (UNESCO) ಇದನ್ನು "ವಿಶ್ವ ಪರಂಪರೆ ತಾಣ' ಎಂದು ಘೋಷಿಸಿದೆ. ನಮ್ಮ ಕಾಲದ ತಂತ್ರಜ್ಞಾನವಿಲ್ಲದ ಆ ಕಾಲದಲ್ಲಿ, ಕೇವಲ ಕೈ ಉಪಕರಣಗಳಿಂದ ಇಂತಹ ಬೃಹತ್ ನಗರವನ್ನು ನಿರ್ಮಿಸಿದ್ದು ಮಾನವನ ಬುದ್ಧಿಶಕ್ತಿಗೆ ಹಿಡಿದ ಕನ್ನಡಿಯಾಗಿದೆ, ಮಾನವ ಇತಿಹಾಸದ ಅದ್ಭುತಗಳಲ್ಲಿ ಒಂದಾಗಿ ಉಳಿದಿದೆ.. ಡೆರಿಂಕ್ಯು ನಗರ ನಮಗೆ ಕಲಿಸುವ ಪಾಠವೇನೆಂದರೆ ಮನುಷ್ಯನಿಗೆ ಬದುಕುವ ಛಲವಿದ್ದರೆ ಭೂಮಿಯ ಆಳದಲ್ಲೂ ಸ್ವರ್ಗವನ್ನು ಸೃಷ್ಟಿಸಬಲ್ಲ.
ಟರ್ಕಿಯ ಕಪ್ಪಡೋಕಿಯಾದ ಪ್ರಮುಖ ಆಕರ್ಷಣೆಗಳು
ಇಂದು ಈ ಪ್ರದೇಶ ಪ್ರವಾಸಿಗರ ಪ್ರಮುಖ ಭೇಟಿಯ ತಾಣವಾಗಿ ಮಾರ್ಪಟ್ಟಿದೆ. ಟರ್ಕಿಗೆ ಭೇಟಿ ನೀಡುವ ಲಕ್ಷಾಂತರ ವಿದೇಶಿ ಪ್ರವಾಸಿಗರು ಈ ತಾಣಕ್ಕೆ ಭೇಟಿ ನೀಡುತ್ತಾರೆ.
1.ಹಾಟ್ ಏರ್‌ಬಲೂನ್ ಸವಾರಿ: ಮುಂಜಾನೆಯ ಸೂರ್ಯೋದಯದ ಸಮಯದಲ್ಲಿ ನೂರಾರು ಬಲೂನ್‌ಗಳು ಬಂಡೆಗಳ ಮೇಲೆ ಹಾರಾಟ ನಡೆಸುವುದು ಪ್ರಮುಖ ಆಕರ್ಷಣೆಯಾಗಿದೆ.
2. ಗೋರೆಮ್ ಓಪನ್ ಏರ್‌ಮ್ಯೂಸಿಯಂ: ಬಂಡೆಗಳನ್ನು ಕೊರೆದು ನಿರ್ಮಿಸಲಾದ ಚರ್ಚ್‌ಗಳು ಮತ್ತು ಹಳೆಯ ಕಾಲದ ಹಸಿಚಿತ್ರಗಳನ್ನು ಇಲ್ಲಿ ನೋಡಬಹುದು.
3. ಭೂಗರ್ಭ ನಗರಗಳು (Underground Cities): ಡೆರಿಂಕ್ಯು (Derinkuyu) ಮತ್ತು ಕೈಮಾಕ್ಲಿ (Kaymakli) ಭೂಮಿಯ ಆಳದಲ್ಲಿರುವ ಈ ಪ್ರಾಚೀನ ನಗರಗಳಿಗೆ ಭೇಟಿ ನೀಡಬಹುದು.
4.ಗುಹೆ ಹೊಟೇಲ್‌ಗಳು ( Cave Hotels): ಬಂಡೆಗಳನ್ನು ಕೊರೆದು ನಿರ್ಮಿಸಲಾದ ಮನೆಗಳಲ್ಲಿ ತಂಗುವ ವಿಶಿಷ್ಟ ಅನುಭವವನ್ನು ನೀವು ಇಲ್ಲಿ ಹೊಂದಬಹುದು.
5. ಪಾರಿವಾಳಗಳ ಕಣಿವೆ (Pigeon Valley) - ಲವ್ ವ್ಯಾಲಿ: ವಿಶಿಷ್ಟವಾದ ಕಲ್ಲುಗಳ ರಚನೆಗಳು ಮತ್ತು ಹೈಕಿಂಗ್‌ಗೆ ಸೂಕ್ತ ಸ್ಥಳ, ಹೈಕಿಂಗ್ ಪ್ರಿಯರಿಗೆ ಇದು ಹೇಳಿ ಮಾಡಿಸಿದ ಸ್ಥಳವಾಗಿದೆ.
ಭೇಟಿ ನೀಡಲು ಉತ್ತಮ ಸಮಯ:
ವಸಂತ (ಎಪ್ರಿಲ್-ಜೂನ್) ಮತ್ತು ಶರತ್ಕಾಲ (ಸೆಪ್ಟಂಬರ್-ಅಕ್ಟೋಬರ್) ಹವಾಮಾನವು ಹಿತಕರವಾಗಿರುತ್ತದೆ, ಇದು ಬಲೂನ್ ಸವಾರಿಗೆ ಉತ್ತಮ ಸಮಯ.
ತಲುಪುವುದು ಹೇಗೆ?
ಕೈಸೇರಿ (Kayseri) ಅಥವಾ ನೆವ್ಸಿಹಿರ್(Nevşehir) ವಿಮಾನ ನಿಲ್ದಾಣಗಳ ಮೂಲಕ ಕಪ್ಪಡೋಕಿಯಾವನ್ನು ಸುಲಭವಾಗಿ ತಲುಪಬಹುದು. ಇಸ್ತಾಂಬುಲ್‌ನಿಂದ ಇಲ್ಲಿಗೆ ಪ್ರಯಾಣಿಸಲು ವಿಮಾನ ಅಥವಾ ಬಸ್ ವ್ಯವಸ್ಥೆಯಿದೆ.
*ಪಿ.ಎಸ್.ರಂಗನಾಥ, ಮಸ್ಕತ್

