ಬೆಂಗಳೂರು: ಮತದಾರರ ತೀರ್ಪು ಮತಪೆಟ್ಟಿಗೆ (ಇವಿಎಂ ಯಂತ್ರ) ಸೇರುತ್ತಿದ್ದಂತೆ ಕಾಂಗ್ರೆಸ್‌ನಲ್ಲಿ ಸೋಲು ಗೆಲುವಿನ ಲೆಕ್ಕಾಚಾರ ಶುರುವಾಗಿದ್ದು, ಉಸ್ತುವಾರಿಗಳು ಸೇರಿ ವಿವಿಧ ಮೂಲಗಳಿಂದ ಎರಡೂ ಕ್ಷೇತ್ರಗಳ 'ರಿಪೋರ್ಟ್ ಕಾರ್ಡ್' ಪಡೆಯುತ್ತಿದೆ.
ಉಪಕದನ ಘೋಷಣೆಯಾಗುತ್ತಿದ್ದಂತೆ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣಕ್ಕೆ ಕಾಂಗ್ರೆಸ್ ನಾಯಕರು, ಸಚಿವರು ಮತ್ತು ಕೆಪಿಸಿಸಿ ಪದಾಧಿಕಾರಿಗಳನ್ನು ಒಳಗೊಂಡ ಉಸ್ತುವಾರಿ ಸಮಿತಿಗಳನ್ನು ರಚಿಸಿತ್ತು.
ಜತೆಗೆ ಬ್ಲಾಕ್ ಮಟ್ಟದಲ್ಲಿ ಸಮಿತಿಗಳನ್ನು ರಚಿಸಿ, 'ಗೆಲುವಿನ ಟಾಸ್ಕ್' ನೀಡಿದ್ದರು. ಆ ಟಾಸ್ಕ್‌ನಲ್ಲಿ ಯಾರ್ಯಾರು ಎಷ್ಟು ಅಂಕಗಳನ್ನು ಪಡೆದು ಪಾಸಾಗಿದ್ದಾರೆ ಎಂಬುದನ್ನು ವಿಶ್ಲೇಷಿಸುವ ಕಾರ್ಯ ನಡೆದಿದೆ.
ಎರಡೂ ಕ್ಷೇತ್ರಗಳಿಗೆ ಹೆಚ್ಚು ಕಡಿಮೆ ತಲಾ 60 ಕಾಂಗ್ರೆಸ್ ಶಾಸಕರನ್ನು ನಿಯೋಜಿಸಲಾಗಿತ್ತು. ಅದರಲ್ಲಿ ಪ್ರತಿ ಜಿಲ್ಲಾ ಪಂಚಾಯ್ತಿಗೆ ಸಚಿವರು ಮತ್ತು ಬ್ಲಾಕ್‌ಗಳಿಗೆ ಶಾಸಕರು ಹಾಗೂ ವಿಧಾನ ಪರಿಷತ್ತಿನ ಸದಸ್ಯರನ್ನು ನಿಯೋಜಿಸಲಾಗಿತ್ತು. ಯಾವ ಸಮುದಾಯಗಳು ಎಲ್ಲಿ ಪ್ರಬಲವಾಗಿವೆ ಎಂಬುದನ್ನು ಲೆಕ್ಕಹಾಕಿ, ಜವಾಬ್ದಾರಿಗಳ ಹಂಚಿಕೆ ಮಾಡಲಾಗಿತ್ತು. ಅಷ್ಟೇ ಅಲ್ಲದೆ, ವಹಿಸಿದ ಜವಾಬ್ದಾರಿಗಳ ನಿರ್ವಹಣೆ ಮೇಲೆ ಸ್ವತಃ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲ ನಿಗಾ ವಹಿಸಿದ್ದರು. ಮತದಾನ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಅಂದರೆ ಗುರುವಾರ ಸಂಜೆಯಿಂದಲೇ ರಿಪೋರ್ಟ್ ಕಾರ್ಡ್ ಪಡೆಯುವ ಕಾರ್ಯ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಯಾವ ಬ್ಲಾಕ್‌ಗಳಲ್ಲಿ ಪಕ್ಷದ ಅಭ್ಯರ್ಥಿಗೆ ಎಷ್ಟು ಮತಗಳು ಬರಬಹುದು? ಎಲ್ಲಿ ಹಿನ್ನಡೆಯಾಗುವ ಸಾಧ್ಯತೆ ಇದೆ? ಅದಕ್ಕೆ ಕಾರಣಗಳು ಏನು? ಎದುರಾಳಿ ಪಕ್ಷದ ಅಭ್ಯರ್ಥಿಗಳಿಗೆ ಯಾವ ಬ್ಲಾಕ್‌ನಿಂದ ಎಷ್ಟು ಮತಗಳು ಬರಬಹುದು? ಇದೆಲ್ಲವನ್ನೂ ತಾಳೆ ಹಾಕಲಾಗುತ್ತಿದೆ ಎಂದು ಹೇಳಲಾಗಿದೆ.
ಇಂದು ಸಮಗ್ರ ವರದಿ ಸಲ್ಲಿಕೆ:
ಈಗಾಗಲೇ ಬಹುತೇಕ ಮುಖಂಡರು ತಮ್ಮ ವ್ಯಾಪ್ತಿಯಲ್ಲಿರುವ ಮತದಾರರ ಚಿತ್ತ ಯಾರತ್ತ ಇದೆ ಎಂಬುದರ ಚಿತ್ರಣವನ್ನು ಉಸ್ತುವಾರಿ ಸಮಿತಿಗಳಿಗೆ ನೀಡಿದ್ದಾರೆ. ಅದೆಲ್ಲವನ್ನೂ ಕ್ರೋಡೀಕರಿಸುತ್ತಿರುವ ಸಮಿತಿಯು ಶುಕ್ರವಾರ ಸಮಗ್ರ ವರದಿಯನ್ನು ನೀಡಲಿದೆ ಎಂದೂ ಸಮಿತಿ ಉಸ್ತುವಾರಿಯೊಬ್ಬರು ತಿಳಿಸಿದ್ದಾರೆ.
ಎರಡೂ ಕ್ಷೇತ್ರದಲ್ಲಿ ಬೆಟ್ಟಿಂಗ್ ಅಬ್ಬರ
ಇದೆಲ್ಲದರ ನಡುವೆ ಎರಡೂ ಕ್ಷೇತ್ರಗಳಲ್ಲಿ ತೀವ್ರ ಹಣಾಹಣಿ ಏರ್ಪಟ್ಟಿದ್ದು, ಬೆಂಬಲಿಗರ ನಡುವೆ ಸ್ಥಳೀಯಮಟ್ಟದಲ್ಲಿ ಬೆಟ್ಟಿಂಗ್ ಅಬ್ಬರ ಕೂಡ ಜೋರಾಗಿದೆ. ಈ ಸಲ ಗೆಲ್ಲುವ ಕುದುರೆ ಯಾವುದು? ಯಾರೇ ಗೆದ್ದರೂ ಮತಗಳ ಅಂತರ ಎಷ್ಟು ಇರಲಿದೆ? ಕಳೆದ ಬಾರಿಗಿಂತ ಹೆಚ್ಚು ಮತಗಳನ್ನು ಪಕ್ಷ ಪಡೆಯಲಿದೆಯೇ? ಎನ್ನುವುದು ಸೇರಿದಂತೆ ವಿವಿಧ ರೂಪಗಳಲ್ಲಿ ಅಭ್ಯರ್ಥಿಗಳ ಬೆಂಬಲಿಗರು ಹಾಗೂ ಪ್ರತಿಸ್ಪರ್ಧಿಗಳ ಬೆಂಬಲಿಗರ ನಡುವೆ ಬೆಟ್ಟಿಂಗ್ ಕಂಡುಬರುತ್ತಿದೆ. ಈ ಮಧ್ಯೆಯೇ ಚುನಾವಣೋತ್ತರ ಸಮೀಕ್ಷೆಗಳು ಆರಂಭವಾಗಿವೆ. ವಿವಿಧ ಸಂಸ್ಥೆಗಳು ತಮ್ಮದೇ ಆದ ಮೂಲಗಳಿಂದ ಮತದಾರರ ನಾಡಿಮಿಡಿತ ಹಿಡಿದು, ಗೆಲುವಿನ ಹಾರ ಯಾರ ಕೊರಳಿಗೆ ಬೀಳಲಿದೆ ಎಂಬ ಕುತೂಹಲಕ್ಕೆ ಮೇ 4ರಂದು ಉತ್ತರ ಸಿಗಲಿದೆ.

