ಚಿಕ್ಕಮಗಳೂರು: ತಪ್ಪು ಮಾಡಿದವನಿಗೆ ಶಿಕ್ಷೆಯಾಗಬೇಕು. ಉಪ್ಪು ತಿಂದವನು ನೀರು ಕುಡಿಯಬೇಕು. ಅದು ಪ್ರಕೃತಿ ನಿಯಮ ಎಂದು ಸಚಿವ ನಾಗೇಂದ್ರ ರಾಜೀನಾಮೆ ವಿಚಾರ ಕುರಿತು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಪ್ರತಿಕ್ರಿಯಿಸಿದರು.
ಶುಕ್ರವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಇ.ಡಿ.
ತನಿಖೆಯಲ್ಲಿ ನನಗೆ ಸಿಕ್ಕಿರುವ ಮಾಹಿತಿ ಪ್ರಕಾರ ವಾಲ್ಮೀಕಿ ಹಗರಣದ 187 ಕೋಟಿ ಹಣ ಕಟ್ಕೊಂಡೋರು ಮತ್ತು ಇಡ್ಕೋಂಡೋರು ಇಬ್ಬರ ಖಾತೆಗೂ ಹೋಗಿದೆ. ಯಾರು ಯಾರನ್ನು ಇಟ್ಟುಕೊಂಡಿದ್ದಾರೆ ಎಂದು ಇಂದು ನನ್ನ ಬಳಿ ಕೇಳಬೇಡಿ ಎಂದರು.
ವಾಲ್ಮೀಕಿ ಹಗರಣವನ್ನು ಎಸ್‌ಐಟಿ ತಿಪ್ಪೇ ಸಾರುವ ಕೆಲಸ ಮಾಡಿರಬಹುದು. ಸಿಬಿಐ, ಇ.ಡಿ. ತಿಪ್ಪೇ ಸಾರುವ ಕೆಲಸ ಮಾಡಲ್ಲ, ಕಡೆವರೆಗೂ ತನಿಖೆ ನಡೆಸೇ ನಡೆಸುತ್ತಾರೆ. ಇಲ್ಲವಾದರೇ ಈ ರೀತಿ ಲೂಟಿ ಹೊಡೆಯುವವರಿಗೆ ಲೈಸೆನ್ಸ್ ಕೊಟ್ಟಂತೆ ಆಗುತ್ತದೆ ಎಂದು ಹೇಳಿದರು.
ಈ ಸರ್ಕಾರದಲ್ಲಿ ಭ್ರಷ್ಟರನ್ನೇ ಮಂತ್ರಿಮಾಡಿಕೊಳ್ಳುತ್ತಾರೆ. ಅಪರಾಧ ಸಾಭೀತಾಗಿಲ್ಲ ಅಂತಾರೆ. ಆದರೆ, ನಾಗೇಂದ್ರ ನಿರ್ದೋಷಿಯಾಗಿಲ್ಲ. ಚಂದ್ರಶೇಖರ್ ಡೆತ್‌ನೋಟ್ ಕೊಡುತ್ತಿರುವ ಸಾಕ್ಷಿ ಅಂಗೈ ಹುಣ್ಣಿನಷ್ಟೇ ಸ್ಪಷ್ಟವಾಗಿದೆ. ರಾಜೀನಾಮೆ ಕೊಡಲೇಬೇಕು ಎಂದರು.
ನಾವು ಬಡದಲಿತರ ಪರ, ಭ್ರಷ್ಟದಲಿತರ ಪರ ನಾವಿಲ್ಲ. ಕಾಂಗ್ರೆಸ್ ರ‍್ಕಾರ ಭ್ರಷ್ಟದಲಿತನ ಪರ ವಕಾಲತ್ತು ವಹಿಸುತ್ತಿದೆ. ಬಿಜೆಪಿ ಬಡದಲಿತರ ಪರ ವಕಾಲತ್ತು ವಹಿಸುತ್ತಿದೆ. ನಾವು ಪಾದಯಾತ್ರೆ ಹಮ್ಮಿಕೊಂಡಿರುವುದು ಬಡ ದಲಿತರ ಪರ, ಭ್ರಷ್ಟರ ಪರವಲ್ಲ. ಈ ಸರ್ಕಾರ ನಾಗೇಂದ್ರನನ್ನು ಮಂತ್ರಿಮಂಡಲಕ್ಕೆ ತಗೆದುಕೊಂಡು ತಪ್ಪು ಸಂದೇಶ ಕೊಟ್ಟಿದ್ದಾರೆ.
ವಾಲ್ಮೀಕಿ ಹಗರಣ ನಡೆದಿರುವುದು ಸಚಿವರ ಮೌಖಿಕ ಸೂಚನೆ ಮೇರೆಗೆ, ಇಲ್ಲವಾದರೇ ಎಂ.ಡಿ.ಗೆ ಅಷ್ಟೊಂದು ಧೈರ್ಯ ಎಲ್ಲಿಂದ ಬರುತ್ತಿತ್ತು ಎಂದು ಪ್ರಶ್ನಿಸಿದರು.

