'ಇರೋದೊಂದು ಜೀವನ್ ಹೋದ್ಮೇಲೆ ತಿನ್ನಕ್ಕಾಗುತ್ತಾ?' ಈ ಮಾತನ್ನು ನಾನು ಆಗಾಗ ಹೇಳಿಕೊಳ್ಳುವುದು. ಒಳ್ಳೆಯ ತಿಂಡಿ ಕಣ್ಣಿಗೆ ಬಿದ್ದಾಗಲೂ ಇದೇ ಮಾತು, ಸ್ನೇಹಿತರ ಜತೆ ಹೊರಗೆ ಹೋಗುವಾಗಲೂ ಇದೇ ಮಾತು. ಜೀವನದಲ್ಲಿ ಸಣ್ಣ ಸಣ್ಣ ಖುಷಿಗಳನ್ನು ಅನುಭವಿಸಬೇಕು ಅನ್ನುವುದು ನನ್ನ ನಂಬಿಕೆ.
ಬೆಂಗಳೂರಿನಲ್ಲಿ ಇಂಟರ್ನಶಿಪ್‌ಗೆ ಹೋದಾಗ ಒಂದು ದಿನ ನಾವು ಹೊರಗೆ ಹೋಗಿ ಏನಾದರೂ ತಿನ್ನೋಣ ಎಂದುಕೊಂಡೆವು. ಒಂದೇ ಜಾಗದಲ್ಲಿ ಕುಳಿತು ತಿಂದು ಬರುವುದಕ್ಕಿಂತ, ಬೇರೆ ಬೇರೆ ಕಡೆ ಸುತ್ತಾಡುತ್ತಾ ಸಿಗುವ ತಿಂಡಿಗಳನ್ನೆಲ್ಲ ರುಚಿ ನೋಡೋಣ ಎಂದು ನಿರ್ಧರಿಸಿದೆವು. ಹೀಗಾಗಿ ಮೆಟ್ರೋ ಕಡೆ ಹೊರಟೆವು. ಅದು ನಮಗೆ ಹೊಸ ಜಾಗ. ದಾರಿ ಗೊತ್ತಿಲ್ಲ, ಸುತ್ತಮುತ್ತಲಿನ ಪ್ರದೇಶದ ಪರಿಚಯವೂ ಇಲ್ಲ. ಆದರೂ ಆಫೀಸಿನಲ್ಲಿ ಯಾರೋ ಹೇಳಿದ್ದ ದಾರಿಯನ್ನು ನೆನಪಿಸಿಕೊಂಡು, ಹೋಗ್ತಾ ಹೋದ್ರೆ ಸಿಗುತ್ತೆ ಎಂಬ ಭಂಡ ಧೈರ್ಯದಲ್ಲಿ ಹೊರಟೆವು. ಮೊದಲಿಗೆ ಸಿಕ್ಕಿದ್ದು ಬಜ್ಜಿ. ಬಜ್ಜಿ ತಿಂದೆವು. ರುಚಿಯಾಗಿತ್ತು. ತತ್‌ಕ್ಷಣವೇ, ಇನ್ನು ಮುಂದೆ ಬಜ್ಜಿ ತಿನ್ನಬೇಕು ಅಂದರೆ ಇಲ್ಲಿಗೆ ಬರಬೇಕು ಎಂದುಕೊಂಡೆವು.
ಅಷ್ಟಕ್ಕೆ ನಮ್ಮ ತಿಂಡಿಯ ಪಯಣ ಮುಗಿಯಲಿಲ್ಲ. ಮುಂದೆ ಪಾನಿಪುರಿ, ಬೇಲ್‌ಪುರಿ, ಸುಕ್ಕಾಪುರಿ, ಗೋಬಿ ಹೀಗೆ ಒಂದರ ಹಿಂದೆ ಒಂದರಂತೆ ಸಿಕ್ಕ ತಿಂಡಿಗಳನ್ನು ತಿನ್ನುತ್ತಾ, ಮಾತಾಡುತ್ತಾ, ನಗುತ್ತಾ ಮುಂದೆ ಸಾಗುತ್ತಿದ್ದೆವು. ನಮ್ಮ ಗುರಿ ಏನು?ಪಿಜಿ ರೋಡ್ ತಲುಪುವುದು. ಆದರೆ ನಮ್ಮ ಗಮನ ಮಾತ್ರ ದಾರಿಗಿಂತ ತಿಂಡಿಯ ಮೇಲೆಯೇ ಇತ್ತು!
ಮುಂದೆ ನಮ್ಮ ಪಿಜಿ ರೋಡ್ ಬರುತ್ತೆ. ಇನ್ನೇನು ಸ್ವಲ್ಪ ದೂರ ಇರಬೇಕು. ಈ ದಾರಿಯೇ ಇರಬೇಕು. ಎಂದುಕೊಳ್ಳುತ್ತಾ ಮುಂದೆ ಹೋಗುತ್ತಿದ್ದೆವು. ಹೀಗೆ ಹೋಗುತ್ತಾ ಹೋಗುತ್ತಾ ಒಂದು ಹಂತದಲ್ಲಿ ನಾವು ಬಂದ ದಾರಿಯನ್ನೇ ಮರೆತುಬಿಟ್ಟೆವು. ದಾರಿ ಬಗ್ಗೆ ಗೊಂದಲ ಶುರುವಾಯಿತು. ಆದರೂ ಇಷ್ಟು ಬಂದಿದ್ದೀವಿ, ಮುಂದೆ ಹೋಗೋಣ ಎಂದು ಮತ್ತೆ ನಡೆಯುತ್ತಲೇ ಇದ್ದೆವು.
ಪಿಜಿ ರೋಡ್ ಮಾತ್ರ ಬರಲೇ ಇಲ್ಲ. ಅದರ ಬದಲು ಕೊನೆಗೆ ಎದುರಾದದ್ದು ಬನಶಂಕರಿ ರೋಡ್! ಬೋರ್ಡ್ ನೋಡಿದ ಕ್ಷಣಕ್ಕೆ ಎಲ್ಲರಿಗೂ ಶಾಕ್.'ಅಯ್ಯೋ! ನಾವು ಇಲ್ಲಿಯವರೆಗೆ ನಡೆದುಕೊಂಡು ಬಂದ್ವಾ?' ಸುಮಾರು ಎರಡು-ಮೂರು ಕಿಲೋಮೀಟರ್ ನಡೆದುಕೊಂಡು ಬಂದಿದ್ದೆವು. ಆದರೆ ತಿಂಡಿ ತಿನ್ನುತ್ತಾ, ಹರಟೆ ಹೊಡೆಯುತ್ತಾ, ನಗುತ್ತಾ ಬಂದಿದ್ದರಿಂದ ಅಷ್ಟು ದೂರ ನಡೆದಿದ್ದೇವೆ ಎಂಬುದೇ ನಮಗೆ ಗೊತ್ತಾಗಿರಲಿಲ್ಲ. ಕೊನೆಗೆ ಇನ್ನೇನು ಮಾಡುವುದು? ನಮ್ಮ ದಾರಿ ತಪ್ಪಾಗಿತ್ತು, ಆದ್ರೆ ಜೀವನಪರ್ಯಂತ ನೆನಪಿಟ್ಟುಕೊಳ್ಳುವ ಅನುಭವ ನಮ್ಮದಾಯಿತು. ಮತ್ತೆ ದಾರಿ ಹುಡುಕಿಕೊಂಡು ವಾಪಸ್ ಹೊರಟೆವು.ಆ ದಿನ ಪೀಜಿಗೆ ಬಂದ ಮೇಲೆ ಯೋಚಿಸಿದಾಗ, ಇದು ಕೇವಲ ದಾರಿ ತಪ್ಪಿದ ಒಂದು ದಿನವಾಗಿರಲಿಲ್ಲ ಅನ್ನಿಸಿತು.
ಜೀವನವೂ ಹಾಗೆಯೇ ಅಲ್ಲವೇ? ನಾವು ಎಲ್ಲವನ್ನೂ ಯೋಜಿಸಿಕೊಂಡು ಹೊರಡುತ್ತೇವೆ. ಆದರೆ ದಾರಿ ಯಾವಾಗಲೂ ನಾವು ಅಂದುಕೊಂಡಂತೆ ಸಾಗುವುದಿಲ್ಲ. ಕೆಲವೊಮ್ಮೆ ದಾರಿ ತಪ್ಪುತ್ತೇವೆ, ಗೊಂದಲಕ್ಕೊಳಗಾಗುತ್ತೇವೆ. ಆದರೆ ಆ ದಾರಿಯಲ್ಲೇ ನಮಗೆ ನಿರೀಕ್ಷಿಸದ ಅನುಭವಗಳು ಸಿಗುತ್ತವೆ. 'ಇರೋದೊಂದು ಜೀವನ. ಹೋದ್ಮೇಲೆ ತಿನ್ನಕ್ಕಾಗುತ್ತಾ?' ಹಾಗಂತ ಜೀವನವೆಲ್ಲ ತಿನ್ನುವುದರಲ್ಲೇ ಕಳೆಯಬೇಕು ಎಂದಲ್ಲ. ಆದರೆ ಬದುಕಿನ ನಡುವೆ ಸಿಗುವ ಸಣ್ಣ ಸಂತೋಷಗಳನ್ನು ಮುಂದೂಡುತ್ತಲೇ ಇರಬಾರದು. ಸ್ನೇಹಿತರ ಜತೆ ಒಂದು ಸುತ್ತು ಹೋಗುವುದು, ಇಷ್ಟವಾದ ತಿಂಡಿ ತಿನ್ನುವುದು, ಕಾರಣವಿಲ್ಲದೆ ನಗುವುದು, ದಾರಿ ತಪ್ಪಿ ಮತ್ತೆ ದಾರಿ ಹುಡುಕುವುದು, ಇಂತಹ ಕ್ಷಣಗಳೇ ಮುಂದೆ ನಮ್ಮ ಜೀವನದ ಸುಂದರ ನೆನಪುಗಳಾಗುತ್ತವೆ.
-ಅನುಶ್ರೀ ಎಚ್.ಆರ್.
ಮೂಡಿಗೆರೆ

