Dailyhunt Logo
  • Light mode
    Follow system
    Dark mode
    • Play Story
    • App Story
UV Fusion: ಕಥೆ ಕಥೆ ಕಾರಣ... : ಪರಿಶ್ರಮವೇ ಜೀವನದ ಪರಮಾರ್ಥ

UV Fusion: ಕಥೆ ಕಥೆ ಕಾರಣ... : ಪರಿಶ್ರಮವೇ ಜೀವನದ ಪರಮಾರ್ಥ

ಗ್ರಾಮಾಂತರ ಪ್ರದೇಶವೊಂದರಲ್ಲಿ ಜನಸಾಮಾನ್ಯರಿಗೆ ಆದರ್ಶ ಜೀವನದ ಬಗ್ಗೆ ಮಾರ್ಗದರ್ಶನ ನೀಡುತ್ತಿದ್ದ ಒಬ್ಬ ಅನುಭವಿ ಶಿಕ್ಷಕರಿದ್ದರು. ಮಾನವ ಜನ್ಮದ ಮಹತ್ವ, ಹುಟ್ಟಿನ ಸಾರ್ಥಕತೆ ಹಾಗೂ ಸನ್ಮಾರ್ಗದಲ್ಲಿ ಜೀವನ ಸಾಗಿಸುವುದು ಹೇಗೆ ಎಂಬುದನ್ನು ಅವರು ಜನರಿಗೆ ಮನಮುಟ್ಟುವಂತೆ ಬೋಧಿಸುತ್ತಿದ್ದರು.

ಅವರ ವ್ಯಕ್ತಿತ್ವ ಹಾಗೂ ಚಿಂತನೆಗಳಿಂದ ಪ್ರಭಾವಿತರಾದ ಸ್ಥಳೀಯ ಜಮೀನುದಾರರೊಬ್ಬರು, ತಮ್ಮ ಮಗನಿಗೆ ಉತ್ತಮ ನೈತಿಕ ಶಿಕ್ಷಣ ನೀಡಿ, ಅವನು ಬದುಕಿನಲ್ಲಿ ಸತ್ಪ್ರಜೆಯಾಗುವಂತೆ ಮಾರ್ಗದರ್ಶನ ಮಾಡಬೇಕೆಂದು ಕೋರಿ ಆ ಶಿಕ್ಷಕರ ಬಳಿಗೆ ಕಳುಹಿಸಿದರು. ಶಿಕ್ಷಕರೂ ಸಹ ಆ ಹುಡುಗನಿಗೆ ಶ್ರದ್ಧೆಯಿಂದ ವಿದ್ಯೆ-ಸಂಸ್ಕಾರಗಳನ್ನು ಧಾರೆ ಎರೆದರು.

ಹಿಂದೊಮ್ಮೆ ಆ ಜಮೀನುದಾರರು, ʼಯುಗಾದಿ ಹಬ್ಬದ ಊಟಕ್ಕೆ ನಮ್ಮ ಮನೆಗೆ ಬರಬೇಕುʼ ಎಂದು ಶಿಕ್ಷಕರನ್ನು ಪ್ರೀತಿಯಿಂದ ಆಹ್ವಾನಿಸಿದ್ದರು. ಆದರೆ ಕಾರಣಾಂತರಗಳಿಂದ ಅಂದು ಶಿಕ್ಷಕರಿಗೆ ಹೋಗಲು ಸಾಧ್ಯವಾಗಿರಲಿಲ್ಲ. ಕೆಲವು ವರ್ಷಗಳ ಬಳಿಕ ಜಮೀನುದಾರರು ವಿಧಿವಶರಾದರು. ʼಛೇ! ಜಮೀನುದಾರರು ಬದುಕಿದ್ದಾಗ ಅವರ ಮನೆಗೆ ಹೋಗಿ ಆತಿಥ್ಯ ಸ್ವೀಕರಿಸಲು ಆಗಲಿಲ್ಲವಲ್ಲʼ ಎಂಬ ಸಣ್ಣದೊಂದು ಬೇಸರ ಶಿಕ್ಷಕರ ಮನಸ್ಸಿನಲ್ಲಿ ಉಳಿದುಕೊಂಡಿತ್ತು.

ತಂದೆಯ ನಿಧನದ ಅನಂತರ ಪುತ್ರನೇ ಮನೆಯ ಜವಾಬ್ದಾರಿ ಹೊತ್ತುಕೊಳ್ಳಬೇಕಿತ್ತು. ಆದರೆ ಆತ ಯಾವುದೇ ಕಾಯಕವನ್ನೂ ಮಾಡದೆ ಸೋಮಾರಿಯಾಗಿ ಕಾಲ ಕಳೆಯುತ್ತಿದ್ದ. ಕುಟುಂಬದ ಯಾವುದೇ ಜವಾಬ್ದಾರಿಗಳನ್ನು ಹೊರದೆ, ತಂದೆ ಕೂಡಿಟ್ಟ ಆಸ್ತಿಯನ್ನು ದುಂದುವೆಚ್ಚ ಮಾಡುತ್ತಿದ್ದಾನೆ ಎಂಬ ಸುದ್ದಿ ಶಿಕ್ಷಕರಿಗೆ ತಲುಪಿತು. ಸಂಸ್ಕಾರವಂತ ಜಮೀನುದಾರರ ಮಗ, ತನ್ನ ಪ್ರೀತಿಯ ಶಿಷ್ಯ ಹೀಗೆ ದಾರಿತಪ್ಪಿದ್ದನ್ನು ಕಂಡು ಅವರಿಗೆ ತೀವ್ರ ವ್ಯಥೆಯಾಯಿತು.

ಅಷ್ಟರಲ್ಲೇ ಮತ್ತೂಂದು ಯುಗಾದಿ ಹಬ್ಬವೂ ಸಮೀಪಿಸಿತು. ಜಮೀನುದಾರನ ಮಗನಿಗೆ ಸರಿಯಾದ ಬುದ್ಧಿ ಕಲಿಸಬೇಕೆಂದು ನಿರ್ಧರಿಸಿದ ಶಿಕ್ಷಕರು, ಈ ಬಾರಿ ಅವನ ಮನೆಗೆ ಊಟಕ್ಕೆಂದು ತೆರಳಿದರು. ಕುಶಲೋಪರಿ ಮಾತುಕತೆಗಳ ನಂತರ ಎಲ್ಲರೂ ಊಟಕ್ಕೆ ಕುಳಿತರು. ಬಾಳೆಲೆಗೆ ರುಚಿಕರವಾದ ಭೋಜನ ಬಡಿಸಲಾಯಿತು. ಶಿಕ್ಷಕರು ಒಂದು ತುತ್ತು ಅನ್ನವನ್ನು ಬಾಯಿಗಿಟ್ಟುಕೊಂಡವರೇ, ತತ್‌ಕ್ಷಣ ಅದನ್ನು ಉಗುಳಿ, ʼಥೂ! ಈ ಅನ್ನ ಹಳಸಿದೆ; ಎಷ್ಟು ಹಳೆಯ ಅನ್ನ ಇದು!' ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನು ಕೇಳಿ ಆಶ್ಚರ್ಯಚಕಿತನಾದ ಜಮೀನುದಾರನ ಮಗ, ʼಇಲ್ಲ ಸರ್‌, ಈ ಅಡುಗೆಯನ್ನು ಈಗಷ್ಟೇ ಬಿಸಿಯಾಗಿ ತಯಾರಿಸಲಾಗಿದೆ. ಇದು ಹಳಸಿರಲು ಹೇಗೆ ಸಾಧ್ಯ?' ಎಂದನು.

ಆಗ ಶಿಕ್ಷಕರು ಶಾಂತವಾಗಿ, ʼಮಗೂ, ಈ ಆಹಾರ ನಿನ್ನ ತಂದೆಯವರ ಕಾಲದಷ್ಟು ಹಳೆಯದಾಗಿದೆ ಮತ್ತು ಹಳಸಿದೆ' ಎಂದರು. ಶಿಕ್ಷಕರ ಈ ಮಾರ್ಮಿಕ ನುಡಿಯ ಹಿಂದಿನ ಆಂತರ್ಯ ಯುವಕನಿಗೆ ತತ್‌ಕ್ಷಣವೇ ಅರ್ಥವಾಯಿತು. ತನ್ನ ಸ್ವಂತ ಪರಿಶ್ರಮವಿಲ್ಲದೆ, ತಂದೆ ದುಡಿದು ಇಟ್ಟುಹೋದ ಆಸ್ತಿಯಿಂದ ಸುಖಿಸುತ್ತಿರುವ ಈ ಜೀವನ ಮತ್ತು ಈ ಅನ್ನವೇ ʼಹಳಸಿದ ಅನ್ನ' ಎಂಬ ಕಟು ಸತ್ಯ ಅವನ ಮನಸ್ಸನ್ನು ತಟ್ಟಿತು.

ಗುರುವಿನ ಮಾತಿನ ಒಳಾರ್ಥವನ್ನು ಅರಿತು ಪಶ್ಚಾತ್ತಾಪಪಟ್ಟ ಆತ ತಲೆತಗ್ಗಿಸಿ, ʼಗುರುಗಳೇ, ನನ್ನ ತಪ್ಪಿನ ಅರಿವಾಯಿತು. ಮುಂದಿನ ವರ್ಷ ನಾನು ನನ್ನ ಸ್ವಂತ ಪರಿಶ್ರಮದಿಂದ ದುಡಿದು ಸಿದ್ಧಪಡಿಸಿದ ಊಟಕ್ಕೆ ನಿಮ್ಮನ್ನು ಗೌರವದಿಂದ ಆಹ್ವಾನಿಸುತ್ತೇನೆʼ ಎಂದು ವಿನಮ್ರವಾಗಿ ನುಡಿದನು. ಶಿಷ್ಯನಲ್ಲಿ ಮೂಡಿದ ಈ ಬದಲಾವಣೆಯನ್ನು ಕಂಡು ಶಿಕ್ಷಕರ ಮುಖದಲ್ಲಿ ತೃಪ್ತಿಯ ನಗೆ ಮೂಡಿತು.

ಹಿರಿಯರು ಗಳಿಸಿಟ್ಟ ಸಂಪತ್ತಿನ ನೆರಳಿನಲ್ಲಿ ಸೋಮಾರಿಗಳಾಗಿ, ಶ್ರಮದ ಬೆಲೆಯನ್ನೇ ಅರಿಯದೆ ಭೋಗಜೀವನ ನಡೆಸಿ ಬದುಕನ್ನು ವ್ಯರ್ಥ ಮಾಡಿಕೊಳ್ಳುವವರು ನಮ್ಮ ನಡುವೆ ಅನೇಕರಿದ್ದಾರೆ. ಆದರೆ, ಪರಿಶ್ರಮದ ಮೌಲ್ಯವನ್ನು ತಿಳಿದುಕೊಂಡು ಪ್ರಾಮಾಣಿಕ ದುಡಿಮೆಯಿಂದ ಜೀವಿಸುವವರು ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜತೆಗೆ, ಇಹ-ಪರಗಳೆರಡರಲ್ಲೂ ಬದುಕನ್ನು ಸಾರ್ಥಕಪಡಿಸಿಕೊಳ್ಳುತ್ತಾರೆ.

- ಸಂತೋಷ್‌

ಬೆಳ್ತಂಗಡಿ

Dailyhunt
Disclaimer: This content has not been generated, created or edited by Dailyhunt. Publisher: Udayavani