Dailyhunt
UV Fusion: ವಸ್ತುಗಳನ್ನು ಬಳಸಿ ಸಂಬಂಧಗಳನ್ನು ಉಳಿಸಿ!

UV Fusion: ವಸ್ತುಗಳನ್ನು ಬಳಸಿ ಸಂಬಂಧಗಳನ್ನು ಉಳಿಸಿ!

ತ್ತೀಚೆಗೆ ಕನ್ನಡ ಭಾಷಾ ತರಗತಿಯಲ್ಲಿ ಸಂಪತ್‌ ಸಿರಿಮನೆಯವರ "ರಿಪೇರಿ" ಎಂಬ ಪಾಠವನ್ನು ಮಾಡುತ್ತಿರುವಾಗ, ಹಳೆಯ ವಸ್ತುಗಳ ರಿಪೇರಿ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮ ಕನ್ನಡ ಮೇಷ್ಟ್ರು ಒಂದು ಮಾತು ಹೇಳಿದರು. "ಹಿಂದೆ ನಾವು ಸಂಬಂಧಗಳನ್ನು ಉಳಿಸಿ, ವಸ್ತುಗಳನ್ನು ಬಳಸುತ್ತಿದ್ದೆವು.

ಆದರೆ ಈಗ ವಸ್ತುಗಳನ್ನು ಉಳಿಸಿ, ಸಂಬಂಧಗಳನ್ನು ಬಳಸಿಕೊಳ್ಳುತ್ತಿದ್ದೇವೆ' ಎಂಬ ಆ ಮಾತು ನನ್ನ ಮನಸ್ಸನ್ನು ಬಿಟ್ಟು ಬಿಡದೆ ಕಾಡತೊಡಗಿತು. ಈ ಸಾಲುಗಳು ಸರಳವಾಗಿದ್ದರೂ ಬಹಳ ಅರ್ಥಪೂರ್ಣವಾಗಿವೆ. ಆಧುನಿಕತೆಯ ಸುಳಿಯಲ್ಲಿ ಸಿಲುಕಿ ಸಂಬಂಧಗಳು ತಮ್ಮ ಮಹತ್ವವನ್ನೇ ಕಳೆದುಕೊಳ್ಳುತ್ತಿವೆ ಎಂಬ ಕಹಿ ವಾಸ್ತವವನ್ನು ಇದು ಹೊರಹಾಕುವಂತಿತ್ತು.

ಹಿಂದೆ ವಸ್ತುಗಳನ್ನು ಬಳಸುತ್ತಿದ್ದ ಜನರು, ಈಗ ಸಂಬಂಧಗಳನ್ನು ತಮ್ಮ ಅನಿವಾರ್ಯತೆ, ಆವಶ್ಯಕತೆ, ಕೆಲಸ ಹಾಗೂ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಯಾವುದೇ ಸಂಬಂಧವನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ಈಗ ಹೆಚ್ಚಿನವರು ಮಾಡುತ್ತಿಲ್ಲ. ಸ್ನೇಹ, ಪ್ರೀತಿ, ದಾಂಪತ್ಯ ಹೀಗೆ ಯಾವುದೇ ಸಂಬಂಧವಿರಲಿ, ಎಲ್ಲವೂ ಕೇವಲ ಆವಶ್ಯಕತೆ ಮತ್ತು ಅನಿವಾರ್ಯತೆ ಎಂಬ ಸೇತುವೆಯ ಮೇಲೆ ನಿಂತಿವೆ. ನಿಜವಾದ ಪ್ರೀತಿ, ಸ್ನೇಹ, ಆತ್ಮೀಯತೆಯ ಭಾವನೆಗಳು ಈಗ ಜೀವಂತವಾಗಿಲ್ಲ; ಬದಲಿಗೆ ಎಲ್ಲವೂ ಯಾಂತ್ರಿಕವಾಗಿವೆ.

ಪ್ರಸ್ತುತ ದಿನಗಳಲ್ಲಿ ಜನರು ತಮ್ಮ ಬದುಕಿನ ಸಂಬಂಧಗಳಿಗಿಂತ ಹೆಚ್ಚಾಗಿ ಜೀವವೇ ಇಲ್ಲದ, ಮಾತಿಗೂ ಸ್ಪಂದಿಸದ ವಸ್ತುಗಳನ್ನು ಪ್ರೀತಿಸುತ್ತಿದ್ದಾರೆ. ಹಾಗಾಗಿ ಬದುಕಿನಲ್ಲಿ ಬೆಲೆಬಾಳುವ ವಸ್ತುಗಳಿಗಿ ರುವ ಪ್ರಾಮುಖ್ಯತೆ ಮತ್ತು ಮಹತ್ವ, ನಮ್ಮ ಸ್ವಂತ ಸಂಬಂಧಿಕರಿಗಿಲ್ಲದಿರುವುದೇ ದೊಡ್ಡ ವಿಪರ್ಯಾಸ.

ಹಿಂದಿನ ಕಾಲದಲ್ಲಿ ಅಪ್ಪ-ಅಮ್ಮ, ಅಣ್ಣ-ಅಕ್ಕಂದಿರು, ಚಿಕ್ಕಪ್ಪ-ಚಿಕ್ಕಮ್ಮಂದಿರು, ದೊಡ್ಡಪ್ಪ-ದೊಡ್ಡಮ್ಮಂದಿರು, ಅಜ್ಜ-ಅಜ್ಜಿ ಎಂದು ಮನೆತುಂಬಾ ಜನರಿರುತ್ತಿದ್ದರು. ಆದರೆ ಈಗ ಮನೆಯಲ್ಲಿ ಜನರಿಗಿಂತ ಹೆಚ್ಚಾಗಿ ವಸ್ತುಗಳೇ ತುಂಬಿಹೋಗಿವೆ. ವಾಷಿಂಗ್‌ ಮೆಷಿನ್‌, ಫ್ರಿಡ್ಜ್, ಟಿವಿ, ಸೋಫಾ ಮುಂತಾದ ವಸ್ತುಗಳೇ ತುಂಬಿರುವ ಮನೆಯಲ್ಲಿ ಜನರಿಗೆ ಹಾಗೂ ಸಂಬಂಧಗಳಿಗೆ ಜಾಗವಿಲ್ಲ ಎಂಬುದಕ್ಕಿಂತ, ಅವುಗಳಿಗೆ ಮಹತ್ವವೇ ಇಲ್ಲದಂತಾಗಿದೆ ಎಂಬುದು ಕಹಿ ವಾಸ್ತವ.

ನಮಗೆ ಬೇಕಾದಾಗ ನಮ್ಮ ಕೆಲಸಕ್ಕೆ, ಸ್ವಾರ್ಥಕ್ಕಾಗಿ ನಾವು ಜನರನ್ನು ಬಳಸಿಕೊಳ್ಳುತ್ತಿದ್ದೇವೆ. ಅದೇ ವಸ್ತುಗಳನ್ನು ಮಾತ್ರ ಜತನದಿಂದ ಉಳಿಸಿಕೊಳ್ಳುತ್ತಿದ್ದೇವೆ. ನಮ್ಮಿಷ್ಟದ ಮೊಬೈಲ್‌ ಫೋನ್‌ ಹತ್ತು ನಿಮಿಷ ಚಾರ್ಜ್‌ ಇಲ್ಲದೆ ಸ್ವಿಚ್‌ ಆಫ್‌ ಆದರೆ, ಪ್ರಪಂಚವೇ ನಮ್ಮ ತಲೆಮೇಲೆ ಬಿದ್ದಂತೆ ಭಾಸವಾಗುತ್ತದೆ. ಅದೇ ನಮ್ಮಿಷ್ಟದ ಬೈಕ್‌ ಅಥವಾ ಕಾರು ಸರ್ವಿಸ್‌ಗೆ ಬಂದು ನಿಂತರೆ, ಮನದೊಳಗೆ ಏನೋ ವಿವರಿಸಲಾಗದ ಸಂಕಟ. ಅಪ್ಪನ ಕಾಲದಿಂದ ಬಳಸುತ್ತಿದ್ದ ಗಡಿಯಾರವೋ, ಐರನ್‌ ಬಾಕ್ಸೋ ಕೆಟ್ಟು ಹೋದರೆ ಅದನ್ನು ಸರಿಪಡಿಸಲು ಊರಿನ ಎಲ್ಲ ರಿಪೇರಿ ಅಂಗಡಿಗಳನ್ನು ಸುತ್ತುವ ನಾವು, ಮುರಿದುಬಿದ್ದ ಸಂಬಂಧಗಳನ್ನು ಉಳಿಸಿಕೊಳ್ಳುವ ಅಥವಾ ರಿಪೇರಿ ಮಾಡುವ ಸಣ್ಣ ಪ್ರಯತ್ನವನ್ನೂ ಮಾಡದಿರುವುದು ದುರಂತವೇ ಸರಿ.

ಹೇಗೆ ನಾವು ವಸ್ತುಗಳಿಗೆ ಹೆಚ್ಚು ಮಹತ್ವ ಮತ್ತು ಪ್ರೀತಿಯನ್ನು ನೀಡುತ್ತಿದ್ದೇವೋ, ಹಾಗೆಯೇ ಸಂಬಂಧಗಳನ್ನು ಕೂಡ ಉಳಿಸಿಕೊಳ್ಳುವ, ಪ್ರೀತಿಸುವ ಹಾಗೂ ಕಾಳಜಿ ವಹಿಸುವ ಪ್ರಯತ್ನವನ್ನಾದರೂ ಮಾಡೋಣ. ವಸ್ತುಗಳನ್ನು ಪ್ರೀತಿಸುವುದರಲ್ಲಿ ಅಥವಾ ಕಾಳಜಿ ವಹಿಸುವುದರಲ್ಲಿ ತಪ್ಪೇನಿಲ್ಲ. ಆದರೆ ಸಂಬಂಧಗಳು ವಸ್ತುಗಳಿಗಿಂತ ಹೆಚ್ಚು ದುಬಾರಿ ಮತ್ತು ಮಹತ್ವವಾದದ್ದು.

ಸಂಬಂಧಗಳು ಹಾಳಾಗಿವೆ, ಸರಿ ಇಲ್ಲ, ಅಥವಾ ಹಳಸಿಹೋಗಿವೆ ಎನ್ನುವುದಕ್ಕೆ, ಅದೇನು ಹಿಂದಿನ ದಿನ ಮನೆಯಲ್ಲಿ ಮಾಡಿಟ್ಟ ಟೊಮೆಟೊ ಗೊಜ್ಜು ಅಥವಾ ಅಂಗಡಿಯಿಂದ ದುಡ್ಡು ಕೊಟ್ಟು ತರುವ ತಿಂಡಿಯಲ್ಲ! ಸಂಬಂಧ ಎಂಬುದು ಕೇವಲ ಪದಗಳಲ್ಲಿ ವಿವರಿಸಲಾಗದ, ಬದುಕಿನ ಬಹುದೊಡ್ಡ ಭಾಗ. ನಮ್ಮ ಬದುಕನ್ನು ಅರ್ಥಪೂರ್ಣಗೊಳಿಸುವುದೇ ಈ ಸಂಬಂಧಗಳು. ಅಪ್ಪ-ಅಮ್ಮ, ಗಂಡ-ಹೆಂಡತಿ, ಅಣ್ಣ-ತಮ್ಮ, ಅಕ್ಕ-ತಂಗಿ, ಸ್ನೇಹಿತರು, ಗುರುಗಳು, ಪರಿಚಯಸ್ಥರು ಹೀಗೆ ನಮ್ಮ ಬದುಕಿನ ಎಲ್ಲ ಸಂಬಂಧಗಳು ಜೀವನವನ್ನು ಸುಂದರವಾಗಿಸುತ್ತವೆ.

ಇತ್ತೀಚಿನ ದಿನಗಳಲ್ಲಿ ತುಂಬಾ ಆತ್ಮೀಯರಾದ ಸ್ನೇಹಿತರೂ ಅಪರಿಚಿತರಾಗು ವುದು ಸರ್ವೇಸಾಮಾನ್ಯವಾಗಿದೆ. ಒಮ್ಮೆ ಕುಳಿತು ಯೋಚಿಸಿದರೆ, ನಮ್ಮ ಶಾಲಾ- ಕಾಲೇಜು ದಿನಗಳಲ್ಲಿ ಸದಾ ಜತೆಗಿದ್ದು ಗಂಟೆಗಟ್ಟಲೆ ಹರಟುತ್ತಿದ್ದ ಸ್ನೇಹಿತರು, ಆ ದಿನಗಳು ಮುಗಿದು ವರ್ಷಗಳು ಉರುಳಿದಂತೆ ಬದಲಾಗಿದ್ದಾರೆ. ಕಾರಣಗಳು ತಿಳಿದಿದ್ದರೂ ನಾವೆಲ್ಲಾ ಮೌನಿಗಳಾಗಿ ದ್ದೇವೆ. ಹೊಸ ಸ್ನೇಹಿತರು, ಹೊಸ ಪರಿಚಯ ಹೀಗೆ ಹೊಸತರ ಗೋಜಿನಲ್ಲಿ ನಾವು ನಮ್ಮವರನ್ನೇ ಮರೆತುಬಿಟ್ಟಿದ್ದೇವೆ. ಈಗ ಎಲ್ಲವೂ, ಎಲ್ಲರೂ ಬದಲಾಗಿದ್ದಾರೆ. ಈ ಬದಲಾವಣೆಗೆ ನಾವು ಕೊಡುವ ಕಾರಣವಂತೂ ತಮಾಷೆಯೆನಿಸುತ್ತದೆ.

ನಮ್ಮ ಸಂಬಂಧಿಕರು ಅಥವಾ ಆತ್ಮೀಯರು ಅಪರೂಪಕ್ಕೊಮ್ಮೆ ಬಸ್‌ಸ್‌ಟ್ಯಾಂಡ್‌ನ‌ಲ್ಲಿ ಸಿಕ್ಕರೂ, ಐದು ನಿಮಿಷ ನಿಂತು ಮಾತನಾಡುವ ತಾಳ್ಮೆ, ಸಮಯ ನಮಗಿಲ್ಲ. ಕೇವಲ ಒಂದು "ಹಾಯ್‌, ಹೇಗಿದ್ದೀರಾ?' ಅನ್ನುವುದನ್ನು ಬಿಟ್ಟರೆ ಅಲ್ಲಿ ಬೇರೆ ಮಾತಿಗೆ ಅವಕಾಶವೂ ಇರುವುದಿಲ್ಲ, ಕಾರಣವೂ ಇರುವುದಿಲ್ಲ. ಸದಾ ಒತ್ತಡ, ಚಿಂತೆ, ಕೆಲಸ, ನಾಳೆಗಳ ಬಗೆಗಿನ ಆಲೋಚನೆಗಳಲ್ಲಿ ನಾವು ನಮ್ಮವರನ್ನೇ ಕಳೆದುಕೊಳ್ಳುತ್ತಿದ್ದೇವೆ ಎಂದರೆ ಅದುವೇ ಸತ್ಯ.

ಜಗತ್ತು ಆಧುನಿಕತೆಯ ಕಡೆಗೆ ಮುಖ ಮಾಡುತ್ತಿರುವ ಈ ಕಾಲದಲ್ಲಿ, ವಸ್ತುಗಳು ಹಾಳಾಗಿ ಹೋದರೆ ಹೊಸತನ್ನು ಅದಕ್ಕಿಂತ ದುಬಾರಿ ಬೆಲೆ ಕೊಟ್ಟು ಅಂಗಡಿಯಿಂದ ಖರೀದಿಸಬಹುದು ಅಥವಾ ರಿಪೇರಿಯನ್ನಾದರೂ ಮಾಡಿಸಬಹುದು. ಆದರೆ ಸಂಬಂಧಗಳು ಹಾಳಾದರೆ ಅದನ್ನು ಸರಿಪಡಿಸುವುದು ಅಥವಾ ರಿಪೇರಿ ಮಾಡುವುದು ಅಷ್ಟು ಸುಲಭವಲ್ಲ. ಆದ್ದರಿಂದ ಬದಲಾಗುತ್ತಿರುವ ಜಗತ್ತಿನಲ್ಲಿ ಆತ್ಮೀಯರನ್ನು ಅಪರಿಚಿತರಂತೆ ಕಾಣದಿರೋಣ. ಇದ್ದಾಗ ಇರುವವರ ಬೆಲೆ ಅರಿತು ಬದುಕೋಣ. ಸಾವು ಯಾವಾಗ, ಹೇಗೆ, ಎಲ್ಲಿ ನಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂದು ಯಾರೂ ಅರಿತಿಲ್ಲ. ಆದ್ದರಿಂದ ಇದ್ದಾಗ ನಮ್ಮವರನ್ನು ಚೆನ್ನಾಗಿ ನೋಡಿಕೊಳ್ಳುವ ಪ್ರಯತ್ನವನ್ನು ಮಾಡೋಣ. ಸಂಬಂಧಗಳನ್ನು ಪರಸ್ಪರ ಗೌರವಿಸಿ, ಪ್ರೀತಿಸುವುದನ್ನು ಮರೆಯದಿರೋಣ.

-ಕವನ ಚಾರ್ಮಾಡಿ

ಎಸ್‌ಡಿಎಂ ಕಾಲೇಜು, ಉಜಿರೆ

Dailyhunt
Disclaimer: This content has not been generated, created or edited by Dailyhunt. Publisher: Udayavani