ಬಿಸಿಲ ಝಳಕ್ಕೆ ಬೆಂದು ಒಣಗಿದ್ದ ಇಳೆಗೆ ಮುಂಗಾರಿನ ಮಳೆಹನಿಗಳು ತಂಪನ್ನೆರೆದು, ಪ್ರಕೃತಿಯನ್ನು ಹಸುರು ಸೀರೆಯನ್ನುಡಿಸಿದಾಗ ನಿಸರ್ಗದಲ್ಲೊಂದು ಹೊಸ ಮನ್ವಂತರ ಜರುಗುತ್ತದೆ. ಅದೇ ಕಾಲಕ್ಕೆ ದೇವಸ್ಥಾನಗಳ ಗಂಟಾನಾದದಂತೆ, ಕೋಗಿಲೆಯ ಇಂಪಾದ ದನಿಯಂತೆ ನಾಡಿನ ಮನೆಮನಗಳಿಗೆ ಹರ್ಷ ತರಲು ಬರುವುದೇ ಶ್ರಾವಣ.
ಸಾಹಿತ್ಯದಲ್ಲಿ 'ಶ್ರಾವಣ ಬಂತು ನಾಡಿಗೆ, ಹರ್ಷ ತಂದಿತು ಕಾವ್ಯಕ್ಕೆ' ಎನ್ನುವ ಸಾಲುಗಳಿವೆಯಲ್ಲವೇ? ಆ ಸಾಲುಗಳು ಬರೀ ಕಾವ್ಯೋಕ್ತಿಗಳಲ್ಲ, ಈ ಧರೆಗೆ ಲಭಿಸಿದ ದಿವ್ಯ ವರ. ವರ್ಷದ ಮಿಕ್ಕ ಮಾಸಗಳಿಗಿಂತ ಶ್ರಾವಣಕ್ಕೆ ತನ್ನದೇ ಆದ ಸೌಂದರ್ಯವಿದೆ, ಆಧ್ಯಾತ್ಮಿಕ ತೂಕವಿದೆ. ಶ್ರಾವಣವೆಂದರೆ ಕೇವಲ ಕಾಲಸೂಚಕ ಒಂದು ತಿಂಗಳಲ್ಲ, ಅದು ಭಕ್ತಿ, ಸಂಸ್ಕೃತಿ ಮತ್ತು ನಿಸರ್ಗದ ನಡುವೆ ನಡೆಯುವ ಪವಿತ್ರವಾದ ಅನುಸಂಧಾನ.
ಪ್ರಕೃತಿಯೇ ಕಣ್ಣು ತೆರೆದು ನಿಂತಂತೆ ಕಾಣುವ ಈ ಮಾಸದಲ್ಲಿ ಗಿಡ-ಮರಗಳು ಹೊಚ್ಚ ಹೊಸ ಎಲೆಗಳನ್ನು ಚಿಗುರಿಸಿ, ಹೂವುಗಳನ್ನು ಅರಳಿಸಿ ಪ್ರಕೃತಿ ಪೂಜೆಗೆ ಅಣಿಯಾಗುತ್ತವೆ. ಶ್ರಾವಣದ ಪ್ರತಿ ಉದಯವೂ ಹೊಸ ನಿರೀಕ್ಷೆಯ, ಭರವಸೆಯ ಬೆಳಕನ್ನು ತರುತ್ತದೆ. ಪ್ರಕೃತಿಯಲ್ಲಿ ಜರುಗುವ ಈ ಕಾಯಕಲ್ಪವು ಮಾನವನ ಅಂತರಂಗಕ್ಕೂ ತಲುಪಬೇಕು ಎಂಬುದೇ ಶ್ರಾವಣ ನಮಗೆ ಕಲಿಸುವ ಜೀವನ್ಮುಖೀ ಪಾಠ. ಕತ್ತಲೆಯನ್ನು ಸೀಳಿ ಬರುವ ಸೂರ್ಯನ ಕಿರಣಗಳಂತೆ, ಆಧುನಿಕ ಜೀವನದ ಜಂಜಾಟಗಳಲ್ಲಿ ಕಳೆದುಹೋಗಿರುವ ಯುವಮನಸ್ಸುಗಳಿಗೆ ಆಧ್ಯಾತ್ಮಿಕ ಮತ್ತು ನೈಸರ್ಗಿಕ ಸ್ಪರ್ಶದ ಅಗತ್ಯ ಇಂದು ಎಂದಿಗಿಂತಲೂ ಹೆಚ್ಚಾಗಿದೆ.
ಇಂದಿನ ಯುವ ಪೀಳಿಗೆಗೆ ಶ್ರಾವಣ ಎಂದರೆ ಬರೀ ಬಾಹ್ಯ ಆಚರಣೆಗಳು, ಉಪವಾಸ ಅಥವಾ ಸಾಂಪ್ರದಾಯಿಕ ಶಿಸ್ತಷ್ಟೇ ಆಗಿರಬಾರದು. ಅದೊಂದು ಅಂತರಂಗದ ಶೋಧನೆ ಮತ್ತು ಮಾನಸಿಕ ಶುದ್ಧೀಕರಣದ ಪರ್ವಕಾಲ. ನಮ್ಮ ಧಾರ್ಮಿಕ ಹಿನ್ನೆಲೆಯಲ್ಲಿ ಶ್ರಾವಣ ಮಾಸವು ಶಿವ ಹಾಗೂ ವಿಷ್ಣುವಿನ ಆರಾಧನೆಗೆ ಅತ್ಯಂತ ಶ್ರೇಷ್ಠವಾದುದು.
ನಾಗರಪಂಚಮಿ, ವರಮಹಾಲಕ್ಷ್ಮೀ, ಉಪಾಕರ್ಮ, ಕೃಷ್ಣಜನ್ಮಾಷ್ಟಮಿ ಹಾಗೂ ಶ್ರಾವಣ ಸೋಮವಾರಗಳ ಸಾಲು ಸಾಲು ಹಬ್ಬಗಳು ಈ ಮಾಸಕ್ಕೆ ಕಳೆಗಟ್ಟುತ್ತವೆ. ಪ್ರತಿಯೊಂದು ಹಬ್ಬದ ಹಿಂದೆ ಒಂದೊಂದು ನೈತಿಕ, ಸಾಮಾಜಿಕ ಮತ್ತು ಪರಿಸರಪ್ರೇಮಿ ಸಂದೇಶವಿದೆ. ನಾಗರಪಂಚಮಿಯು ಪ್ರಕೃತಿ ಹಾಗೂ ಜಲಚರ-ಸರೀಸೃಪಗಳನ್ನು ಗೌರವಿಸುವುದನ್ನು ಕಲಿಸಿದರೆ, ವರಮಹಾಲಕ್ಷ್ಮೀಯು ಕುಟುಂಬದ ಐಕ್ಯತೆ ಮತ್ತು ಸಮೃದ್ಧಿಯ ಸಂಕೇತವಾಗಿದೆ.
ಆದರೆ ಕೇವಲ ವಿಧಿವಿಧಾನಗಳಿಗೆ ಸೀಮಿತವಾಗದೆ, ಯುವಜನತೆ ಈ ಹಬ್ಬಗಳ ತಣ್ತೀಜ್ಞಾನವನ್ನು ಗ್ರಹಿಸಬೇಕಿದೆ. ಇಂದಿನ ಡಿಜಿಟಲ್ ಯುಗದಲ್ಲಿ ಸ್ಕ್ರೀನ್‌ಗಳ ಮುಂದೆ ದಿನವಿಡೀ ಕಳೆಯುವ ಯುವಜನತೆಗೆ ಶ್ರಾವಣವು 'ಡಿಜಿಟಲ್ ಡಿಟಾಕ್ಸ್ʼ ಮಾಡಿಕೊಳ್ಳಲು ಅತ್ಯುತ್ತಮ ಅವಕಾಶ.
ನಾಗರಹಾವು ವಿಷವನ್ನು ಹೊರಹಾಕಿ ಹಾಲನ್ನು ಸ್ವೀಕರಿಸುವ ಸಂಕೇತದಂತೆ, ನಾವು ಕೂಡ ಸಾಮಾಜಿಕ ಮಾಧ್ಯಮಗಳಲ್ಲಿರುವ ನಕಾರಾತ್ಮಕತೆಯನ್ನು ಬದಿಗೊತ್ತಿ, ಸಾತ್ವಿಕ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು. ಉಪವಾಸ ಎಂದರೆ ಕೇವಲ ಹೊಟ್ಟೆಗೆ ಅನ್ನ ನೀಡದಿರುವುದಲ್ಲ; ಮನಸ್ಸಿನಲ್ಲಿರುವ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಎಂಬ ಅರಿಷಡ್ವರ್ಗಗಳನ್ನು ಹಸಿವಿನಿಂದಿಟ್ಟು, ಸದ್ವಿಚಾರಗಳನ್ನು ಪೋಷಿಸುವುದು.
ಮಾನಸಿಕ ಆರೋಗ್ಯ ಮತ್ತು ಯುವಶಕ್ತಿಯ ಆಂತರಂಗಿಕ ಬಲ
ಪ್ರಸ್ತುತ ವರ್ತಮಾನದಲ್ಲಿ ಅಧ್ಯಾತ್ಮ ಎನ್ನುವುದು ಬರೀ ವಯಸ್ಸಾದವರಿಗೆ ಸೀಮಿತವಾದದ್ದಲ್ಲ. ಯುವಜನರು ಧರ್ಮ ಮತ್ತು ಆಧ್ಯಾತ್ಮಿಕತೆಯನ್ನು ತಮ್ಮ ಮಾನಸಿಕ ಆರೋಗ್ಯದ ಮತ್ತು ಜೀವನದ ಸಮತೋಲನದ ದೃಷ್ಟಿಯಿಂದ ನೋಡಬೇಕಾಗಿದೆ. ಮನಸ್ಸಿನ ಏಕಾಗ್ರತೆ, ಪ್ರಶಾಂತತೆ ಮತ್ತು ಧನಾತ್ಮಕ ಆಲೋಚನೆಗಳಿಗೆ ಶ್ರಾವಣ ಮಾಸದ ಪವಿತ್ರ ವಾತಾವರಣ ಅತ್ಯಂತ ಪೂರಕವಾಗಿದೆ.
ಮುಂಜಾನೆಯ ತಂಪಾದ ಗಾಳಿಯಲ್ಲಿ ಧ್ಯಾನಿಸುವುದು, ಶ್ರಾವಣ ಸೋಮವಾರದಂದು 'ಓಂ ನಮಃ ಶಿವಾಯ' ಎಂಬ ಮಂತ್ರದ ಕಂಪನಗಳನ್ನು ಅನುಭವಿಸುವುದು ಮನಸ್ಸಿನ ಉದ್ವೇಗ, ಒತ್ತಡ ಮತ್ತು ಆತಂಕಗಳನ್ನು ದೂರ ಮಾಡುತ್ತದೆ. ಪ್ರಕೃತಿಯಲ್ಲಿ ಹಸುರು ಚಿಗುರುವಂತೆ, ಯುವಕರ ಯೋಚನೆಗಳಲ್ಲಿಯೂ ಹೊಸತನ, ಭರವಸೆ ಮತ್ತು ಧೈರ್ಯ ಚಿಗುರೊಡೆಯಬೇಕು.
ನಮ್ಮ ಹಿರಿಯರು ಶ್ರಾವಣದಲ್ಲಿ ಸಸ್ಯಾಹಾರ ಹಾಗೂ ಸಾತ್ವಿಕ ನಿಯಮಗಳನ್ನು ಕಡ್ಡಾಯಗೊಳಿಸಿ, ದೇಹದ ಆರೋಗ್ಯವನ್ನು ಕಾಯ್ದುಕೊಳ್ಳುವ ಅತ್ಯುತ್ತಮ ಜೀವನಶೈಲಿಯನ್ನು ನಮಗೆ ಬಳುವಳಿಯಾಗಿ ನೀಡಿದ್ದಾರೆ. ಮಳೆಗಾಲದಲ್ಲಿ ಜೀರ್ಣಶಕ್ತಿ ಮಂದವಾಗುವುದರಿಂದ ಹಗುರವಾದ ಆಹಾರ ಸೇವಿಸುವುದು ವಿಜ್ಞಾನಸಮ್ಮತವೂ ಹೌದು.
ಯುವಜನತೆ ಈ ಶಿಸ್ತನ್ನು ಕೇವಲ ಮೂಢನಂಬಿಕೆಯೆಂದು ಭಾವಿಸದೆ, ಅದರ ಹಿಂದಿನ ಸನಾತನ ವಿಜ್ಞಾನವನ್ನು ಅರ್ಥೈಸಿಕೊಳ್ಳಬೇಕು. ತಂತ್ರಜ್ಞಾನ ಎಷ್ಟೇ ಬೆಳೆದರೂ, ನಿಸರ್ಗದ ನಿಯಮಗಳಿಗೆ ಬದ್ಧವಾಗಿ ಬದುಕುವುದು ನಮಗೆ ಆಯುಷ್ಯ ಮತ್ತು ಆರೋಗ್ಯವನ್ನು ನೀಡುತ್ತದೆ.
ನವಭಾರತದ ನಿರ್ಮಾಣಕ್ಕೆ ಶ್ರಾವಣದ ಪ್ರೇರಣೆ
ಶ್ರಾವಣ ಮಾಸವು ಭಕ್ತಿಯ ಜತೆಗೆ ಕಾಯಕದ ಮಹತ್ವವನ್ನೂ ಸಾರುತ್ತದೆ. ಮಳೆಯಿಂದಾಗಿ ಭೂಮಿ ಹಸನಾಗಿ, ರೈತ ತನ್ನ ಹೊಲಗಳಲ್ಲಿ ಪೈರುಗಳನ್ನು ಪ್ರೀತಿಯಿಂದ ಪೋಷಿಸುವಂತೆ, ಯುವಜನರು ತಮ್ಮ ಭವಿಷ್ಯದ ಕನಸುಗಳಿಗೆ ಶ್ರಮ ಮತ್ತು ಶ್ರದ್ಧೆಯೆಂಬ ನೀರೆರೆದು ಪೋಷಿಸಬೇಕು. ಶಿವನಂತಹ ಸ್ಥಿರತೆ, ಶ್ರೀಕೃಷ್ಣನ ತಂತ್ರ ಮತ್ತು ಕರ್ಮಯೋಗದ ದಾರಿ ಇವೆಲ್ಲವೂ ಶ್ರಾವಣ ಮಾಸದ ಆರಾಧನೆಯಿಂದ ಯುವಜನತೆಗೆ ದೊರೆಯುವ ನೈಜ ಪ್ರೇರಣೆಗಳು.
-ಲಕ್ಷ್ಮೀಕಾಂತ್ ಎಲ್.ವಿ.
ತುಮಕೂರು

