ವಾರಾಣಸಿ: ಕಾಂಗ್ರೆಸ್ ನಾಯಕ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ಶುಕ್ರವಾರ 56ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ವಾರಾಣಸಿ ಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ನಾಯಕನನ್ನು ಪರಶುರಾಮ ನಂತೆ ಚಿತ್ರಿಸಿ ಗಂಗಾ ನದಿಯಲ್ಲಿ ಭಾವಚಿತ್ರಕ್ಕೆ ಹಾಲು ಸುರಿದು ವಿಶೇಷ ಆರಾಧನೆ ಮಾಡಿದ್ದಾರೆ.
ಕಾಶಿಯ ಯುವ ಕಾಂಗ್ರೆಸ್ ಕಾರ್ಯಕರ್ತರು ಗಂಗಾ ನದಿಯ ದಡದಲ್ಲಿ ವಿವಾದಾತ್ಮಕ ಆಚರಣೆ ಮಾಡಿದ್ದಾರೆ. ವಿಷ್ಣುವಿನ ಅವತಾರವಾದ ಭಗವಾನ್ ಪರಶುರಾಮನ ರೂಪದ ರಾಹುಲ್ ಗಾಂಧಿ ಚಿತ್ರಕ್ಕೆ ಒಂದು ಕೈಯಲ್ಲಿ ಪರಶು (ಕೊಡಲಿ) ಮತ್ತು ಇನ್ನೊಂದು ಕೈಯಲ್ಲಿ ಭಾರತದ ಸಂವಿಧಾನವನ್ನು ಹಿಡಿದಿರುವ ದೊಡ್ಡ ಭಾವಚಿತ್ರವನ್ನು ಅವರು ಅನಾವರಣಗೊಳಿಸಿದ್ದಾರೆ.
ಭಾವಚಿತ್ರವನ್ನು ದೋಣಿಯಲ್ಲಿ ನದಿಯ ಮಧ್ಯಕ್ಕೆ ಕೊಂಡೊಯ್ದ ಕಾರ್ಯಕರ್ತರು ವೇದ ಮಂತ್ರಗಳು ಮತ್ತು ಪ್ರಾರ್ಥನೆಗಳ ನಡುವೆ, ಕಾರ್ಮಿಕರು ಅಭಿಭಿಷೇಕ ಮಾಡಿ, ಹಾಲು ಸುರಿದು, ಭಾವಚಿತ್ರದ ಮೇಲೆ ಪುಷ್ಪಾರ್ಚನೆ ಗೈದರು. ಹುಟ್ಟುಹಬ್ಬವನ್ನು ಆಚರಿಸಲು 11 ಕೆಜಿ ಲಡ್ಡು ಕೇಕ್ ಸಹ ತಯಾರಿಸಿ ಕತ್ತರಿಸಲಾಯಿತು.
ಅನ್ಯಾಯ, ಭ್ರಷ್ಟ, ಪ್ರಜಾಪ್ರಭುತ್ವ ವಿರೋಧಿ ಮತ್ತು ಸಂವಿಧಾನ ವಿರೋಧಿ ಶಕ್ತಿಗಳ ವಿರುದ್ಧ ರಾಹುಲ್ ಗಾಂಧಿ ಹೋರಾಡುತ್ತಿರುವುದರಿಂದ ಅವರನ್ನು ಪರಶುರಾಮ ಎಂದು ಬಿಂಬಿಸಲು ನಿರ್ಧರಿಸಿದ್ದೇವೆ ಎಂದು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಕಾಸ್ ಸಿಂಗ್ ಹೇಳಿದ್ದಾರೆ.
ಉತ್ತರ ಪ್ರದೇಶ ಮತ್ತು ಬಿಹಾರದ ಬಿಜೆಪಿ ನಾಯಕರಿಂದ ತೀವ್ರ ಟೀಕೆ ವ್ಯಕ್ತವಾಗಿದ್ದು, ಕೇಂದ್ರ ಸಚಿವ ಗಿರಿರಾಜ್ ಸಿಂಗ್ ರಾಹುಲ್ ಗಾಂಧಿಯವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು. ಆದರೆ, ನಂಬಿಕೆಗಳು ಮತ್ತು ಕೆಲಸಗಳು ಇನ್ನೂ ದೇಶಕ್ಕೆ ತಿಳಿದಿಲ್ಲದ ನಾಯಕನೊಂದಿಗೆ ಪರಶುರಾಮನನ್ನು ಹೋಲಿಸುವ ಮೂಲಕ ಅವಮಾನಿಸುವುದು ಸರಿಯಲ್ಲ ಎಂದಿದ್ದಾರೆ.
ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ''ಕಾಂಗ್ರೆಸ್ ನಾಯಕತ್ವ ಎಲ್ಲ ಪ್ರಜ್ಞೆಯನ್ನು ಕಳೆದುಕೊಂಡಿದೆ ಎಂದು ತೋರುತ್ತದೆ'' ಎಂದು ಕಟುವಾಗಿ ಟೀಕಿಸಿದ್ದಾರೆ.
ಯುವ ಕಾಂಗ್ರೆಸ್ ಕಾರ್ಯಕರ್ತರ ನಡೆಯನ್ನು ಸಮರ್ಥಿಸಿಕೊಂಡ ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ್ ರಾಯ್, ಕಾರ್ಯಕರ್ತರು ತಮ್ಮ ನಾಯಕನನ್ನು ಗೌರವಿಸಿದ್ದಾರೆ. ಎಲ್ಲ ಕಾರ್ಯಕರ್ತರು ಗಾಂಧಿ ಕುಟುಂಬದೊಂದಿಗೆ ನಿಲ್ಲಲಿದ್ದಾರೆ ಎಂದು ಹೇಳಿದ್ದಾರೆ.

