ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ ಹಾಗೂ ಸಾರ್ವಜನಿಕ ಜೀವನದಲ್ಲಿ 25 ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಬಿಜೆಪಿ ದೇಶಾದ್ಯಂತ ಒಂದು ತಿಂಗಳ ಅವಧಿಯ 'ಸೇವಾ ಸಂಕಲ್ಪ ಅಭಿಯಾನ' ಆಯೋಜಿಸಲು ಸಿದ್ಧತೆ ನಡೆಸಿದೆ. ಸೆ.17ರಿಂದ ಅ.17ರವರೆಗೆ ನಡೆಯಲಿರುವ ಈ ಅಭಿಯಾನದ ಪ್ರಮುಖ ಆಕರ್ಷಣೆಯಾಗಿರುವ 'ಜನ್ಮಭೂಮಿಯಿಂದ ಕರ್ಮಭೂಮಿಗೆ ಯಾತ್ರೆ' ವಡ್ನಗರ್ ದಿಂದ ಕಾಶಿ (ವಾರಾಣಸಿ)ವರೆಗೆ ಸಾಗಲಿದೆ.
ಪ್ರಧಾನಿ ಮೋದಿ ಅವರ ಜನ್ಮದಿನವಾದ ಸೆ.17ರಂದು 'ಸೇವಾ ಸಂಕಲ್ಪ ಅಭಿಯಾನ'ಕ್ಕೆ ಚಾಲನೆ ನೀಡಲು ಬಿಜೆಪಿ ನಿರ್ಧರಿಸಿದೆ. ದೇಶಾದ್ಯಂತ ಜನಸಂಪರ್ಕ ಕಾರ್ಯಕ್ರಮಗಳು, ರ‍್ಯಾಲಿಗಳು, ಆರೋಗ್ಯ ಹಾಗೂ ಸ್ವಚ್ಛತಾ ಕಾರ್ಯಕ್ರಮಗಳು, ವಿವಿಧ ಯೋಜನೆಗಳ ಫಲಾನುಭವಿಗಳ ಶಿಬಿರಗಳು ಸೇರಿದಂತೆ ಹಲವು ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ವಡನಗರದಿಂದ ವಾರಾಣಸಿಗೆ ಯಾತ್ರೆ ಏಕೆ?
ಮೋದಿ ಅವರ ಜನ್ಮಸ್ಥಳ ಗುಜರಾತ್‌ನ ವಡ್ನಗರ್ ದಿಂದ ಅವರು ಲೋಕಸಭಾ ಕ್ಷೇತ್ರವಾಗಿ ಪ್ರತಿನಿಧಿಸುತ್ತಿರುವ ವಾರಾಣಸಿವರೆಗೆ ಬಿಜೆಪಿ 'ಸೇವಾ ಜ್ಯೋತಿ ಯಾತ್ರೆ' ಆಯೋಜಿಸಲಿದೆ. ಮೋದಿ ಅವರ ಹುಟ್ಟೂರು ಹಾಗೂ ಆರಂಭಿಕ ತಳಮಟ್ಟದ ರಾಜಕೀಯ ಚಟುವಟಿಕೆಗಳಿಂದ ಹಿಡಿದು ರಾಷ್ಟ್ರೀಯ ರಾಜಕೀಯದ ಮುಂಚೂಣಿ ನಾಯಕನಾಗಿ ಬೆಳೆದ ಪಯಣವನ್ನು ಈ ಯಾತ್ರೆ ಬಿಂಬಿಸಲಿದೆ ಎಂದು ಐಎಎನ್‌ಎಸ್ ವರದಿ ಮಾಡಿದೆ.
ಎಎನ್‌ಐ ವರದಿ ಪ್ರಕಾರ, ವಡನಗರದಿಂದ ಆರಂಭವಾಗಿ ವಾರಾಣಸಿಯಲ್ಲಿ ಅಂತ್ಯಗೊಳ್ಳುವ ಯಾತ್ರೆ ಮೋದಿ ಅವರ ರಾಜಕೀಯ ಪಯಣವನ್ನು ಪ್ರತಿನಿಧಿಸಲಿದೆ. ಯಾತ್ರೆಯಲ್ಲಿ ಬಿಜೆಪಿಯ ಹಲವು ಹಿರಿಯ ನಾಯಕರು ಭಾಗವಹಿಸುವ ನಿರೀಕ್ಷೆಯಿದೆ.
ರಾಷ್ಟ್ರವ್ಯಾಪಿ ಸೇವಾ ಅಭಿಯಾನ
ಪ್ರಧಾನಿ ಮೋದಿ ಅವರು ಸಾಂವಿಧಾನಿಕ ಸಾರ್ವಜನಿಕ ಹುದ್ದೆಯಲ್ಲಿ 25 ವರ್ಷ ಪೂರ್ಣಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಸೆ.17ರಿಂದ ಅ.2ರವರೆಗೆ 15 ದಿನಗಳ 'ಸೇವಾ ಪಖ್ವಾಡಾ' ಕಾರ್ಯಕ್ರಮ ನಡೆಸಲು ಸಿದ್ಧತೆ ನಡೆಸಿದೆ.
'ಸೇವಾ ಸಂಕಲ್ಪ ಮಹೋತ್ಸವ'ದಡಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಸಾರ್ವಜನಿಕ ಸೇವೆ ಹಾಗೂ ಕಲ್ಯಾಣ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗುತ್ತದೆ. ಸ್ವಚ್ಛತಾ ಅಭಿಯಾನ, ರಕ್ತದಾನ ಶಿಬಿರ, ಗಿಡ ನೆಡುವ ಕಾರ್ಯಕ್ರಮ, ಆರೋಗ್ಯ ಶಿಬಿರ ಸೇರಿದಂತೆ ವಿವಿಧ ಸೇವಾ ಕಾರ್ಯಗಳನ್ನು ದೇಶಾದ್ಯಂತ ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ಎಎನ್‌ಐ ವರದಿ ಮಾಡಿದೆ.
ಈ ಅಭಿಯಾನವು 2026 ಅ.7, ರಂದು ಮೋದಿ ಅವರು ಸಾರ್ವಜನಿಕ ಹುದ್ದೆಯಲ್ಲಿ 25 ವರ್ಷ ಪೂರ್ಣಗೊಳಿಸುವ ಸಂದರ್ಭದೊಂದಿಗೆ ಕೂಡ ಹೊಂದಿಕೆಯಾಗಲಿದೆ. 2001ರ ಅ.7ರಂದು ಮೋದಿ ಅವರು ಗುಜರಾತ್‌ನ 14ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಅಲ್ಲಿಂದ ಅವರ ಸಾಂವಿಧಾನಿಕ ಸಾರ್ವಜನಿಕ ಜೀವನ ಆರಂಭವಾಗಿತ್ತು.
ರಾಜ್ಯ ಮಟ್ಟದಲ್ಲೂ ಏಳು ಸದಸ್ಯರ ತಂಡ
ಅಭಿಯಾನದ ರಾಷ್ಟ್ರೀಯ ಸಂಚಾಲಕರಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಅವರಿಗೆ ಜವಾಬ್ದಾರಿ ನೀಡಲಾಗಿದೆ. ರಾಜ್ಯ ಮಟ್ಟದಲ್ಲಿ ಕಾರ್ಯಕ್ರಮಗಳ ಸಮನ್ವಯಕ್ಕಾಗಿ ಏಳು ಸದಸ್ಯರ ತಂಡ ರಚಿಸಲು ಪಕ್ಷ ನಿರ್ಧರಿಸಿದೆ. ಪ್ರತಿ ತಂಡದಲ್ಲಿ ಒಬ್ಬ ಸಚಿವರು, ಒಬ್ಬ ಸಂಘಟನಾ ಪ್ರಧಾನ ಕಾರ್ಯದರ್ಶಿ ಹಾಗೂ ಐವರು ಹಿರಿಯ ನಾಯಕರು ಇರಲಿದ್ದಾರೆ.
ಮೋದಿ ಅವರ 25 ವರ್ಷಗಳ ಪಯಣದ ಪ್ರದರ್ಶನ
ಮೋದಿ ಅವರ 25 ವರ್ಷಗಳ ರಾಜಕೀಯ ಪಯಣವನ್ನು ಬಿಂಬಿಸುವ ಛಾಯಾಚಿತ್ರ ಹಾಗೂ ಡಿಜಿಟಲ್ ಪ್ರದರ್ಶನಗಳನ್ನು ದೇಶಾದ್ಯಂತ ಆಯೋಜಿಸಲು ಬಿಜೆಪಿ ಯೋಜಿಸಿದೆ. ಅವರ ಆಡಳಿತ ದಾಖಲೆ, ಅಭಿವೃದ್ಧಿ ಕಾರ್ಯಗಳು ಹಾಗೂ ವಿವಿಧ ಕಲ್ಯಾಣ ಯೋಜನೆಗಳನ್ನು ಪ್ರದರ್ಶನಗಳಲ್ಲಿ ಪರಿಚಯಿಸಲಾಗುತ್ತದೆ.
ಇದರ ಜತೆಗೆ ಉತ್ತಮ ಆಡಳಿತ, ಅಭಿವೃದ್ಧಿ ಹಾಗೂ ಸಮಾಜದ ಹಿಂದುಳಿದ ಮತ್ತು ಅಂಚಿನ ವರ್ಗಗಳ ಉನ್ನತಿಗೆ ಒತ್ತು ನೀಡುವ 'ಅಂತ್ಯೋದಯ' ತತ್ವದ ಕುರಿತು ವಿಚಾರ ಸಂಕಿರಣಗಳು ಹಾಗೂ ಬೌದ್ಧಿಕ ವೇದಿಕೆಗಳನ್ನು ಆಯೋಜಿಸಲಾಗುತ್ತದೆ.
ಯುವಜನರು, ಫಲಾನುಭವಿಗಳೊಂದಿಗೆ ಸಂವಾದ
ಯುವಕರು ಸೇರಿದಂತೆ ಸಮಾಜದ ವಿವಿಧ ವರ್ಗಗಳೊಂದಿಗೆ ಸಂವಾದ ಕಾರ್ಯಕ್ರಮಗಳನ್ನು ನಡೆಸಲು ಬಿಜೆಪಿ ಮುಂದಾಗಿದೆ. ಸಾರ್ವಜನಿಕರೊಂದಿಗೆ ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಸುವ ಸಭೆಗಳನ್ನೂ ಆಯೋಜಿಸಲಾಗುತ್ತದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಕಲ್ಯಾಣ ಯೋಜನೆಗಳ ಕುರಿತು ಮಾಹಿತಿ ನೀಡಲು ವಿಶೇಷ ಶಿಬಿರಗಳನ್ನು ನಡೆಸಲಾಗುತ್ತದೆ. ಈ ಯೋಜನೆಗಳಿಂದ ನಾಗರಿಕರಿಗೆ ಲಭ್ಯವಾಗುವ ಸೌಲಭ್ಯಗಳು ಮತ್ತು ಪ್ರಯೋಜನಗಳ ಕುರಿತು ಫಲಾನುಭವಿಗಳಿಗೆ ಮಾಹಿತಿ ನೀಡಲಾಗುತ್ತದೆ.
ಉತ್ತಮ ಆಡಳಿತ, ಅಭಿವೃದ್ಧಿ ಮತ್ತು 'ಅಂತ್ಯೋದಯ'ದಂತಹ ವಿಷಯಗಳ ಕುರಿತು ಬೌದ್ಧಿಕ ಸಮ್ಮೇಳನಗಳು ಹಾಗೂ ವಿಚಾರ ಸಂಕಿರಣಗಳನ್ನೂ ನಡೆಸಲಾಗುತ್ತದೆ. ಯುವಕರು ಹಾಗೂ ಸಮಾಜದ ವಿವಿಧ ವರ್ಗಗಳ ಜನರು ಸಂವಾದಾತ್ಮಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
2001ರಲ್ಲಿ ಗುಜರಾತ್ ಮುಖ್ಯಮಂತ್ರಿ
ನರೇಂದ್ರ ಮೋದಿ ಅವರು 2001ರ ಅ.7ರಂದು ಗುಜರಾತ್‌ನ 14ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಸುಮಾರು 13 ವರ್ಷಗಳ ಕಾಲ ಗುಜರಾತ್ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಬಳಿಕ ಅವರು ರಾಷ್ಟ್ರ ರಾಜಕಾರಣಕ್ಕೆ ಪ್ರವೇಶಿಸಿದ್ದರು.

