Sunday, 09 May, 8.59 pm ಉದಯವಾಣಿ

ರಾಯಚೂರು
ವೈದ್ಯರ ದಿಟ್ಟ ನಡೆ; ರೋಗಿಗಳಲ್ಲಿ ಆತ್ಮವಿಶ್ವಾಸ ವೃದ್ಧಿ

„ಯಮನಪ್ಪ ಪವಾರ

ಸಿಂಧನೂರು: ಇಲ್ಲಿನ ಸಾರ್ವಜನಿಕ 100 ಹಾಸಿಗೆ ಆಸ್ಪತ್ರೆಯ ವೈದ್ಯರೊಬ್ಬರ ಕೊರೊನಾ ರೋಗಿಗಳ ಆರೈಕೆ ವೈಖರಿ ಮೆಚ್ಚುಗೆಗೆ ಪಾತ್ರವಾಗಿದೆ. ಸ್ವತಃ ತಾವೇ ವೈದ್ಯರಾಗಿಯೂ ರೋಗಿಗಳಲ್ಲಿ ಆತ್ಮವಿಶ್ವಾಸ ತುಂಬಲು ಶ್ರಮಿಸುತ್ತಿರುವ ಪರಿ, ರೋಗಿಗಳ ಮನೋಬಲ ಹೆಚ್ಚಿಸಿದೆ. ನಗರದ ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಆಗಿರುವ ಡಾ| ಹನುಮಂತ ರೆಡ್ಡಿ ಅವರೇ ದಿಟ್ಟ ಹೆಜ್ಜೆ ತುಳಿದವರು.

ರೋಗಿಗಳು ಹಾಗೂ ಸಂಬಂಧಿ ಕರ ಹೆದರಿಕೆ, ಭಯ ಮಿಶ್ರಿತ ವಾತಾವರಣವನ್ನು ಸ್ನೇಹಮಯವಾಗಿಸುವ ನಿಟ್ಟಿನಲ್ಲಿ ತಾವೇ ಮಾದರಿಯಾಗಿದ್ದಾರೆ. ಪರಸ್ಪರ ಪ್ರೀತಿ, ಸ್ನೇಹದಿಂದ ಎದುರುಗೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ಕೋವಿಡ್‌ ವಾರ್ಡ್‌ಗಳಲ್ಲಿ ಸುತ್ತಾಡಿ, ರೋಗಿಗಳಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುತ್ತಿದ್ದಾರೆ. ಇಷ್ಟೇ ಅಲ್ಲ; ರೋಗಿಗಳನ್ನು ಮುಟ್ಟಿ ಮಾತನಾಡಿಸುವ ಮೂಲಕ ಅವರನ್ನು ಕೊರೊನಾ ಸೋಂಕಿತರೆಂಬ ಭೀತಿಯಿಂದಲೇ ಹೊರ ತರುವ ಪ್ರಯತ್ನ ಮಾಡುತ್ತಿದ್ದಾರೆ.

ಸಮಾಜಮುಖೀ ವೈಖರಿ: ರಾಯಚೂರು ಜಿಲ್ಲೆಯಲ್ಲೇ ಇನ್ನು ಹಲವು ತಾಲೂಕು ಸರಕಾರಿ ಆಸ್ಪತ್ರೆಗಳಲ್ಲಿ ಕೋವಿಡ್‌ ರೋಗಿಗಳ ವಾರ್ಡ್‌ಗಳನ್ನು ಆರಂಭಿಸಿಲ್ಲ. ಆರಂಭಿಸಿದರೂ ಅವು 10-15 ಬೆಡ್‌ಗಳಿಗಿಂತಲೂ ಹೆಚ್ಚಿಗೆ ಇಲ್ಲ. ಇದೇ ಮೊದಲ ಬಾರಿಗೆ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ 30 ಬೆಡ್‌ಗಳ ಕೋವಿಡ್‌ ಆಸ್ಪತ್ರೆ ತೆರೆಯಲಾಗಿದೆ. ಜೊತೆಗೆ ಕೋವಿಡ್‌ ವಾರ್ಡ್‌ನ ಇನಾcರ್ಜ್‌ ಆಗಿ ನೇಮಕವಾಗಿರುವ ಮುಖ್ಯ ವೈದ್ಯಾಧಿ ಕಾರಿ ಹನುಮಂತರೆಡ್ಡಿ ಅವರೇ, ಇಡೀ ವಾರ್ಡಿನ ಜವಾಬ್ದಾರಿ ತೆಗೆದುಕೊಂಡು ಸೇವೆ ನಿರ್ವಹಿಸುತ್ತಿದ್ದಾರೆ.

ನಿತ್ಯ ತಮ್ಮದೇ ಆದ ಖಾಸಗಿ ಆಸ್ಪತ್ರೆ ಇಲ್ಲವೇ ಸರಕಾರಿ ಆಸ್ಪತ್ರೆ ಈ ಎರಡು ಕಡೆಗಳಲ್ಲೂ ನಿದ್ರೆಯಿಲ್ಲದೇ ಸುತ್ತಾಡುತ್ತಿರುವ ವೈದ್ಯರು ಬಹುತೇಕ ಕೊರೊನಾ ಸೋಂಕಿತರ ಸೇವೆಗೆ ಅಣಿಯಾದಾಗ ಮಾಸ್ಕ್ ತೆಗೆದು ಅವರಲ್ಲಿ ಆತ್ಮವಿಶ್ವಾಸ ತುಂಬುತ್ತಿದ್ದಾರೆ. ಆರಾಮಾಗಿ ಉಸಿರಾಡಿ: ಕೋವಿಡ್‌ ರೋಗಿಗಳನ್ನು ಒಳಗೊಂಡ ಬರೋಬ್ಬರಿ 100 ಬೆಡ್‌ಗಳನ್ನು ನೋಡಿಕೊಳ್ಳುತ್ತಿರುವ ಡಾ| ಹನುಮಂತರೆಡ್ಡಿ ಅವರು, ಸಭೆ, ಸಮಾರಂಭ, ಸಾರ್ವಜನಿಕ ಪ್ರದೇಶಗಳಲ್ಲಿದ್ದಾಗ ಮಾತ್ರ ಮಾಸ್ಕ್ ಧರಿಸಿರುತ್ತಾರೆ.

ಉಳಿದಂತೆ ತಮ್ಮ ಜವಾಬ್ದಾರಿಯಲ್ಲಿರುವ ಸಾರ್ವಜನಿಕ ಆಸ್ಪತ್ರೆಯ ಕೋವಿಡ್‌ ವಾರ್ಡ್‌ಗೆ ಹೋಗುವಾಗ ಮಾಸ್ಕ್ ಹಾಕಿರುವುದಿಲ್ಲ. ಅವರನ್ನು ಹಿಂಬಾಲಿಸುವ ಬಹುತೇಕರಲ್ಲಿ ಅವರ ನಡೆಯೇ ಬಹುತೇಕ ಕೊರೊನಾ ವಿರುದ್ಧದ ಸಮರಕ್ಕೆ ಅಣಿಗೊಳಿಸುತ್ತದೆ. ಮುಂಜಾಗ್ರತಾ ಕ್ರಮವಾಗಿ ಬಹುತೇಕ ವೈದ್ಯರು ಪಿಪಿಇ ಕಿಟ್‌ ಸಮೇತವೇ ವಾರ್ಡ್‌ಗಳಿಗೆ ಎಂಟ್ರಿ ಕೊಟ್ಟಾಗ ಅವರ ಗುರುತೇ ಸಿಗುವುದಿಲ್ಲ. ಆದರೆ, ಡಾ| ಹನುಮಂತರೆಡ್ಡಿ ಅವರು ಎಂಟ್ರಿ ಕೊಟ್ಟಾಗ ರೋಗಿಗಳು ಹಾಗೂ ಅವರ ಸಂಬಂಧಿ ಕರಲ್ಲಿ ಜೀವನೋತ್ಸಾಹ ಹೆಚ್ಚುತ್ತಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Udayavani
Top