ಛತ್ತೀಸ್ಗಢ: ಒಂದು ಕಾಲದಲ್ಲಿ ಛತ್ತೀಸ್‌ಗಢದ ಬಸ್ತಾರ್‌ನ ದಟ್ಟ ಅರಣ್ಯಗಳಲ್ಲಿ ಬಂದೂಕು ಹಿಡಿದು ನಕ್ಸಲೈಟ್ ಚಳವಳಿಯಲ್ಲಿ ಸಕ್ರಿಯರಾಗಿದ್ದ ಮಾಜಿ ಮಹಿಳಾ ನಕ್ಸಲರು, ಈಗ ಹಿಂಸಾಚಾರದ ಹಾದಿ ತೊರೆದು ಸಮಾಜದ ಮುಖ್ಯವಾಹಿನಿಗೆ ಸೇರ್ಪಡೆಗೊಂಡು ಹೊಸ ಬದುಕಿನ ಭರವಸೆಯೊಂದಿಗೆ ಹೆಜ್ಜೆ ಹಾಕುತ್ತಿದ್ದಾರೆ.
ರಾಷ್ಟ್ರೀಯ ಕೈಮಗ್ಗ ದಿನಾಚರಣೆ-2026ರ ಅಂಗವಾಗಿ ರಾಯ್ಪುರದ ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಸಾಂಪ್ರದಾಯಿಕ ಛತ್ತೀಸ್‌ಗಢಿ ಕೈಮಗ್ಗ ಉಡುಪು ಧರಿಸಿ ರ‍್ಯಾಂಪ್ ವಾಕ್ ಮಾಡಿದರು.
ಕೋಸಾ ಸಿಲ್ಕ್ ಸೇರಿದಂತೆ ಕೈಮಗ್ಗದ ಉಡುಪುಗಳಲ್ಲಿ ಆತ್ಮವಿಶ್ವಾಸದಿಂದ ಹೆಜ್ಜೆ ಹಾಕಿದ ಮಾಜಿ ಮಹಿಳಾ ಮಾವೋವಾದಿಗಳಿಗೆ ಪ್ರೇಕ್ಷಕರಿಂದ ಭರ್ಜರಿ ಮೆಚ್ಚುಗೆ ವ್ಯಕ್ತವಾಯಿತು. ಮುಖ್ಯಮಂತ್ರಿ ವಿಷ್ಣು ದೇವ್ ಸಾಯ್ ಅವರು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಹಿಳೆಯರೊಂದಿಗೆ ಸಂವಾದ ನಡೆಸಿ, ಅವರ ಹೊಸ ಜೀವನಕ್ಕೆ ಶುಭ ಹಾರೈಸಿದರು.
ಇದು ಕೇವಲ ಫ್ಯಾಷನ್ ಶೋ ಆಗಿರದೆ ಪುನರ್ವಸತಿ, ಸಬಲೀಕರಣ ಮತ್ತು ಮುಖ್ಯವಾಹಿನಿಗೆ ಮರಳುವಿಕೆಯ ಸಂಕೇತವಾಗಿ ಗಮನ ಸೆಳೆಯಿತು. ಶಸ್ತ್ರಾಸ್ತ್ರ ತೊರೆದ ಬಳಿಕ ಹಲವರು ವಿವಿಧ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿದ್ದು, ಸಾಮಾಜಿಕ ಚಟುವಟಿಕೆಗಳು ಹಾಗೂ ಹೊಸ ವೃತ್ತಿ ಅವಕಾಶಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಕಾರ್ಯಕ್ರಮದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಾಜಿ ಮಾವೋವಾದಿಗಳ ಈ ಪರಿವರ್ತನೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಇದು ನಿಜವಾದ ಸಬಲೀಕರಣದ ಉದಾಹರಣೆ" ಎಂದು ಕೆಲವರು ಪ್ರತಿಕ್ರಿಯಿಸಿದರೆ, ಸಂಘರ್ಷಪೀಡಿತ ಪ್ರದೇಶಗಳ ಮಹಿಳೆಯರಿಗೆ ಹೊಸ ಅವಕಾಶಗಳು ದೊರೆಯುತ್ತಿರುವುದನ್ನು ಹಲವರು ಶ್ಲಾಘಿಸಿದ್ದಾರೆ.

