Dailyhunt Logo
  • Light mode
    Follow system
    Dark mode
    • Play Story
    • App Story
ವಿದೇಶಾಂಗ ನೀತಿಯ ಗಂಧ-ಗಾಳಿಯೂ ಗೊತ್ತಿಲ್ಲದ ಪಪ್ಪು: ರಾಹುಲ್‌ ವಿರುದ್ಧ ಬಿಜೆಪಿ ಆಕ್ರೋಶ

ವಿದೇಶಾಂಗ ನೀತಿಯ ಗಂಧ-ಗಾಳಿಯೂ ಗೊತ್ತಿಲ್ಲದ ಪಪ್ಪು: ರಾಹುಲ್‌ ವಿರುದ್ಧ ಬಿಜೆಪಿ ಆಕ್ರೋಶ

ವದೆಹಲಿ:ವಿದೇಶಿ ನಾಯಕರನ್ನು ಭೇಟಿಯಾದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಪ್ಪಿಕೊಳ್ಳುವ ಕ್ರಮವನ್ನು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಟೀಕಿಸಿರುವ ಬೆನ್ನಲ್ಲೇ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ.

ವಿದೇಶಾಂಗ ನೀತಿಯ ಕುರಿತು ರಾಹುಲ್‌ ಗಾಂಧಿ ಅವರಿಗೆ ಅರಿವೇ ಇಲ್ಲ ಎಂದು ಆರೋಪಿಸಿರುವ ಬಿಜೆಪಿ, ಅವರ ಭಾಷೆ ಮತ್ತು ರಾಜಕೀಯ ನಡವಳಿಕೆಯ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ ಎಂದು ಟೀಕಿಸಿದೆ.

ದೆಹಲಿಯಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕ್ರಮದಲ್ಲಿ ಮಾತನಾಡಿದ್ದ ರಾಹುಲ್‌ ಗಾಂಧಿ, ವಿದೇಶಿ ನಾಯಕರನ್ನು ಅಪ್ಪಿಕೊಳ್ಳುವುದನ್ನು ವಿದೇಶಾಂಗ ನೀತಿಯ ಭಾಗವೆಂಬಂತೆ ಬಿಂಬಿಸುವುದು ಸರಿಯಲ್ಲ ಎಂದು ವ್ಯಂಗ್ಯವಾಡಿದ್ದರು. 'ತಬ್ಬಿಕೊಳ್ಳುವುದು ವಿದೇಶಾಂಗ ನೀತಿಯಲ್ಲ' ಎಂದು ಹೇಳಿದ್ದರು.

ವಿದೇಶಾಂಗ ನೀತಿಯು ಸ್ನೇಹದ ಸಾರ್ವಜನಿಕ ಪ್ರದರ್ಶನವಲ್ಲ. ಅದು ರಾಷ್ಟ್ರೀಯ ಹಿತಾಸಕ್ತಿಯನ್ನು ಆಧರಿಸಿದ ಕ್ರಮ ಎಂದು ರಾಹುಲ್‌ ಗಾಂಧಿ ಹೇಳಿದ್ದರು. ಪ್ರಧಾನಿ ಮೋದಿ ಅವರು ವೈಯಕ್ತಿಕ ಸನ್ನೆಗಳ ಮೂಲಕ ವಿದೇಶಾಂಗ ನೀತಿಯನ್ನು ನಿಯಂತ್ರಿಸಬಹುದು ಎಂದು ಭಾವಿಸಿದ್ದಾರೆ ಎಂದು ಟೀಕಿಸಿದ್ದರು.

ಇದೇ ವೇಳೆ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ವಿರುದ್ಧವೂ ವಾಗ್ದಾಳಿ ನಡೆಸಿದ್ದ ರಾಹುಲ್‌, ಅವರನ್ನು 'ಹಾಸ್ಯಗಾರರು' ಎಂದು ಟೀಕಿಸಿದ್ದರು. ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ನಾಯಕ ಸಂದೀಪ್‌ ದೀಕ್ಷಿತ್‌ ಅವರನ್ನು ಅಪ್ಪಿಕೊಳ್ಳುವ ಮೂಲಕ ರಾಹುಲ್‌ ಗಾಂಧಿ ಪ್ರಧಾನಿ ಮೋದಿ ಅವರ ರಾಜತಾಂತ್ರಿಕ ಅಪ್ಪುಗೆಗಳನ್ನು ವ್ಯಂಗ್ಯ ಮಾಡಿದ್ದರು.

ಇಂದಿರಾ ಗಾಂಧಿ ವಿಡಿಯೋ ಹಂಚಿಕೊಂಡ ದುಬೆ
ರಾಹುಲ್‌ ಗಾಂಧಿ ಅವರ ಹೇಳಿಕೆಗೆ ಬಿಜೆಪಿ ಸಂಸದ ನಿಶಿಕಾಂತ್‌ ದುಬೆ ತಿರುಗೇಟು ನೀಡಿದ್ದಾರೆ. ಜಾರ್ಖಂಡ್‌ನ ಗೋದ್ಡಾ ಕ್ಷೇತ್ರದ ಸಂಸದರಾಗಿರುವ ದುಬೆ 'ಎಕ್ಸ್‌'ನಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಕ್ಯೂಬಾದ ಕ್ರಾಂತಿಕಾರಿ ಫಿಡೆಲ್‌ ಕ್ಯಾಸ್ಟ್ರೊ ಹಾಗೂ ಪ್ಯಾಲೆಸ್ತೀನ್‌ ನಾಯಕ ಯಾಸರ್‌ ಅರಾಫತ್‌ ಅವರೊಂದಿಗೆ ಇರುವ ಹಳೆಯ ವಿಡಿಯೋ ಹಂಚಿಕೊಂಡಿದ್ದಾರೆ.ಈ ಮೂಲಕ ಗಾಂಧಿ ಕುಟುಂಬದ ಹಿಂದಿನ ರಾಜತಾಂತ್ರಿಕ ನಡೆಗಳನ್ನೇ ಪ್ರಸ್ತಾಪಿಸಿ ರಾಹುಲ್‌ ಗಾಂಧಿ ಅವರ ಟೀಕೆಗೆ ತಿರುಗೇಟು ನೀಡಿದ್ದಾರೆ.

ರಾಹುಲ್‌ ಗಾಂಧಿ ಅವರ ಭಾಷೆ ಹಾಗೂ ರಾಜಕೀಯ ವರ್ತನೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಗೌರವ ತರುವಂತಿದೆ ಎಂದು ಬಿಜೆಪಿ ಆರೋಪಿಸಿದೆ. ದೇಶದ ರಾಜತಾಂತ್ರಿಕ ಸಂಬಂಧಗಳನ್ನು ಆಕ್ಷೇಪಾರ್ಹ ಹಾಗೂ ಅಸಭ್ಯ ಹಾಸ್ಯಕ್ಕೆ ಇಳಿಸುವುದು ರಾಜಕೀಯ ಟೀಕೆಯಲ್ಲ, ಅಪ್ರಬುದ್ಧತೆಯ ಸಂಕೇತ ಎಂದು ಪಕ್ಷ ಹೇಳಿದೆ. ಕರ್ನಾಟಕ ಬಿಜೆಪಿ ಕೂಡ ಎಕ್ಸ್ ನಲ್ಲಿ ವಿಡಿಯೋ ಪೋಸ್ಟ್ ಮಾಡಿ ರಾಹುಲ್ ಗಾಂಧಿ ಅವರನ್ನು ಪಪ್ಪು ಎಂದು ಟೀಕಿಸಿದೆ.

ರಾಹುಲ್‌ ಗಾಂಧಿ ಅವರ ಮಾತು, ಮೌಲ್ಯಗಳು ಹಾಗೂ ರಾಜಕೀಯ ಮನೋಭಾವವನ್ನು ದೇಶದ ಜನರು ಗಮನಿಸುತ್ತಿದ್ದಾರೆ. ಅವರ ಅಹಂಕಾರ, ಅಪಹಾಸ್ಯಭರಿತ ಭಾಷೆ ಮತ್ತು ನಕಾರಾತ್ಮಕ ರಾಜಕೀಯಕ್ಕೆ ಜನತೆ ಮುಂದಿನ ದಿನಗಳಲ್ಲೂ ತಕ್ಕ ಉತ್ತರ ನೀಡಲಿದ್ದಾರೆ ಎಂದು ಬಿಜೆಪಿ ತಿರುಗೇಟು ನೀಡಿದೆ.

Dailyhunt
Disclaimer: This content has not been generated, created or edited by Dailyhunt. Publisher: Udayavani