ಬೆಂಗಳೂರು: ವಿಧಾನ ಪರಿಷತ್ ಉಪಸಭಾಪತಿ ಹುದ್ದೆಗೆ ಕಾಂಗ್ರೆಸ್‌ನ ಹಿರಿಯ ಸದಸ್ಯೆ, ಖ್ಯಾತ ನಟಿ ಉಮಾಶ್ರೀ ಅವರು ಆ.18ರ ಮಂಗಳವಾರ (ಆ.18) ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಎಂ.ಕೆ.ಪ್ರಾಣೇಶ್ ರಾಜೀನಾಮೆಯಿಂದ ಪರಿಷತ್ತಿನ ಉಪಸಭಾಪತಿ ಸ್ಥಾನ ಖಾಲಿಯಾಗಿತ್ತು.
ಉಪಸಭಾಪತಿ ಸ್ಥಾನಕ್ಕಾಗಿ ಆಡಳಿತ ಪಕ್ಷದ ಬಹುಮತ ಇದ್ದಿದ್ದರಿಂದ ಹಾಗೂ ವಿಪಕ್ಷದಿಂದ ಯಾರೂ ನಾಮಪತ್ರ ಸಲ್ಲಿಸದ ಕಾರಣ ಉಮಾಶ್ರೀ ಅವರನ್ನು ಉಪಸಭಾಪತಿಯಾಗಿ ಘೋಷಿಸಲಾಯಿತು.
ಉಮಾಶ್ರೀ ಅವರು ವಿಧಾನಪರಿಷತ್ ಕಾರ್ಯದರ್ಶಿ ಜ್ಯೋತಿ ಅವರಿಗೆ ನಾಮಪತ್ರ ಸಲ್ಲಿಸುವ ವೇಳೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಮೇಲ್ಮನೆ ಸಭಾನಾಯಕ ಯತೀಂದ್ರ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಜತೆಗಿದ್ದರು.
ರಂಗಭೂಮಿ, ಚಲನಚಿತ್ರ, ಕಿರುತೆರೆ ಹಾಗೂ ಸಮಾಜ ಸೇವಾ ಕ್ಷೇತ್ರದಲ್ಲಿ 5 ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ಉಮಾಶ್ರೀ ಅವರು ಕನ್ನಡದ ಪ್ರಮುಖ ಕಲಾವಿದೆ ಹಾಗೂ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದಾರೆ.
ಪ್ರಸ್ತುತ ಅವರು ವಿಧಾನ ಪರಿಷತ್ ಸದಸ್ಯೆಯಾಗಿದ್ದು, ಈ ಹಿಂದೆ ಕರ್ನಾಟಕ ಸರಕಾರದಲ್ಲಿ ಸಚಿವೆಯಾಗಿ ಹಾಗೂ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ.
2023ರಿಂದ ನಾಮನಿರ್ದೇಶಿತ ವಿಧಾನ ಪರಿಷತ್ ಸದಸ್ಯೆಯಾಗಿ ಮುಂದುವರಿದಿದ್ದಾರೆ.
ಸಚಿವೆ ಆಗುವ ಆಸೆ ಇತ್ತು:
ಉಪಸಭಾಪತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಉಮಾಶ್ರೀ ಅವರು ನನಗೆ ಸಹಜವಾಗಿ ರಾಜ್ಯ ಸಚಿವ ಸಂಪುಟದಲ್ಲಿ ಸಚಿವೆಯಾಗುವ ಆಕಾಂಕ್ಷೆ ಇತ್ತು. ಆದರೆ, ನಮ್ಮ ಕಾಂಗ್ರೆಸ್ ಪಕ್ಷ ನನಗೆ ಸಚಿವ ಸ್ಥಾನಕ್ಕಿಂತಲೂ ಅತ್ಯಂತ ಉನ್ನತವಾದ ಸಾಂವಿಧಾನಿಕ ಸ್ಥಾನವನ್ನು ಗೌರವದಿಂದ ನೀಡಿದೆ. ಹಾಗಾಗಿ ನನಗೆ ಈ ಸ್ಥಾನ ಸಿಕ್ಕಿದ್ದಕ್ಕೆ ಅತ್ಯಂತ ತೃಪ್ತಿಯಿದೆ ಎಂದು ಹೇಳಿದರು.
ನನಗೆ ಈ ಮಹತ್ವದ ಜವಾಬ್ದಾರಿ ನೀಡಿದ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬಿ.ಕೆ. ಹರಿಪ್ರಸಾದ್ ಹಾಗೂ ಮುಖ್ಯಮಂತ್ರಿಗಳಿಗೆ ಧನ್ಯವಾದ ಸಲ್ಲಿಸುತ್ತೇನೆ. 'ಪಕ್ಷ ಮತ್ತು ಸದನ ನನ್ನ ಮೇಲಿಟ್ಟಿರುವ ನಿರೀಕ್ಷೆಗೆ ತಕ್ಕಂತೆ ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸಿಕೊಂಡು ಹೋಗುತ್ತೇನೆ' ಎಂದು ತಿಳಿಸಿದರು.

